ಢಾಕಾ: ವಯೋಸಹಜ ಕಾಯಿಲೆಯಿಂದ ಮಂಗಳವಾರ ನಿಧನರಾದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಹಾಗೂ ಬಿಎನ್‌ಪಿ ಪಕ್ಷದ ನಾಯಕಿ ಬೇಗಂ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ಬುಧವಾರ ಢಾಕಾಗೆ ಆಗಮಿಸಿದ್ದಾರೆ.
ಇಂದು ಢಾಕಾದಲ್ಲಿ ಖಲೀದಾ ಜಿಯಾ ಅವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ ಜೈಶಂಕರ್, ಬಿಎನ್‌ಪಿ ಹಂಗಾಮಿ ಅಧ್ಯಕ್ಷೆ ತಾರಿಕ್ ರೆಹಮಾನ್ ಅವರಿಗೆ ಪ್ರಧಾನಿ ಮೋದಿ ಅವರು ಬರೆದ ಸಂತಾಪ ಸೂಚಕ ಪತ್ರವನ್ನು ಹಸ್ತಾಂತರಿಸಿದರು.
"ಢಾಕಾಗೆ ಆಗಮಿಸಿದ ನಂತರ ಬಿಎನ್‌ಪಿ ಹಂಗಾಮಿ ಅಧ್ಯಕ್ಷೆ ಮತ್ತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ" ಎಂದು ಜೈಶಂಕರ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ವೈಯಕ್ತಿಕ ಪತ್ರವನ್ನು ತಾರಿಕ್ ರೆಹಮಾನ್ ಅವರಿಗೆ ಹಸ್ತಾಂತರಿಸಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಭಾರತ ಸರ್ಕಾರ ಮತ್ತು ಜನರ ಪರವಾಗಿ ಆಳವಾದ ಸಂತಾಪ ವ್ಯಕ್ತಪಡಿಸಲಾಯಿತು" ಎಂದು ಜೈಶಂಕರ್ ತಿಳಿಸಿದ್ದಾರೆ.
"ಬೇಗಂ ಖಲೀದಾ ಜಿಯಾ ಅವರ ದೃಷ್ಟಿಕೋನ ಮತ್ತು ಮೌಲ್ಯಗಳು ನಮ್ಮ ಪಾಲುದಾರಿಕೆಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತವೆ" ಎಂದು ಅವರು ಹೇಳಿದರು.
ಖಲೀದಾ ನಿಧನಕ್ಕೆ 3 ದಿನ ಶೋಕಾಚರಣೆ
ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ ಬೆನ್ನಲ್ಲೆ, ಬಾಂಗ್ಲಾದೇಶದಲ್ಲಿ 3 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಯುನಸ್ ನೇತೃತ್ವ ಮಧ್ಯಂರತ ಸರ್ಕಾರ ಘೊಷಣೆ ಮಾಡಿದೆ.
ಇನ್ನು, ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಢಾಕಾದ ರಾಷ್ಟ್ರೀಯ ಸಂಸತ್ತಿನ ದಕ್ಷಿಣ ಪ್ಲಾಜಾದಲ್ಲಿ ನಡೆಯಲಿದ್ದು, ಸಕಲ ಸರ್ಕಾರಿ ಗೌರವಗಳ ನೆರವೇರಿಸಲಾಗುತ್ತದೆ.