ವಾಷಿಂಗ್ಟನ್: ಭಾರತದಲ್ಲಿ ಚುನಾವಣೆಗಾಗಿ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕಾ ಸಂಸ್ಥೆ(USAID) ನೀಡಿದ 21 ಮಿಲಿಯನ್ ಡಾಲರ್ ನಿಧಿಯನ್ನು ಪ್ರಶ್ನೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆರ್ಥಿಕ ನೆರವು ಸಂಸ್ಥೆಯು ಚುನಾವಣಾ ಹಸ್ತಕ್ಷೇಪಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಮಿಯಾಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ತಮ್ಮ ಸರ್ಕಾರ ನಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡರು, ಇದು ಬೇರೊಬ್ಬರನ್ನು ಆಯ್ಕೆ ಮಾಡಲು ಉದ್ದೇಶಿಸಿತ್ತು ಎಂದು ಸಂದೇಹ ವ್ಯಕ್ತಪಡಿಸಿದ ಅವರು ಅಮೆರಿಕಾದ ಚುನಾವಣೆಗಳಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಭಾರತದಲ್ಲಿ ಚುನಾವಣೆಗೆ ನಾವು 21 ಮಿಲಿಯನ್ ಡಾಲರ್ ಏಕೆ ಖರ್ಚು ಮಾಡಬೇಕಾಗಿದೆ, ಅವರು ಬೇರೊಬ್ಬರನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ನಾವು ಭಾರತ ಸರ್ಕಾರಕ್ಕೆ ಹೇಳಬೇಕಾಗಿದೆ. ರಷ್ಯಾ ನಮ್ಮ ದೇಶದಲ್ಲಿ ಸುಮಾರು ಎರಡು ಸಾವಿರ ಡಾಲರ್ ಖರ್ಚು ಮಾಡಿದೆ ಎಂದು ನಾವು ಕೇಳಿದಾಗ, ಅದು ದೊಡ್ಡ ಮೊತ್ತವಾಗಿತ್ತು. ಅವರು ಎರಡು ಸಾವಿರ ಡಾಲರ್‌ಗಳಿಗೆ ಕೆಲವು ಇಂಟರ್ನೆಟ್ ಜಾಹೀರಾತುಗಳನ್ನು ತೆಗೆದುಕೊಂಡರು ಎಂದು ಆರೋಪಿಸಿದರು.
ಭಾರತದಲ್ಲಿ ಮತದಾರರ ಮತದಾನದ ಪ್ರಯತ್ನಗಳಿಗೆ 21 ಮಿಲಿಯನ್ ಡಾಲರ್ ನಿಧಿಯನ್ನು ನಿಲ್ಲಿಸುವ ಎಲೋನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ (DOGE) ನಿರ್ಧಾರವನ್ನು ಸಮರ್ಥಿಸಿಕೊಂಡ ನಂತರ ಅಮೆರಿಕ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ.
ಮಾರ್-ಎ-ಲಾಗೊದಲ್ಲಿ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವಾಗ ಟ್ರಂಪ್, ಭಾರತದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು 21 ಮಿಲಿಯನ್ ಯುಎಸ್ ಡಾಲರ್ ಹಣ ನಾವು ಏಕೆ ನೀಡಬೇಕು, ಅವರಿಗೆ ಅಲ್ಲಿ ಬಹಳಷ್ಟು ಹಣ ಇದೆ. ನಮ್ಮ ವಿಷಯದಲ್ಲಿ ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ. ಅವರ ಸುಂಕಗಳು ತುಂಬಾ ಹೆಚ್ಚಾಗಿದೆ ಎಂದಿದ್ದರು.
ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕದ ನೆರವಿನಲ್ಲಿ ಭಾರತದ ಪಾಲು ಪಾಕಿಸ್ತಾನದ 970 ಮಿಲಿಯನ್ ಗಿಂತ ಶೇಕಡಾ 35ರಷ್ಟು ಕಡಿಮೆಯಾಗಿದೆ ಮತ್ತು ಅದೇ ಅವಧಿಯಲ್ಲಿ ಚೀನಾದ 49.7 ಮಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕ ಭಾರತಕ್ಕೆ 720 ಮಿಲಿಯನ್ ಡಾಲರ್ ಸಹಾಯವನ್ನು ಒದಗಿಸಿದೆ, ಅದರಲ್ಲಿ ಶೇಕಡಾ 64ರಷ್ಟು ಆರೋಗ್ಯ ಉಪಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ.
ಫೆಬ್ರವರಿ 16 ರಂದು, ಎಲೋನ್ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ (DOGE) ಯುಎಸ್ ತೆರಿಗೆದಾರರ ಹಣವನ್ನು ಖರ್ಚು ಮಾಡಲಿರುವ ವಸ್ತುಗಳನ್ನು ಪಟ್ಟಿ ಮಾಡಿತು. ಪಟ್ಟಿಯಲ್ಲಿ ಭಾರತದಲ್ಲಿ ಮತದಾನಕ್ಕಾಗಿ USD 21 ಮಿಲಿಯನ್ ಡಾಲರ್ ಎಂದು ಹೇಳಿದೆ.
ಏನಿದು USDAI?
ಆರೇಳು ದಶಕಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದ ಅಮೆರಿಕದ ಯುಎಸ್ಏಡ್ (USAID) ಸಂಸ್ಥೆ ಈಗ ವಿವಾದದ ಕೇಂದ್ರವಾಗಿದೆ, ಎಲೋನ್ ಮಸ್ಕ್ ನೇತೃತ್ವದಲ್ಲಿ ರಚನೆಯಾಗಿರುವ ಡೋಜೆ ಇಲಾಖೆ (DOGE) ಯುಎಸ್ಏಡ್ನಿಂದ ವಿದೇಶಗಳಿಗೆ ನೀಡಲಾದ ಧನಸಹಾಯಗಳ ಪಟ್ಟಿಯನ್ನು ಪ್ರಕಟಿಸಿ, ಆ ನೆರವನ್ನು ನಿಲ್ಲಿಸಿದೆ. ಡೊನಾಲ್ಡ್ ಟ್ರಂಪ್ ಅವರು ಯುಎಸ್ಏಡ್ ಸಂಸ್ಥೆಯನ್ನು ಒಂದು ಪಕ್ಕಾ ಕ್ರಿಮಿನಲ್ ಸಂಘಟನೆ ಎಂದು ಕರೆದಿದ್ದಾರೆ. ಅಮೆರಿಕದ ತೆರಿಗೆ ಪಾವತಿದಾರರ ಹಣವನ್ನು ಇದು ದುರುಪಯೋಗಪಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಹಿಂದಿನ ಬೈಡನ್ ಸರ್ಕಾರ ಭಾರತೀಯ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು 21 ಮಿಲಿಯನ್ ಡಾಲರ್ ಹಣದ ನೆರವು ಘೋಷಿಸಿದ್ದರ ಔಚಿತ್ಯವನ್ನು ಪ್ರಶ್ನಿಸಿದ ಟ್ರಂಪ್, ಇದು ಮೋದಿ ಸರ್ಕಾರವನ್ನು ಬದಲಿಸುವ ಪಿತೂರಿಯಾಗಿದ್ದಿರಬಹುದು ಎಂದು ಸಂದೇಹಿಸಿದ್ದಾರೆ.
USAID ಎಂದರೆ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ನ ಸಂಕ್ಷಿಪ್ತ ರೂಪ. ಹೆಸರೇ ಹೇಳುವಂತೆ ಇದು ಅಂತಾರಾಷ್ಟ್ರೀಯ ಅಭಿವೃದ್ಧಿಗೆ ಇರುವ ಅಮೆರಿಕದ ಒಂದು ಏಜೆನ್ಸಿ.