ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವು ಹೊಸ ರೀತಿಯ ಗೋಲ್ಡನ್ ವೀಸಾ ಪರಿಚಯಿಸಿದ್ದು, ಇದು ದುಬೈನಲ್ಲಿ ಆಸ್ತಿ ಖರೀದಿ ಅಥವಾ ವ್ಯವಹಾರದಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಪ್ರಸ್ತುತ ಗೋಲ್ಡನ್ ವೀಸಾಗಿಂತ ಭಿನ್ನವಾಗಿದೆ ಮತ್ತು ಕೆಲವು ಷರತ್ತುಗನ್ನು ಒಳಗೊಂಡಿದೆ.
ಇಲ್ಲಿಯವರೆಗೆ, ದುಬೈನ ಗೋಲ್ಡನ್ ವೀಸಾ ಪಡೆಯಲು ಭಾರತೀಯರು ಕನಿಷ್ಠ ಎರಡು ಮಿಲಿಯನ್ ದಿರ್ಹಮ್( ಅಂದರೆ 4.66 ಕೋಟಿ ರೂ.) ಮೌಲ್ಯದ ಆಸ್ತಿ ಖರೀದಿ ಮಾಡಬೇಕಿತ್ತು. ಇಲ್ಲವೆ ಆ ದೇಶದಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಬೇಕಾಗಿತ್ತು.
ಈಗ ಯುಎಇ ಸರ್ಕಾರ ಈ ಷರತ್ತುಗಳನ್ನು ತೆಗೆದು ಹಾಕಿದ್ದು, ಹೊಸ ನಾಮನಿರ್ದೇಶನ ಆಧಾರಿತ ವೀಸಾ ನೀತಿಯಡಿಯಲ್ಲಿ, ಭಾರತೀಯರು ಈಗ ಸುಮಾರು 23.30 ಲಕ್ಷ ರೂ. ಶುಲ್ಕ ಪಾವತಿಸಿ, ಜೀವಿತಾವಧಿಯ ಗೋಲ್ಡನ್ ವೀಸಾ ಪಡೆಯಬಹುದು.
ಮೂರು ತಿಂಗಳಲ್ಲಿ 5,000 ಕ್ಕೂ ಹೆಚ್ಚು ಭಾರತೀಯರು ಈ ನಾಮನಿರ್ದೇಶನ ಆಧಾರಿತ ವೀಸಾಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಯುಎಇ ಆಡಳಿತ ಹೇಳಿದೆ. ಅಮೆರಿಕದ ಗೋಲ್ಡ್ ವೀಸಾ ದುಬಾರಿಯಾಗಿದ್ದು, ಇದಕ್ಕೆ ಹೋಲಿಸಿದರೆ ಯುಎಇ ಗೋಲ್ಡನ್ ವೀಸಾ ಕೈಗೆಟಕುವ ದರದಲ್ಲಿದೆ.
ಈ ವೀಸಾದ ಪೈಲಟ್ ಯೋಜನೆಗೆ ಮೊದಲ ಹಂತದಲ್ಲಿ ಭಾರತ ಮತ್ತು ಬಾಂಗ್ಲಾದೇಶವನ್ನು ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾದ ಆರಂಭಿಕ ರೂಪವನ್ನು ಪರೀಕ್ಷಿಸಲು ರಾಯದ್ ಗ್ರೂಪ್ ಎಂಬ ಸಲಹಾ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.
ಭಾರತೀಯರು ಯುಎಇಯ ಗೋಲ್ಡನ್ ವೀಸಾ ಪಡೆಯಲು ಇದು ಒಂದು ಸುವರ್ಣ ಅವಕಾಶ ಎಂದು ರಾಯದ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ರಾಯದ್ ಕಮಲ್ ಅಯೂಬ್ ಅವರು ಹೇಳಿದ್ದಾರೆ.
ಈ ಗೋಲ್ಡನ್ ವೀಸಾಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರ ಹಿನ್ನೆಲೆಯನ್ನು ನಾವು ಮೊದಲು ಪರಿಶೀಲಿಸುತ್ತೇವೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಮತ್ತು ಕ್ರಿಮಿನಲ್ ದಾಖಲೆ ಪರಿಶೀಲನೆಗಳು ಹಾಗೂ ಅವರ ಸಾಮಾಜಿಕ ಮಾಧ್ಯಮ ಸೇರಿವೆ, ”ಎಂದು ರಾಯದ್ ಕಮಲ್ ತಿಳಿಸಿದ್ದಾರೆ.