ಕೌಲಾಲಂಪುರ: ದೇಗುಲಕ್ಕೆ ಬಂದಿದ್ದ ಮಿಸ್ಗ್ರ್ಯಾಂಡ್ ಮಲೇಷ್ಯಾ 2021 ವಿಜೇತೆ Lishalliny Kanaranಗೆ ಪೂಜಾರಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ರೂಪದರ್ಶಿಯೊಬ್ಬರು ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ದೇಗುಲದ ಪೂಜಾರಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಭಾರತ ಮೂಲದ ನಟಿ ಹಾಗೂ ದೂರದರ್ಶನ ನಿರೂಪಕಿ ಹಾಗೂ ಮಿಸ್ಗ್ರ್ಯಾಂಡ್ ಮಲೇಷ್ಯಾ 2021 ವಿಜೇತೆ ಲಿಶಾಲ್ಲಿನಿ ಕನರನ್(Lishalliny Kanaran) ಈ ವಿಚಾರವನ್ನುತಮ್ಮ ಇನ್ ಸ್ಟಾಗ್ರಾಮ್ ಬಹಿರಂಗ ಪಡಿಸಿದ್ದಾರೆ. ಮಾತ್ರವಲ್ಲದೇ ಪೂಜಾರಿ ವಿರುದ್ಧ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.
ಇದೀಗ ರೂಪದರ್ಶಿ ಲಿಶಾಲ್ಲಿನಿ ಕನರನ್ ನೀಡಿರುವ ದೂರಿನ ಅನ್ವಯ ಪೊಲೀಸರು ಲೈಂಗಿಕ ಕಿರುಕುಳ ನೀಡಿದ ಪೂಜಾರಿಗಾಗಿ ಶೋಧ ನಡೆಸಿದ್ದಾರೆ.
ಆಗಿದ್ದೇನು?
ಇತ್ತೀಚೆಗೆ ರೂಪದರ್ಶಿ ಲಿಶಾಲ್ಲಿನಿ ಕನರನ್ ತಾವು ಯಾವಾಗಲೂ ಭೇಟಿ ನೀಡುತ್ತಿದ್ದ ಮಲೇಷ್ಯಾದ ಸೆಪಾಂಗ್ನಲ್ಲಿರುವ ಮಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಈಕೆಯನ್ನು ನೋಡಿದ ಪೂಜಾರಿ ವಿಶೇಷ ಪೂಜೆ ನೆಪದಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ರೂಪದರ್ಶಿಯ ಎದೆಗೆ ಕೈಹಾಕಿ, ಏಕಾಂತ ಸೇವೆ ನೆಪದಲ್ಲಿ ಆಕೆಯ ಬಟ್ಟೆ ಬಿಚ್ಟಲು ಸೂಚಿಸಿದ್ದಾನೆ. ಇದಕ್ಕೆ ರೂಪದರ್ಶಿ ಒಪ್ಪದಿದ್ದಾಗ ಆಕೆಯನ್ನು ನಿಂದಿಸಿದ್ದಾನೆ ಎಂದು ಹೇಳಲಾಗಿದೆ.
ಪೋಸ್ಟ್ ನಲ್ಲಿ ಲಿಶಾಲ್ಲಿನಿ ಕನರನ್ ಹೇಳಿದ್ದೇನು?
ನಾನು ತುಂಬಾ ಧಾರ್ಮಿಕ ವ್ಯಕ್ತಿತ್ವದವಳು. ನನ್ನ ತಾಯಿ ಭಾರತಕ್ಕೆ ತೆರಳಿರುವುದರಿಂದ ನಾನು ಒಬ್ಬಳೇ ಮಲೇಷ್ಯಾದ ಸೆಂಪಾಂಗ್ ನಲ್ಲಿರುವ ಮಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ದೇವಾಲಯದ ಆಚರಣೆಗಳ ಪರಿಚಯವಿಲ್ಲದ ಕಾರಣ, ನಾನು ಸಾಮಾನ್ಯವಾಗಿ ಮಾರ್ಗದರ್ಶನಕ್ಕಾಗಿ ಅರ್ಚಕರನ್ನು ಅವಲಂಬಿಸಿದ್ದೆ. ಆದರೆ ಈ ಭೇಟಿ ಸಮಯದಲ್ಲಿ ಪೂಜಾರಿ ಪವಿತ್ರ ನೀರು ಮತ್ತು ರಕ್ಷಣಾತ್ಮಕ ದಾರ ನೀಡುವುದಾಗಿ ಹೇಳಿದರು. ನಾನು ನನ್ನ ಪ್ರಾರ್ಥನೆ ಪೂರ್ಣಗೊಳಿಸಿದ ನಂತರ ಸುಮಾರು 90 ನಿಮಿಷಗಳ ಕಾದೆ. ನಂತರ ಪೂಜಾರಿ ಆಶೀರ್ವಾದಕ್ಕಾಗಿ ಖಾಸಗಿ ಕಚೇರಿಗೆ ಬಾ ಎಂದು ನನ್ನನ್ನು ಹಿಂಬಾಲಿಸು ಎಂದ.
ನಾನೂ ಕೂಡ ಒಳಗೆ ಹೋದೆ. ಈ ವೇಳೆ ಪೂಜಾರಿ ಒಂದು ಸುವಾಸನೆ ಭರಿತ ನೀರನ್ನು ತೋರಿಸಿ ಇದು ಭಾರತದಿಂದ ಬಂದ ಪವಿತ್ರ ನೀರು.. ಸಾಮಾನ್ಯ ಜನರಿಗೆ ಇದನ್ನು ನೀಡುವುದಿಲ್ಲ ಎಂದು ಗುಲಾಬಿ ಸಾರ ಇರುವ ನೀರನ್ನು ಮೈಮೇಲೆ ಎರಚಿದರು. ನೀರಿನ ಗಾಢತೆಯಿಂದಾಗಿ ಕಣ್ಮು ತೆರೆಲಾಗಲಿಲ್ಲ. ಈ ವೇಳೆ ಪೂಜಾರಿ ನನ್ನ ಎದೆಯೊಳಗೆ ಕೈಹಾಕಿ ನಾನು ಧರಿಸಿದ್ದ ಪಂಜಾಬಿ ಡ್ರೆಸ್ ತೆಗೆಯುವಂತೆ ಹೇಳಿದೆ. ಈ ವೇಳೆ ನಾನು ಡ್ರೆಸ್ ಟೈಟ್ ಇದೆ ಎಂದು ಡ್ರೆಸ್ ತೆರೆಯಲು ವಿರೋಧಿಸಿದೆ. ಈ ವೇಳೆ ಕೋಪಗೊಂಡ ಪೂಜಾರಿ ದೇಗುಲಕ್ಕೆ ಬಂದಾಗ ಇಂತಹ ಟೈಟ್ ಡ್ರೆಸ್ ಗಳನ್ನು ಧರಿಸಬಾರದು ಎಂದು ಗದರಿದ. ಬಳಿಕ ನನ್ನ ತಲೆ ಮೇಲೆ ಕೈ ಇಟ್ಟು ಬ್ಲೌಸ್ ನೊಳಗೆ ಕೈಹಾಕಿದ ಎಂದು ಬರೆದುಕೊಂಡಿದ್ದಾರೆ.
ತಾಯಿಗೆ ವಿಷಯ ತಿಳಿಸಿ ಪೊಲೀಸ್ ದೂರು ದಾಖಲು
ಇನ್ನು ತನಗಾದ ಲೈಂಗಿಕ ದೌರ್ಜನ್ಯದ ಕುರಿತು ಯಾರಿಗೂ ಹೇಳದ ರೂಪದರ್ಶಿ ಬಳಿಕ ತನ್ನ ತಾಯಿ ಭಾರತದಿಂದ ಬಂದ ಬಳಿಕ ಆಕೆಗೆ ನಡೆದ ಎಲ್ಲ ಘಟನೆಗಳನ್ನು ವಿವರಿಸಿದ್ದಾರೆ. ಬಳಿಕ ತಾಯಿಯೊಂದಿಗೆ ಸೇರಿ ಸೆಪಾಂಗ್ ಜಿಲ್ಲಾ ಪೊಲೀಸರಿಗೆ ಜುಲೈ.4 ರಂದು ದೂರು ನೀಡಿದ್ದಾರೆ.
ಭಾರತ ಮೂಲದ ಪೂಜಾರಿ
ಇನ್ನು ಪ್ರಕರಣ ಸಂಬಂಧ ದೂರುದಾಖಲಿಸಿಕೊಂಡಿರುವ ಸೆಂಪಾಂಗ್ ಪೊಲೀಸರು ಪರಾರಿಯಾಗಿರುವ ಪೂಜಾರಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಸೆಪಾಂಗ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸಿಪಿ ನೋರ್ಹಿಜಮ್ ಬಹಮನ್, 'ಶಂಕಿತನು ಭಾರತೀಯ ಪ್ರಜೆ ಎಂದು ನಂಬಲಾಗಿದೆ, ದೇವಾಲಯದ ನಿವಾಸಿ ಪೂಜಾರಿ ಅನುಪಸ್ಥಿತಿಯಲ್ಲಿ ತಾತ್ಕಾಲಿಕವಾಗಿ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ. ಅನುಮಾನಿತನು ಸಂತ್ರಸ್ಥೆಯ ಮುಖ ಮತ್ತು ದೇಹದ ಮೇಲೆ ಪವಿತ್ರ ನೀರನ್ನು ಸಿಂಪಡಿಸಿದ್ದ. ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ ಎಂದು ಹೇಳಿದ್ದಾರೆ.