ಕರಾಚಿ: ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಬಂಡುಕೋರರ ದಾಳಿ ಮುಂದುವರೆದಿದ್ದು, ಈ ಬಾರಿ 9 ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಝೋಬ್ ಜಿಲ್ಲೆಯ ಸುರ್-ಡಕೈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರಯಾಣಿಕರ ಬಸ್‌ಗಳಿಂದ ಪಂಜಾಬ್‌ನ ಒಂಬತ್ತು ಪ್ರಯಾಣಿಕರನ್ನು ಇಳಿಸಿದ ನಂತರ ಬಲೂಚ್ ಬಂಡುಕೋರರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಆಯುಕ್ತ ಝೋಬ್ ನವೀದ್ ಆಲಂ, 'ಸಶಸ್ತ್ರ ಬಂಡುಕೋರರು ಪಂಜಾಬ್‌ಗೆ ಹೋಗುವ ಎರಡು ಬಸ್‌ಗಳನ್ನು ತಡೆದು ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಒಂಬತ್ತು ಪ್ರಯಾಣಿಕರನ್ನು ಇಳಿಸಿ ಗುಂಡು ಹಾರಿಸಿದ್ದಾರೆ. ಎರಡೂ ಬಸ್ ಗಳಿಂದ ಅಪಹರಿಸಲಾದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಅವರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಒಂಬತ್ತು ಜನರು ಪಂಜಾಬ್ ಪ್ರಾಂತ್ಯದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ ಎಂದು ಹೇಳಿದರು.
ಅಂತೆಯೇ ನಾವು ಒಂಬತ್ತು ಶವಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆ ಪ್ರಕ್ರಿಯೆಗಳಿಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಭದ್ರತಾ ಪಡೆಗಳು ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಘಟನೆ ಪ್ರಾಂತ್ಯದ ಝೋಬ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಅಲಂ ಹೇಳಿದ್ದಾರೆ.
ಹೊಣೆ ಹೊತ್ತ ಬಿಎಲ್ಎಫ್
ಇನ್ನು ಈ ದಾಳಿಯ ಹೊಣೆಯನ್ನು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಕುಖ್ಯಾತಿ ಗಳಿಸಿರುವ ನಿಷೇಧಿತ ಸಂಘಟನೆಯಾದ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLF) ಹೊತ್ತುಕೊಂಡಿದೆ. ಬಲೂಚಿಸ್ತಾನದಾದ್ಯಂತ 71 ದಾಳಿಗಳಿಗೆ ಬಿಎಲ್‌ಎ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ, ಪಾಕಿಸ್ತಾನದಿಂದ ಕದನ ವಿರಾಮದ ಬಗ್ಗೆ ಬರುವ ಪ್ರತಿಯೊಂದು ಮಾತು 'ವಂಚನೆ' ಎಂದು ಅದು ಹೇಳುತ್ತದೆ
ಬಂಡುಕೋರರು ಎಲ್ಲೇ ಅಡಗಿದ್ದರೂ ಬಿಡುವುದಿಲ್ಲ
ಒಂಬತ್ತು ಪ್ರಯಾಣಿಕರ ಹತ್ಯೆಯನ್ನು ಖಂಡಿಸಿದ ಬಲೂಚಿಸ್ತಾನದ ಮುಖ್ಯಮಂತ್ರಿ ಮೀರ್ ಸರ್ಫರಾಜ್ ಬುಗ್ತಿ, ಗುರುತಿನ ಆಧಾರದ ಮೇಲೆ ಅಮಾಯಕರನ್ನು ಕೊಲ್ಲುವುದು "ಕ್ಷಮಿಸಲಾಗದ ಅಪರಾಧ" ಎಂದು ಕಿಡಿಕಾರಿದರು. ಅಲ್ಲದೆ "ಭಯೋತ್ಪಾದಕರು ತಾವು ಮನುಷ್ಯರಲ್ಲ, ಹೇಡಿತನದ ಮೃಗಗಳೆಂದು ಸಾಬೀತುಪಡಿಸಿದ್ದಾರೆ. ಬಲೂಚಿಸ್ತಾನದ ನೆಲದಲ್ಲಿ ಅಮಾಯಕರ ರಕ್ತ ವ್ಯರ್ಥವಾಗುವುದಿಲ್ಲ. ಈ ಕೊಲೆಗಾರರು ಭೂಗತದಲ್ಲಿಯೂ ಅಡಗಿಕೊಳ್ಳಲು ನಾವು ಬಿಡುವುದಿಲ್ಲ" ಎಂದು ಹೇಳಿದರು.
ದಾಳಿ ಇದೇ ಮೊದಲೇನಲ್ಲ
ಇನ್ನು ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ದೀರ್ಘಕಾಲದ ಹಿಂಸಾತ್ಮಕ ದಂಗೆಗೆ ನೆಲೆಯಾಗಿದ್ದು, ಬಲೂಚಿಸ್ತಾನ ಬಂಡುಕೋರರ ಕೈ ಇಲ್ಲಿ ಮೇಲಾಗಿದೆ. ಬಂಡುಕೋರರು ಪಂಜಾಬ್ ಪ್ರಾಂತ್ಯದ ಜನರನ್ನು ಮತ್ತು ಬಲೂಚಿಸ್ತಾನದ ವಿವಿಧ ಹೆದ್ದಾರಿಗಳಲ್ಲಿ ಚಲಿಸುವ ಪ್ರಯಾಣಿಕ ಬಸ್‌ಗಳನ್ನು ಗುರಿಯಾಗಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ ಕ್ವೆಟ್ಟಾ, ಲೊರಾಲೈ ಮತ್ತು ಮಸ್ತಂಗ್‌ನಲ್ಲಿ ದಂಗೆಕೋರರು ಇತರ ಮೂರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾರೆ, ಆದರೆ ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಭದ್ರತಾ ಪಡೆಗಳು ಈ ದಾಳಿಗಳನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ.
ಬಲೂಚಿಸ್ತಾನ್ ಮಾಧ್ಯಮಗಳಲ್ಲಿನ ದೃಢೀಕರಿಸದ ವರದಿಗಳ ಪ್ರಕಾರ, ದಂಗೆಕೋರರು ರಾತ್ರಿಯ ಸಮಯದಲ್ಲಿ ಪ್ರಾಂತ್ಯದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಮತ್ತು ಚೆಕ್ ಪೋಸ್ಟ್‌ಗಳು, ಸರ್ಕಾರಿ ಸ್ಥಾಪನೆಗಳು, ಪೊಲೀಸ್ ಠಾಣೆಗಳು, ಬ್ಯಾಂಕುಗಳು ಮತ್ತು ವಾಚ್ ಟವರ್ ಗಳ ಮೇಲೆ ದಾಳಿ ಮಾಡುವ ಮೂಲಕ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡತೊಡಗಿದ್ದಾರೆ. ಬಲೂಚ್ ದಂಗೆಕೋರ ಗುಂಪುಗಳು ಆಗಾಗ್ಗೆ ಭದ್ರತಾ ಸಿಬ್ಬಂದಿ, ಸರ್ಕಾರಿ ಯೋಜನೆಗಳು ಮತ್ತು ಈ ತೈಲ ಮತ್ತು ಖನಿಜ-ಸಮೃದ್ಧ ಪ್ರಾಂತ್ಯದಲ್ಲಿ 60 ಬಿಲಿಯನ್ ಯುಎಸ್ ಡಾಲರ್ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿವೆ.
ಈ ಹಿಂದೆ ಮಾರ್ಚ್‌ನಲ್ಲಿ, ಗ್ವಾದರ್ ಬಂದರಿನ ಬಳಿಯ ಕಲ್ಮತ್ ಪ್ರದೇಶದಲ್ಲಿ ಲಾಂಗ್ ಬಾಡಿ ಟ್ರೇಲರ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಐದು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಫೆಬ್ರವರಿಯಲ್ಲಿ, ದಂಗೆಕೋರರು ಪಂಜಾಬ್ ಪ್ರಾಂತ್ಯಕ್ಕೆ ಸೇರಿದ ಏಳು ಪ್ರಯಾಣಿಕರನ್ನು ಇಳಿಸಿ ಬರ್ಖಾನ್ ಪ್ರದೇಶದಲ್ಲಿ ಸ್ಥಳದಲ್ಲೇ ಕೊಂದು ಹಾಕಿದ್ದರು.