ಕ್ಯಾಲಿಫೋರ್ನಿಯಾ: ಪಾಕಿಸ್ತಾನದ ಐಎಸ್ ಐ ಜೊತೆಗೆ ಸಂಪರ್ಕ ಹೊಂದಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಭಾರತದಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಪವಿತ್ತರ್ ಸಿಂಗ್ ಬಟಾಲಾ ಅವರನ್ನು ಕ್ಯಾಲಿಫೋರ್ನಿಯಾದಲ್ಲಿ ಎಫ್‌ಬಿಐ ಬಂಧಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇತರ ಏಳು ಮಂದಿಯೊಂದಿಗೆ ಬಟಾಲಾ ಅವರನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.ಬಂಧಿತರಲ್ಲಿ ಬಟಾಲಾ ಜೊತೆಗೆ ದಿಲ್‌ಪ್ರೀತ್ ಸಿಂಗ್, ಅರ್ಶ್‌ಪ್ರೀತ್ ಸಿಂಗ್, ಅಮೃತ್‌ಪ್ ಸಿಂಗ್, ವಿಶಾಲ್, ಗುರ್ತಾಜ್ ಸಿಂಗ್, ಮನ್‌ಪ್ರೀತ್ ರಾಂಧವಾ ಮತ್ತು ಸರಬ್ಜಿತ್ ಸಿಂಗ್ ಸೇರಿದ್ದಾರೆ.
ಅಪಹರಣ, ಚಿತ್ರಹಿಂಸೆ, ಸುಳ್ಳು ಸೆರೆವಾಸ, ಅಪರಾಧದ ಸಂಚು, ಸಾಕ್ಷಿ ಬೆದರಿಕೆ, ಬಂದೂಕಿನಿಂದ ಹಲ್ಲೆ ಮತ್ತು ಭಯೋತ್ಪಾದನೆಗೆ ಬೆದರಿಕೆ ಸೇರಿದಂತೆ ಅನೇಕ ಅಪರಾಧ ಆರೋಪಗಳ ಮೇಲೆ ಅವರನ್ನು ಸ್ಯಾನ್ ಜೋಕ್ವಿನ್ ಕೌಂಟಿ ಜೈಲಿಗೆ ದಾಖಲಿಸಲಾಗಿದೆ.
ಶಂಕಿತ ಆರೋಪಿಗಳು ಹಾಗೂ ಐದು ಹ್ಯಾಂಡ್ ಗನ್, ಒಂದು ರೈಫಲ್ಸ್, ನೂರಾರು ಸುತ್ತಿನ ಮದ್ದುಗುಂಡುಗಳು, ಮ್ಯಾಗಜಿನ್ ಗಳು ಮತ್ತು $15,000 ಕ್ಕೂ ಹೆಚ್ಚು ನಗದನ್ನು ಒಳಗೊಂಡ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಬಟಾಲಾ ಅವರ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜೂನ್‌ನಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆತನ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ವರದಿ ಹೇಳಿದೆ.
BKI ಭಯೋತ್ಪಾದಕ ಲಖ್ಬೀರ್ ಲಾಂಡಾ ಮತ್ತು ಜತೀಂದರ್ ಜೋತಿ ಜೊತೆಗೆ ಪವಿತ್ತರ್ ಸಿಂಗ್ ಬಟಾಲ್ ಹೆಸರನ್ನು ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಪಂಜಾಬ್ ಮೂಲದ ದರೋಡೆಕೋರರು ಮತ್ತು ಬಟಾಲಾ ಗ್ಯಾಂಗ್ ಗೆ ಬಂದೂಕು ಪೂರೈಸಿದ ಆರೋಪ ಜೋತಿ ಮೇಲಿದೆ. ಬಟಾಲಾನ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತೀಯ ಏಜೆನ್ಸಿಗಳು ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಹೇಳಲಾಗಿದೆ.