ಕರಾಚಿ: ಪಾಕಿಸ್ತಾನ ಸೇನೆಯ ಸುಮಾರು 500ಕ್ಕೂ ಅಧಿಕ ಸೈನಿಕರು ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿ ಪ್ರಸಾರವಾಗುತ್ತಿರುವಂತೆಯೇ ಈ ಕುರಿತು ಸ್ವತಃ ಬಲೂಚಿಸ್ತಾನ ಹೋರಾಟಗಾರ ಮೀರ್ ಯಾರ್ ಬಲೂಚ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನಿ ಸೇನೆ ಮತ್ತು ಪೊಲೀಸರ 500 ಕ್ಕೂ ಹೆಚ್ಚು ಸಿಬ್ಬಂದಿ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೋರಾಡಲು ನಿರಾಕರಿಸಿ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ಎದುರು ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಜುಲೈ 2025 ರ ಮಧ್ಯದಲ್ಲಿ, 500 ಕ್ಕೂ ಹೆಚ್ಚು ಪಾಕಿಸ್ತಾನಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿಗಳು ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ ಮತ್ತು ಅವರನ್ನು ಪಂಜಾಬ್‌ಗೆ ಹಿಂತಿರುಗಿಸಲಾಗಿದೆ ಎಂದು ವರದಿಯಾಗಿದೆ. ಶರಣಾದ ಈ ಸೈನಿಕರನ್ನು ವಿಶೇಷ ಬಸ್ ಗಳ ಮೂಲಕ ಪಾಕಿಸ್ತಾನಕ್ಕೆ ಹಿಂದಿರುಗಿಸಲಾಗಿದ್ದು, ಅವರನ್ನು ಪಾಕಿಸ್ತಾನದಲ್ಲಿ ಸಂಭಾವ್ಯ ನ್ಯಾಯಾಲಯ-ಸಮರ ಪ್ರಕ್ರಿಯೆಗಳಿಗೆ ಒಡ್ಡುವ ಸಾಧ್ಯತೆ ಇದೆ ಎಂದು ಬಲೂಚ್ ಸ್ವಾತಂತ್ರ್ಯ ಹೋರಾಟಗಾರ ಮೀರ್ ಯಾರ್ ಬಲೂಚ್ ಟ್ವೀಟ್ ಮಾಡಿದ್ದಾರೆ.
ಅಂತೆಯೇ ಇದು ಬಲೂಚಿಸ್ತಾನದಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿರುವ ಮೀರ್ ಯಾರ್ ಬಲೂಚ್, 'ಬಲೂಚಿಸ್ತಾನದಲ್ಲಿ 93,000 ಸೈನಿಕರ ಸಂಬಂಧಿಕರು ಶರಣಾಗುತ್ತಿದ್ದಾರೆ ಏಕೆಂದರೆ ಪಾಕಿಸ್ತಾನ ಸೈನ್ಯವು ಬಲೂಚಿಸ್ತಾನದಲ್ಲಿ ಯುದ್ಧವನ್ನು ಸೋತಿದೆ ಎಂದು ಅವರಿಗೆ ತಿಳಿದಿದೆ, ಆದ್ದರಿಂದ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರಿಂದ ಕೊಲ್ಲಲ್ಪಡುವ ಬದಲು ತಮ್ಮದೇ ಸೈನ್ಯದ ಮುಂದೆ ಶರಣಾಗುವುದು ಉತ್ತಮ. ಬಲೂಚಿಸ್ತಾನದಲ್ಲಿ 500 ಪಂಜಾಬಿ ಸೈನಿಕರ ಶರಣಾದ ನಂತರ, ಈಗ ಅಕಾಲಿಕ ನಿವೃತ್ತಿಯ ಪ್ರವೃತ್ತಿ ಪ್ರಾರಂಭವಾಗಿದೆ. ಬಲೂಚಿಸ್ತಾನದಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಯಲ್ಲಿ ಭಯದ ಭಾವನೆ ಹೆಚ್ಚುತ್ತಿದೆ' ಎಂದು ಹೇಳಿದ್ದಾರೆ.
ಅಂತೆಯೇ '1971 ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ಭಾರತೀಯ ಸೇನೆ ಎದುರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಆ 93,000 ಸೈನಿಕರ ಸಂಬಂಧಿಕರು ಅನೇಕ ಸೈನಿಕರು ಅಕಾಲಿಕ ನಿವೃತ್ತಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ, ಆದರೆ ಕೆಲವರು ಈಗಾಗಲೇ ಶರಣಾಗಿದ್ದಾರೆ, ಬಲೂಚಿಸ್ತಾನದ ಹೊರವಲಯದಲ್ಲಿ ಕರ್ತವ್ಯಕ್ಕೆ ಹಾಜರಾಗದಂತೆ ತಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೆದ್ದಾರಿಗಳು, ಬೀದಿಗಳು ಮತ್ತು ಪರ್ವತಗಳು ಧೈರ್ಯಶಾಲಿ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಗೆರಿಲ್ಲಾ ದಾಳಿಗೆ ಒಳಗಾಗಿರುವುದರಿಂದ, ಅವರಿಗೆ ಇನ್ನು ಮುಂದೆ ಯಾವುದೇ ಸ್ಥಳವು ಸುರಕ್ಷಿತವಾಗಿಲ್ಲ' ಎಂದೂ ಎಚ್ಚರಿಕೆ ನೀಡಿದ್ದಾರೆ.
ವಿಡಿಯೋ ವೈರಲ್
ಅಂತೆಯೇ ಪಾಕಿಸ್ತಾನ ಸೇನೆ ಶರಣಾಗತಿ ವಿಚಾರ ವೈರಲ್ ಬೆನ್ನಲ್ಲೇ ಬಲೂಚಿಸ್ತಾನ ಹೋರಾಟಗಾರರು ಪಾಕಿಸ್ತಾನ ಸೇನೆಯ ಸೈನಿಕರು ಇರುವ ಬಸ್ ಗಳು ಪಾಕಿಸ್ತಾನದತ್ತ ತೆರಳುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ತಾರಕಕ್ಕೇರಿದ ಬಲೂಚ್ ಸಂಘರ್ಷ
ಇನ್ನು ಪಾಕಿಸ್ತಾನ ಮತ್ತು ಬಲೂಚಿಸ್ತಾನ ಸಂಘರ್ಷ ತಾರಕಕ್ಕೇರಿದ್ದು, ಪಾಕಿಸ್ತಾನ ಸರ್ಕಾರ ತನ್ನ ಸೇನಾಪಡೆಗಳನ್ನು ಬಲೂಚಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುವವರೆಗೂ ತನ್ನ ಹೋರಾಟ ನಿಲ್ಲುವುದಿಲ್ಲ ಎಂದು ಎರಡು ನಿಷೇಧಿತ ಪ್ರತ್ಯೇಕತಾವಾದಿ ಗುಂಪುಗಳಾದ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLF) ಮತ್ತು ಬಲೂಚ್ ಲಿಬರೇಶನ್ ಆರ್ಮಿ (BLA) ಘೋಷಿಸಿವೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲುಗಳ ಮೇಲೆ ಅನೇಕ ಮಾರಕ ದಾಳಿಗಳಿಗೆ ತಾವೇ ಕಾರಣವೆಂದು ಹೇಳಿಕೊಂಡಿವೆ.
ಆದರೆ ಪಾಕಿಸ್ತಾನ ಸೈನಿಕರ ಶರಣಾಗತಿ ಕುರಿತು ಪಾಕಿಸ್ತಾನ ಸರ್ಕಾರ ಅಥವಾ ಪಾಕಿಸ್ತಾನ ಸೇನೆ ಈ ವರೆಗೂ ಯಾವುದೇ ಹೇಳಿಕೆ ನೀಡಿಲ್ಲ.