ನವದೆಹಲಿ: ಅಹಮದಾಬಾದ್ ವಿಮಾನ ಅಪಘಾತದ ಪ್ರಾಥಮಿಕ ವರದಿಯು ಪಕ್ಷಪಾತದಿಂದ ಕೂಡಿದೆ ಎಂಬ ಊಹಾಪೋಹಗಳನ್ನು ತಿರಸ್ಕರಿಸಿದ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು, ವಿದೇಶಿ ಮಾಧ್ಯಮಗಳು ತಮ್ಮದೇ ಆದ ಕಥೆಯನ್ನು ಸೃಷ್ಟಿಸುತ್ತಿವೆ ಎಂದು ಆರೋಪಿಸಿದ್ದಾರೆ. ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದು AAIBಯ ಫೈಲ್ ವರದಿಯು ಈ ಅಪಘಾತದ ಸ್ಪಷ್ಟ ಚಿತ್ರಣವನ್ನು ಜನರ ಮುಂದೆ ಇಡುತ್ತದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವರು, ಸಾರ್ವಜನಿಕರು ಮತ್ತು ಮಾಧ್ಯಮಗಳು ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವಂತೆ ಮನವಿ ಮಾಡಿದರು. AAIB ವರದಿಯು ಭಾರತದ ಅತ್ಯಂತ ದುರಂತ ಅಪಘಾತದ ಕಾರಣಗಳ ಸ್ಪಷ್ಟ ಚಿತ್ರಣವನ್ನು ಜನರ ಮುಂದೆ ಇಡುತ್ತದೆ ಎಂದರು. ಮೇಲ್ಮನೆಯಲ್ಲಿ ಮಾತನಾಡಿದ ಅವರು, ಹಾನಿಗೊಳಗಾದ ಕಪ್ಪು ಪೆಟ್ಟಿಗೆಯನ್ನು ಮೊದಲ ಬಾರಿಗೆ AAIB ಡಿಕೋಡ್ ಮಾಡಿದೆ ಎಂದು ಹೇಳಿದರು. ಇದಕ್ಕೂ ಮೊದಲು, ಕಪ್ಪು ಪೆಟ್ಟಿಗೆಯನ್ನು ಅದನ್ನು ತಯಾರಿಸಿದ ಕಂಪನಿಗೆ ಕಳುಹಿಸಲಾಗಿತ್ತು.
AAIB ಸಹ ಡೇಟಾವನ್ನು ಪಡೆದುಕೊಂಡಿದೆ. ಕಾಕ್‌ಪಿಟ್‌ನ ಧ್ವನಿಯನ್ನು ಸಹ ದಾಖಲಿಸಿದೆ. ಪ್ರಾಥಮಿಕ ವರದಿಯಲ್ಲಿ ನಿಜವಾಗಿಯೂ ಏನಾಯಿತು ಎಂದು ಹೇಳಲು ನಾವು ಪ್ರಯತ್ನಿಸಿದ್ದೇವೆ. AAIB ಕಪ್ಪು ಪೆಟ್ಟಿಗೆಯಿಂದ ಡೇಟಾ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಅನ್ನು ಯಶಸ್ವಿಯಾಗಿ ಪಡೆದುಕೊಂಡಿದೆ ಎಂದು ನಾಯ್ಡು ಹೇಳಿದರು. ಆರಂಭಿಕ ವರದಿಯು ಅಪಘಾತದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ಆದರೆ ಅಂತಿಮ ತೀರ್ಮಾನಕ್ಕಾಗಿ, ನಾವು AAIBಯ ಸಂಪೂರ್ಣ ತನಿಖಾ ವರದಿಗಾಗಿ ಕಾಯಬೇಕಾಗುತ್ತದೆ. ತನಿಖೆ ಸಂಪೂರ್ಣವಾಗಿ ಪಾರದರ್ಶಕ ಮತ್ತು ನ್ಯಾಯಯುತವಾಗಿದೆ ಮತ್ತು ಸರ್ಕಾರ ಸತ್ಯದ ಪರವಾಗಿ ನಿಂತಿದೆ ಎಂದು ಅವರು ಒತ್ತಿ ಹೇಳಿದರು.
ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಸುತ್ತಿದೆ. ಕೆಲ ಭಾರತೀಯ ಮಾಧ್ಯಮಗಳು ಮತ್ತು ವಿದೇಶಿ ಮಾಧ್ಯಮಗಳು ತಮ್ಮ ಕಾರ್ಯಸೂಚಿಯನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿವೆ. ನಾನು ಅನೇಕ ಲೇಖನಗಳನ್ನು ನೋಡಿದ್ದೇನೆ. ಆದರೆ ಭಾರತವು ಅಂತರರಾಷ್ಟ್ರೀಯ ಶಿಷ್ಟಾಚಾರವನ್ನು ಅನುಸರಿಸುತ್ತಿದೆ. ಸತ್ಯಗಳಿಗೆ ಮಾತ್ರ ಗಮನ ಹರಿಸುತ್ತಿದೆ ಎಂದರು.