ನವದೆಹಲಿ: ಭಾರತ ಮತ್ತು ಬ್ರಿಟನ್ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಸಹಿ ಹಾಕಿದ್ದಾರೆ. ಬಳಿಕ ಉಭಯ ದೇಶಗಳ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಅನುವಾದಕರು ಕೈ ಕೊಟ್ಟಿದ್ದಾರೆ.
ಕೆಲವು ವ್ಯವಹಾರಿಕ ಪದಗಳನ್ನು ಸುಗಮವಾಗಿ ಅನುವಾದ ಮಾಡುವಲ್ಲಿ ಹೆಣಗಾಡುತ್ತಿರುವುದನ್ನು ನೋಡಿದ ಪ್ರಧಾನಿ ಮೋದಿ, ತೊಂದರೆ ಇಲ್ಲ. ನಾವು ನಡುವೆ ಇಂಗ್ಲೀಷ್ ನಲ್ಲಿ ಮಾತನಾಡಬಹುದು. ಅದರ ಬಗ್ಗೆ ತೊಂದರೆ ಬೇಡ ಎಂದು ಪತ್ರಕರ್ತರಿಗೆ ಹೇಳಿದ್ದಾರೆ.
ಇದಕ್ಕೆ ನಗುವಿನೊಂದಿಗೆ ತಲೆಯಾಡಿಸಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ನಾವು ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಅನಿಸುತ್ತಿದೆ ಎಂದಿದ್ದಾರೆ.
ಭಾರತ ಮತ್ತು ಬ್ರಿಟನ್ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಬ್ರಿಟಿಷ್ ಪ್ರಧಾನಿ ಸ್ಟಾರ್ಮರ್ 'ಐತಿಹಾಸಿಕ ಒಪ್ಪಂದ' ಎಂದು ಕರೆದಿದ್ದಾರೆ.
ಈ ಒಪ್ಪಂದವು ಎರಡೂ ದೇಶಗಳಿಗೆ, ವಿಶೇಷವಾಗಿ ಕಾರ್ಮಿಕರು, ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ಪ್ರಯೋಜನಕಾರಿಯಾಗಲಿದೆ. ಇದು ವ್ಯಾಪಾರದ ವೇಗವನ್ನು ಹೆಚ್ಚಿಸುವುದಲ್ಲದೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಈ ಒಪ್ಪಂದವು ಬ್ರಿಟನ್‌ನಲ್ಲಿ ಹೂಡಿಕೆ ಮತ್ತು ರಫ್ತುಗಳನ್ನು ಸುಮಾರು 6 ಬಿಲಿಯನ್ ಪೌಂಡ್‌ಗಳಷ್ಟು ಹೆಚ್ಚಿಸಿದೆ. ಭಾರತೀಯ ಕಂಪನಿಗಳು ಬ್ರಿಟನ್‌ನಲ್ಲಿ ವಿಸ್ತರಿಸುತ್ತಿವೆ ಮತ್ತು ಬ್ರಿಟಿಷ್ ಕಂಪನಿಗಳು ಭಾರತದಲ್ಲಿ ಹೊಸ ವ್ಯಾಪಾರ ಅವಕಾಶಗಳನ್ನು ಪಡೆಯುತ್ತಿವೆ ಎಂದು ಸ್ಟಾರ್ಮರ್ ಹೇಳಿದರು.
ಇನ್ನೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಇಂದು ನಮ್ಮ ಸಂಬಂಧಗಳಲ್ಲಿ ಐತಿಹಾಸಿಕ ದಿನವಾಗಿದೆ. ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ, ಇಂದು ಎರಡೂ ದೇಶಗಳು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಿವೆ ಎಂದು ನನಗೆ ಸಂತೋಷವಾಗಿದೆ ಎಂದು ಹೇಳಿದರು.