ಹೈದರಾಬಾದ್: ವಿಯೆಟ್ನಾಂನ ಕ್ಯಾನ್ ಥೋ ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತೀಯ ಮೂಲದ MBBS ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ವಿಯೆಟ್ನಾಂನ (Vietnam) ಕ್ಯಾನ್ ಥೋ ನಗರದಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ತೆಲಂಗಾಣದ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಮೃತನನ್ನು ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅರ್ಷಿದ್ ಆಶ್ರಿತ್ ಎಂದು ಗುರುತಿಸಲಾಗಿದೆ. ಮೃತ ಅರ್ಷಿದ್ ಆಶ್ರಿತ್ ತೆಲಂಗಾಣದ ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕಾಗಜ್‌ನಗರದ ನಿವಾಸಿಯಾಗಿದ್ದಾರೆ.
ಮಳೆಯಲ್ಲಿ ಬೈಕ್ ಅಪಘಾತ
ಮಳೆಯಿಂದಾಗಿ ತೇವವಾಗಿದ್ದ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಅರ್ಷಿದ್ ಬೈಕ್ ನಿಯಂತ್ರಣ ತಪ್ಪಿ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಿಂಬದಿ ಸವಾರನಾಗಿದ್ದ ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ಭಯಾನಕ ದೃಶ್ಯಗಳು ಸೆರೆಯಾಗಿದೆ.
ಶಾಸಕ ಡಾ.ಪಿ.ಹರೀಶ್ ಬಾಬು ಅವರು ಆಶ್ರಿತ್ ಅವರ ನಿವಾಸಕ್ಕೆ ಭೇಟಿ ನೀಡಿ ದುಃಖಿತ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮೃತದೇಹವನ್ನು ಭಾರತಕ್ಕೆ ಕರೆತರಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.