ಟೆಲ್ ಅವಿವ್, ಇಸ್ರೇಲ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಎರಡನೇ ವಾರಕ್ಕೆ ಕಾಲಿಟ್ಟಿರುವಂತೆಯೇ ಇರಾನಿನ ಪರಮಾಣು ಸಂಶೋಧನಾ ಕೇಂದ್ರದ ಮೇಲೆ ರಾತ್ರಿ ದಾಳಿ ನಡೆದಿದ್ದು, ಇರಾನಿನ ಹಿರಿಯ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಶನಿವಾರ ಹೇಳಿದೆ.
ಶನಿವಾರ ಮುಂಜಾನೆ ಇಸ್ಫಹಾನ್‌ನ ಪರ್ವತದ ಸಮೀಪವಿರುವ ಪರಮಾಣು ಸಂಶೋಧನಾ ಕೇಂದ್ರದ ಬಳಿ ದಟ್ಟ ಹೊಗೆ ಕಂಡುಬಂದಿದೆ. ಇಸ್ರೇಲ್ ಎರಡು ಹಂತಗಳಲ್ಲಿ ಪರಮಾಣು ಸಂಶೋಧನಾ ಕೇಂದ್ರದ ಮೇಲೆ ದಾಳಿ ಮಾಡಿದೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇರಾನ್ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸುವ ಇಸ್ರೇಲ್ ನ ಗುರಿಯ ಭಾಗವಾಗಿ ಎರಡನೇ ಬಾರಿಗೆ ಇಸ್ಫಹಾನ್ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.
ಇಸ್ರೇಲ್ ದಾಳಿಯಿಂದ ಪರಮಾಣು ಸಂಶೋಧನಾ ಕೇಂದ್ರಕ್ಕೆ ಸಾಕಷ್ಟು ಹಾನಿಯಾಗಿದೆ. ಆದರೆ ಯಾವ ವ್ಯಕ್ತಿಯೂ ಸತ್ತಿಲ್ಲ ಅಥವಾ ಗಾಯಗಳಾಗಿಲ್ಲ ಎಂದು ಇಸ್ಫಹಾನ್ ಪ್ರಾಂತ್ಯದ ಭದ್ರತಾ ವ್ಯವಹಾರಗಳ ಉಪ ಗವರ್ನರ್ ಅಕ್ಬರ್ ಸಲೇಹಿ ದೃಢಪಡಿಸಿದರು. ಇಸ್ರೇಲ್ ಮೇಲೂ ಇರಾನ್ ಮತ್ತೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಆದರೆ ಹಾನಿ ಕುರಿತು ಇಲ್ಲಿಯವರೆಗೂ ಯಾವುದೇ ಮಾಹಿತಿ ಬಂದಿಲ್ಲ.
ಇರಾನ್ ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ ತನ್ನ ಲಾಂಚರ್ ಗಳನ್ನು ಗುರಿಯಾಗಿಸಿಕೊಂಡಿದೆ. ನಮಗಿಂತಲೂ ಅವರಿಗೆ ಹೆಚ್ಚು ಹಾನಿಯಾಗಿದೆ ಎಂದು ಇಸ್ರೇಲ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇರಾನ್‌ನ ಡ್ರೋನ್ ಉತ್ತರ ಇಸ್ರೇಲ್‌ನಲ್ಲಿರುವ ಎರಡು ಅಂತಸ್ತಿನ ಕಟ್ಟಡಕ್ಕೆ ಶನಿವಾರ ಅಪ್ಪಳಿಸಿದೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ ರಕ್ಷಣಾ ಸೇವೆ ಶನಿವಾರ ತಿಳಿಸಿದೆ.
ರಾಜತಾಂತ್ರಿಕ ಪ್ರಗತಿಯಲ್ಲಿ ಸ್ವಿಟ್ಜರ್ಲೆಂಡ್ ಮಾತುಕತೆ ವಿಫಲ:
ಜಿನೀವಾದಲ್ಲಿ ಶುಕ್ರವಾರ ನಡೆದ ಮಾತುಕತೆಗಳು ರಾಜತಾಂತ್ರಿಕ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿವೆ. ಯುರೋಪಿಯನ್ ಅಧಿಕಾರಿಗಳು ಮುಂದಿನ ಚರ್ಚೆಗಳಿಗೆ ಭರವಸೆ ವ್ಯಕ್ತಪಡಿಸಿದರು ಮತ್ತು ದಾಳಿ ನಡೆಸುತ್ತಿರುವ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಆಸಕ್ತಿ ಇಲ್ಲ ಆದರೆ, ಮಾತುಕತೆಗೆ ಮುಕ್ತರಾಗಿರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದರು.
ಇರಾನ್ ಮತ್ತೊಮ್ಮೆ ರಾಜತಾಂತ್ರಿಕತೆಯನ್ನು ಪರಿಗಣಿಸಲು ಸಿದ್ಧವಾಗಿದೆ. ಆಕ್ರಮಣವನ್ನು ನಿಲ್ಲಿಸಿದರೆ ಮತ್ತು ಮಾಡಿದ ಅಪರಾಧಗಳಿಗೆ ಆಕ್ರಮಣಕಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಯಾಗಿಲ್ಲ. ಯುಎಸ್ ಮಿಲಿಟರಿ ತೊಡಗಿಸಿಕೊಳ್ಳುವುದರ ವಿರುದ್ಧ ಇರಾನ್ ಎಚ್ಚರಿಸಿದೆ.
ಯುದ್ಧದಲ್ಲಿ ತೊಡಗಿಸಿಕೊಳ್ಳುವ ಸುಳಿವು ನೀಡಿದ ಅಮೆರಿಕ:
ಈ ಮಧ್ಯೆ ಇಸ್ತಾಂಬುಲ್‌ನಲ್ಲಿ ಶನಿವಾರ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಮಿಲಿಟರಿ ಯುದ್ಧದಲ್ಲಿ ತೊಡಗಿಸಿಕೊಳ್ಳುವ ಸುಳಿವು ನೀಡಿದರು. ತುಂಬಾ ದುರದೃಷ್ಟಕರವಾಗಿದೆ. ಇದು ಎಲ್ಲರಿಗೂ ತುಂಬಾ ಅಪಾಯಕಾರಿ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಪರಮಾಣು ಮತ್ತು ಮಿಲಿಟರಿ ಕಟ್ಟಡಗಳು, ಉನ್ನತ ಕಮಾಂಡರ್ ಗಳು ಮತ್ತು ಪರಮಾಣು ವಿಜ್ಞಾನಿಗಳನ್ನು ಗುರಿಯಾಗಿಸಿ ಇಸ್ರೇಲ್ ಜೂನ್ 13 ರಂದು ವೈಮಾನಿಕ ದಾಳಿ ನಡೆಸಿದಾಗಿನಿಂದ ಸ್ರೇಲ್ ಮತ್ತು ಇರಾನ್ ನಡುವಣ ಯುದ್ಧ ಆರಂಭವಾಗಿದೆ.
ಇರಾನ್‌ನಲ್ಲಿ 263 ನಾಗರಿಕರು ಸೇರಿದಂತೆ ಕನಿಷ್ಠ 657 ಜನರು ಸಾವನ್ನಪ್ಪಿದ್ದಾರೆ ಮತ್ತು 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಾಷಿಂಗ್ಟನ್ ಮೂಲದ ಇರಾನಿನ ಮಾನವ ಹಕ್ಕುಗಳ ಗುಂಪು ತಿಳಿಸಿದೆ. ಇಸ್ರೇಲ್ ಸೇನೆ ಪ್ರಕಾರ, ಇಸ್ರೇಲ್ 450ಕ್ಕೂ ಹೆಚ್ಚು ಕ್ಷಿಪಣಿ ಹಾಗೂ 1,000 ಡ್ರೋನ್ ದಾಳಿ ನಡೆಸಿದೆ. ಇಸ್ರೇಲ್ ನ ವಾಯು ರಕ್ಷಣಾ ವ್ಯವಸ್ಥೆಯಿಂದ ಅವುಗಳನ್ನು ಹೊಡೆದುರುಳಿಸಲಾಗಿದೆ. ಆದರೆ, 24 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವುದಾಗಿ ತಿಳಿಸಿದೆ.
ಇರಾನ್ ಸೇನಾ ಕಮಾಂಡರ್‌ಗಳ ಹತ್ಯೆ ಮುಂದುವರಿಕೆ:
ಆರಂಭಿಕ ದಾಳಿಯಲ್ಲಿ ಇರಾನ್‌ನ ಮೂವರು ಉನ್ನತ ಸೇನಾ ಕಮಾಂಡರ್ ಗಳಾದ ಜನರಲ್ ಮೊಹಮ್ಮದ್ ಬಘೇರಿ, ಜನರಲ್ ಹೊಸೈನ್ ಸಲಾಮಿ, ಜನರಲ್ ಅಮೀರ್ ಅಲಿ ಹಾಜಿಜಾದೆ ಅವರನ್ನು ಹತ್ಯೆ ಮಾಡಿದ್ದ ಇಸ್ರೇಲ್, ಹಿರಿಯ ಕಮಾಂಡರ್ ಗಳ ಹತ್ಯೆಯನ್ನು ಮುಂದುವರೆಸಿದೆ. ಪ್ಯಾಲೆಸ್ಟಿನ್ ಪಡೆದ ಕಮಾಂಡರ್ ಸಯೀದ್ ಇಜಾದಿಯನ್ನು ಕೋಮ್ ನಗರದ ಅಪಾರ್ಟ್ ಮೆಂಟ್ ನಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿದೆ. ಇರಾನ್ ಅಧಿಕಾರಿಗಳು ಇದನ್ನು ತಕ್ಷಣವೇ ದೃಢಪಡಿಸಿಲ್ಲ.
ಹೆಜ್ಬುಲ್ಲಾ ಮತ್ತು ಹಮಾಸ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದ ಎನ್ನಲಾದ ಕುಡ್ಸ್ ಫೋರ್ಸ್‌ನ ಶಸ್ತ್ರಾಸ್ತ್ರ ವರ್ಗಾವಣೆ ಘಟಕದ ಕಮಾಂಡರ್ ಅನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ. ಪಶ್ಚಿಮ ಇರಾನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೆಹ್ನಮ್ ಶಹರಿಯಾರಿ ಅವರನ್ನು ಕಾರಿನಲ್ಲಿಯೇ ಹೊಡೆದು ಹಾಕಿರುವುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ. ಇರಾನ್‌ನ ಡ್ರೋನ್ ಪಡೆಯ ಕಮಾಂಡರ್ ಕೂಡ ರಾತ್ರೋರಾತ್ರಿ ಹತ್ಯೆಯಾಗಿರುವುದಾಗಿ ಇಸ್ರೇಲಿ ಅಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.