ಟೆಹರಾನ್: ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಭಾಗವಾಗಿ ಕತಾರ್‌ನ ಅಲ್ ಉದೈದ್ ವಾಯುನೆಲೆ ಸೇರಿದಂತೆ ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಅನೇಕ ಕ್ಷಿಪಣಿ ದಾಳಿ ನಡೆಸಿದೆ.
ಭಾನುವಾರ ಮುಂಜಾನೆ ಇರಾನ್ ಪರಮಾಣು ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ. ಇರಾನ್‌ನ ಬಹುತೇಕ ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕದ ಇಬ್ಬರು ಅಧಿಕಾರಿಗಳು ದೃಢಪಡಿಸಿರುವುದಾಗಿ CNN ವರದಿ ಮಾಡಿದೆ.
ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಮತ್ತೋರ್ವ ಅಧಿಕಾರಿ ಡಾನ್ ಕೇನ್ ಅವರು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕೂ ಮುನ್ನಾ ಕತಾರ್‌ನಲ್ಲಿರುವ ಯುಎಸ್ ನೆಲೆಯ ವಿರುದ್ಧ ಕಾರ್ಯಾಚರಣೆ ಕುರಿತು ಇರಾನ್‌ನ ರಾಜ್ಯ ಟಿವಿ ವರದಿ ಮಾಡಿತ್ತು.
ಇರಾನ್ ಸ್ಟೇಟ್ ಟಿವಿ ವರದಿ ಉಲ್ಲೇಖಿಸಿ ಸಮಾ ಟಿವಿ, ಈ ಪ್ರದೇಶದಲ್ಲಿನ ಯುಎಸ್ ನೆಲೆಗಳ ವಿರುದ್ಧ ಈ ಕಾರ್ಯಾಚರಣೆಯನ್ನು 'ಆಪರೇಷನ್ ಬಶರತ್ ಅಲ್-ಫಾತ್' ಎಂದು ಕರೆದಿದೆ. CNN ಪ್ರಕಾರ, ಇರಾನ್ ಕತಾರ್ ಮತ್ತು ಇರಾಕ್ ಕಡೆಗೆ ಪ್ರತೀಕಾರದ ಕ್ಷಿಪಣಿಗಳನ್ನು ಉಡಾಯಿಸುತ್ತಿದ್ದಂತೆ ಕತಾರ್ ಮತ್ತು ಬಹ್ರೇನ್‌ನಲ್ಲಿರುವ ರಾಯಭಾರ ಕಚೇರಿಗಳನ್ನು ಅಮೆರಿಕ ಬಂದ್ ಮಾಡಿರುವುದಾಗಿ ವರದಿಯಾಗಿದೆ.
ಉದ್ವಿಗ್ನತೆಯ ನಡುವೆ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ ಎಂದು ಕತಾರ್ ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ. ಅಮೆರಿಕದ ನಾಗರಿಕರು ಮುಂದಿನ ಮುನ್ಸೂಚನೆ ಬರುವವರೆಗೂ ಸುರಕ್ಷಿತ ಜಾಗದಲ್ಲಿರುವಂತೆ ದೋಹಾದಲ್ಲಿರುವ ಯುಎಸ್ ರಾಯಭಾರ ಕಚೇರಿ ಸೂಚನೆ ನೀಡಿದೆ.