ವಾಷಿಂಗ್ಟನ್: ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಲಾನ್ ಮಸ್ಕ್ ಗೆ ಮತ್ತೆ ಆಘಾತ ಎದುರಾಗಿದ್ದು, ಮಸ್ಕ್ ಆಸ್ತಿ ಕಳೆದ ಕೆಲವೇ ವಾರಗಳ ಅಂತರದಲ್ಲಿ 132 ಬಿಲಿಯನ್ ಡಾಲರ್ ನಷ್ಟು ನಷ್ಟವಾಗಿದೆ.
ಹೌದು..ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, 2025 ರ ಇದುವರೆಗಿನ ಅತಿದೊಡ್ಡ ಸಂಪತ್ತು ಕುಸಿತವನ್ನು ಅನುಭವಿಸಿದ್ದು, ಮಾರ್ಚ್ 11, 2025 ರ ಹೊತ್ತಿಗೆ ಮಸ್ಕ್ ಅವರ ನಿವ್ವಳ ಮೌಲ್ಯವು 132 ಬಿಲಿಯನ್ ಡಾಲರ್ ಗೆ ಕುಗ್ಗಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಇತ್ತೀಚಿನ ದತ್ತಾಂಶದಿಂದ ತಿಳಿದುಬಂದಿದೆ. ಪ್ರಸ್ತುತ ಅಂಕಿಅಂಶಗಳ ಪ್ರಕಾರ, ಮಸ್ಕ್ ಅವರ ನಿವ್ವಳ ಮೌಲ್ಯವು 301 ಬಿಲಿಯನ್ ಡಾಲರ್ ಆಗಿದೆ.
ಮಾರುಕಟ್ಟೆ ಕುಸಿತ ಮತ್ತು ಇತರೆ ಕಾರಣಗಳಿಂದ ಮಸ್ಕ್ ಆಸ್ತಿಯಲ್ಲಿ ಸುಮಾರು 120 ಶತಕೋಟಿ ಡಾಲರ್‌ನಷ್ಟು ಕಡಿಮೆಯಾಗಿದೆ. 2025ರ ಆರಂಭದಿಂದ ಈವರೆಗೆ ಅವರ ಸಂಪತ್ತು ಶೇ. 25ರಷ್ಟು ಇಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈಗಲೂ ಮಸ್ಕ್ 330 ಶತಕೋಟಿ ಡಾಲರ್ ಒಟ್ಟು ಸಂಪತ್ತಿನೊಂದಿಗೆ ನಂ.1 ಶ್ರೀಮಂತರಾಗಿ ಮುಂದುವರೆದಿದ್ದಾರೆ.
ವೇಗವಾಗಿ ಕುಸಿಯುತ್ತಿದೆ ಮಸ್ಕ್ ಸಂಪತ್ತು
ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಷೇರುಗಳು ಸತತ ಏಳನೇ ವಾರವೂ ಕುಸಿದಿವೆ. ಇಷ್ಟು ದೀರ್ಘ ಕಾಲ ಷೇರುಗಳ ಬೆಲೆ ಕುಸಿದಿರುವುದು ಕಂಪನಿಯ ಇತಿಹಾಸದಲ್ಲಿ ಇದೇ ಮೊದಲು. ಡಿಸೆಂಬರ್ 17ರಂದು ಟೆಸ್ಲಾ ಷೇರಿನ ಬೆಲೆ 480 ಡಾಲರ್‌ಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಎಂಕ್ಯಾಪ್‌ನಲ್ಲಿ ಕಂಪನಿ 800 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ.
ಟ್ರಂಪ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಸ್ಕ್ ಅದರ ಭಾಗವಾದರು. ಈ ಬೆಳವಣಿಗೆ ಬೆನ್ನಲ್ಲೇ ಮಸ್ಕ್ ಸಂಪತ್ತು ಗಣನೀಯವಾಗಿ ಕುಸಿಯುತ್ತಾ ಸಾಗಿದೆ ಎನ್ನಲಾಗಿದೆ. ಟೆಸ್ಲಾ ಷೇರಿನ ಬೆಲೆ ಕೂಡ ಹೆಚ್ಚಿನ ಮಟ್ಟದಲ್ಲಿ ಕೆಳಗಿಳಿಯುತ್ತಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ಮಾ. 7ರಂದು ಅಂತ್ಯವಾದ ವಾರದಲ್ಲಿ ಟೆಸ್ಲಾ ಷೇರಿನ ಬೆಲೆಯಲ್ಲಿ ಬರೊಬ್ಬರಿ ಶೇ.10ರಷ್ಟು ಕುಸಿದಿದೆ.
ಸೋಮವಾರ 29 ಬಿಲಿಯನ್ ಡಾಲರ್ ನಷ್ಟ
ಇನ್ನು ಸ್ಪೇಸ್‌ಎಕ್ಸ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಅನ್ನು ಹೊಂದಿರುವ ಮಸ್ಕ್ ಸೋಮವಾರವೇ 29 ಬಿಲಿಯನ್ ಡಾಲರ್ ಕಳೆದುಕೊಂಡರು. ಡಿಸೆಂಬರ್ 2024 ರ ಸನ್ನಿವೇಶಕ್ಕೆ ಇದು ತೀಕ್ಷ್ಣವಾದ ವ್ಯತಿರಿಕ್ತವಾಗಿದ್ದು, ಆಗ ಮಸ್ಕ್ ಅವರ ಸಂಪತ್ತು 486 ಬಿಲಿಯನ್ ಡಾಲರ್ ಗೆ ಏರಿತ್ತು.