ಪೇಶಾವರ್: ಪಾಕಿಸ್ತಾನದಲ್ಲಿ ಉಗ್ರರು ರಕ್ತದೋಕುಳಿ ಹರಿಸುತ್ತಿದ್ದಾರೆ. ವಾಯುವ್ಯ ಪಾಕಿಸ್ತಾನದ ಮಸೀದಿಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದೆ. ಇದರಲ್ಲಿ ಇಸ್ಲಾಮಿಕ್ ಪಕ್ಷದ ನಾಯಕ ಮತ್ತು ಮಕ್ಕಳು ಸೇರಿದಂತೆ ಇತರ ಮೂವರು ಗಾಯಗೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ವಜೀರಿಸ್ತಾನ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಆಸಿಫ್ ಬಹದ್ದೂರ್ ಮಾತನಾಡಿ, ಜಮಿಯತ್ ಉಲೇಮಾ ಇಸ್ಲಾಂ-ಫಜಲ್ (ಜೆಯುಐ-ಎಫ್) ರಾಜಕೀಯ ಪಕ್ಷದ ಸ್ಥಳೀಯ ನಾಯಕ ಅಬ್ದುಲ್ಲಾ ನದೀಮ್ ಸ್ಫೋಟದಲ್ಲಿ ಗುರಿಯಾಗಿದ್ದಾರೆ. ಗಂಭೀರ ಗಾಯಗಳಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. ಗಾಯಗೊಂಡವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಪಕ್ಕದಲ್ಲಿರುವ ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ದಾಳಿಗಳು ಹೆಚ್ಚಾಗಿವೆ. ಕಳೆದ ತಿಂಗಳು, ವಾಯುವ್ಯ ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಸೆಮಿನರಿಯಲ್ಲಿ ಶುಕ್ರವಾರ ಪ್ರಾರ್ಥನೆಯ ಸಮಯದಲ್ಲಿ ಆತ್ಮಹತ್ಯಾ ಬಾಂಬರ್ ಬಾಂಬ್ ಸ್ಫೋಟಿಸಿ ಆರು ಜನರು ಸಾವನ್ನಪ್ಪಿದ್ದರು. ಈ ಮದರಸಾವು ಅಫ್ಘಾನ್ ತಾಲಿಬಾನ್‌ಗೆ ಐತಿಹಾಸಿಕ ತರಬೇತಿ ಮೈದಾನವೆಂದು ಹೆಸರುವಾಸಿಯಾಗಿದೆ.
ಈ ವಾರದ ಆರಂಭದಲ್ಲಿ, ನೈಋತ್ಯ ಬಲೂಚಿಸ್ತಾನದಲ್ಲಿ ಉಗ್ರಗಾಮಿಗಳು ರೈಲನ್ನು ಅಪಹರಿಸಿ, ಪ್ರಯಾಣಿಕರು ಮತ್ತು ಭದ್ರತಾ ಪಡೆಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಮತ್ತೊಂದೆಡೆ, ಬೆಳೆಯುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಪ್ರತಿಜ್ಞೆ ಮಾಡಿದೆ ಮತ್ತು ನೆರೆಯ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರು ಸುರಕ್ಷಿತ ತಾಣವನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಆದಾಗ್ಯೂ, ಆಡಳಿತಾರೂಢ ಅಫ್ಘಾನ್ ತಾಲಿಬಾನ್ ಈ ಆರೋಪವನ್ನು ನಿರಾಕರಿಸಿದೆ.
ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಬಂಡುಕೋರರು ಹೈಜಾಕ್ ಮಾಡಿದ್ದ ಪ್ರಯಾಣಿಕ ರೈಲಿನ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿತ್ತು. ಹೈಜಾಕ್ ಮಾಡಿದ್ದ 30ಕ್ಕೂ ಹೆಚ್ಚು ಉಗ್ರರನ್ನು ಸಾಯಿಸಲಾಗಿದ್ದು ಉಗ್ರರ ಗುಂಡೇಟಿಗೆ 27 ಪಾಕ್ ಸೈನಿಕರು ಮೃತಪಟ್ಟಿದ್ದಾರೆ.