ಇಸ್ಲಾಮಾಬಾದ್: ಹಠ ಹಿಡಿದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಿ ಕೈ ಸುಟ್ಟು ಕೊಂಡಿರುವ ಪಾಕಿಸ್ತಾನದಲ್ಲಿ ನಿರುದ್ಯೋಗ ಮತ್ತು ಬಡತನ ತಾಂಡವವಾಡುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಅಲ್ಲಿನ ಚೀನಾ ಮೂಲದ ಕಾಲ್ ಸೆಂಟರ್ ಅನ್ನೇ ಜನರು ಲೂಟಿ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಇಸ್ಲಾಮಾಬಾದ್‌ನ ಸೆಕ್ಟರ್ ಎಫ್-11 ನಲ್ಲಿರುವ ಚೀನಾ ಮೂಲದ ಕಾಲ್ ಸೆಂಟರ್ ಸಂಸ್ಥೆಯೊಂದಕ್ಕೆ ನುಗ್ಗಿದ ನೂರಾರು ಪಾಕಿಗಳು ಕಚೇರಿಯಲ್ಲಿದ್ದ ನೂರಾರು ಕಂಪ್ಯೂಟರ್ ಗಳು ಮತ್ತು ಕೇಬಲ್ ಗಳು ಇತರೆ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಈ ಕಚೇರಿಗೆ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಮತ್ತು ಗುಪ್ತಚರ ಸಂಸ್ಥೆಗಳು ದಾಳಿ ನಡೆಸಿದ್ದವು. ಅಧಿಕಾರಿಗಳು ದಾಳಿ ಪೂರ್ಣಗೊಂಡು ಅಧಿಕಾರಿಗಳು ಅಲ್ಲಿಂದ ಹೊರಹೋಗುತ್ತಲೇ ಸ್ಥಳೀಯರು ಕಚೇರಿಗೆ ನುಗ್ಗಿ ಕೈ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಕೆಲವರು ಕಂಪ್ಯೂಟರ್ ಗಳನ್ನು ತೆಗೆದುಕೊಂಡು ಹೋದರೆ, ಮತ್ತೆ ಕೆಲವರು ಮಾನಿಟರ್, ಕೀಬೋರ್ಡ್ ಮೌಸ್, ಸಿಪಿಯು, ಅದರ ಕೇಬಲ್ ಸೇರಿದಂತೆ ಕೈ ಸಿಕ್ಕ ವಸ್ತುಗಳನ್ನು ಲೂಟಿ ಮಾಡುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಪಾಕಿಸ್ತಾನದ ಸ್ಥಳೀಯ ಸುದ್ದಿ ಸಂಸ್ಥೆ ದಿ ನೇಷನ್ ವರದಿಯ ಪ್ರಕಾರ, ಎಫ್‌ಐಎಯ ಸೈಬರ್ ಅಪರಾಧ ಕೋಶವು ಮಾರ್ಚ್ 15 ರ ಶನಿವಾರದಂದು ಅಂತರರಾಷ್ಟ್ರೀಯ ವಂಚನೆಯಲ್ಲಿ ಭಾಗಿಯಾಗಿರುವ ಶಂಕಿತ ಕಾಲ್ ಸೆಂಟರ್ ಅನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಯನ್ನು ನಡೆಸಿತ್ತು. ಪಾಕಿಸ್ತಾನಕ್ಕೆ ಅತ್ಯಂತ ಸ್ನೇಹಪರ ರಾಷ್ಟ್ರವಾಗಿರುವ ಚೀನಾ ಮೂಲದ ಸಂಸ್ಥೆ ಇದಾಗಿದ್ದು, ಇಲ್ಲಿ ಚೀನಾ ಪ್ರಜೆಗಳು ಸೇರಿದಂತೆ ಒಟ್ಟು 24 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದರು. ಆದಾಗ್ಯೂ, ದಾಳಿಯ ಸಮಯದಲ್ಲಿ ಕೆಲವು ಶಂಕಿತರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಅಧಿಕಾರಿಗಳು ಕಾಲ್ ಸೆಂಟರ್‌ನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಸ್ವಲ್ಪ ಸಮಯದವರೆಗೆ ತಿಳಿದಿದ್ದರು. ಆದರೆ ಕ್ರಮ ತೆಗೆದುಕೊಳ್ಳುವ ಮೊದಲು ಹಿರಿಯ ಅಧಿಕಾರಿಗಳ ಅನುಮೋದನೆಗಾಗಿ ಕಾಯುತ್ತಿದ್ದರು. ವಂಚನೆ ಕಾರ್ಯಾಚರಣೆಯು ವಂಚನೆ ಯೋಜನೆಗಳ ಮೂಲಕ ವಿವಿಧ ದೇಶಗಳಲ್ಲಿನ ಪ್ರಜೆಗಳನ್ನು ವಂಚಿಸಲು ಪಾಕಿಸ್ತಾನಿ ಪ್ರಜೆಗಳನ್ನು ಸಿಬ್ಬಂದಿಗಳನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಬಳಿಕ ಅಧಿಕಾರಿಗಳು ದಾಳಿ ಮಾಡಿ 24 ಮಂದಿಯನ್ನು ಬಂಧಿಸಿದ್ದಾರೆ. ಈ ದಾಳಿ ಬಳಿಕವೇ ಪಾಕಿಸ್ತಾನಿಯರು ಈ ಲೂಟಿ ಮಾಡಿದ್ದಾರೆ ಎನ್ನಲಾಗಿದೆ.
ಕಳಪೆ ಭದ್ರತೆಯೇ ಲೂಟಿಗೆ ಕಾರಣ
ಇನ್ನು ದಾಳಿ ವೇಳೆ ಅಧಿಕಾರಿಗಳು ಬೆರಳೆಣಿಕೆಯಷ್ಟು ಮಾತ್ರ ಭದ್ರತಾ ಸಿಬ್ಬಂದಿಗಳನ್ನು ಕರೆತಂದಿದ್ದರು. ಅವರೂ ಕೂಡ ಅಧಿಕಾರಿಗಳ ದಾಳಿ ಬಳಿಕ ಹೊರಟು ಹೋಗಿದ್ದರು. ಅಧಿಕಾರಿಗಳು ಹೊರಡುತ್ತಿದ್ದಂತೆಯೇ ಸ್ಥಳೀಯರು ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇನ್ನು ಈ ದಾಳಿ ಪ್ರಕರಣವನ್ನು ಗಂಭೀವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಅಲ್ಲದೆ ಸ್ಥಳೀಯರು ಲೂಟಿ ಮಾಡಿರುವ ಕಂಪ್ಯೂಟರ್ ಗಳು ವಂಚನೆ ಪ್ರಕರಣದ ಸಾಕ್ಷಿಗಳಾಗಿದ್ದು, ಕೂಡಲೇ ಅವುಗಳನ್ನು ಹಿಂದಿರುಗಿಸುವಂತೆ ಸೂಚಿಸಿದ್ದಾರೆ.
ಇನ್ನು ಬಂಧಿತ ವ್ಯಕ್ತಿಗಳನ್ನು ಹೆಚ್ಚಿನ ತನಿಖೆಗಾಗಿ FIA ಕಚೇರಿಗೆ ವರ್ಗಾಯಿಸಲಾಗಿದೆ. ಆದಾಗ್ಯೂ, FIA ಅಧಿಕಾರಿಗಳು ಅಕ್ರಮ ಕಾರ್ಯಾಚರಣೆಯಲ್ಲಿ ವಿದೇಶಿ ಪ್ರಜೆಗಳ ಭಾಗಿಯಾಗಿರುವುದನ್ನು ದೃಢಪಡಿಸಿದ್ದಾರೆ. ಆದರೆ ಹೆಚ್ಚುವರಿ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.