ಚೀನಾದ ಪ್ರಮುಖ ಆಡಳಿತ ನಗರದವಾಗಿರುವ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಮತ್ತೆ ಮಹಾಮಾರಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ ಎಂದು ವರದಿಯಾಗಿದ್ದು, ಹೊಸ ಅಲೆಯ ಆತಂಕ ಸೃಷ್ಟಿಸಿದೆ. ಚೀನಾ ಮತ್ತು ಥೈಲ್ಯಾಂಡ್‌ನಲ್ಲೂ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಹಾಂಗ್ ಕಾಂಗ್‌ನ ಆರೋಗ್ಯ ಅಧಿಕಾರಿಗಳು ಕೋವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಹಾಂಗ್ ಕಾಂಗ್‌ನಲ್ಲಿನ ಅಧಿಕಾರಿಗಳು, ಕೋವಿಡ್ ಹೊಸ ಅಲೆ ಪ್ರವೇಶಿಸಿದೆ ಎಂದು ಸೂಚಿಸಿದ್ದಾರೆ.
ಮಂಗಳವಾರ ಆರೋಗ್ಯ ರಕ್ಷಣಾ ಕೇಂದ್ರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸೋಂಕಿನ ಪ್ರಮಾಣವು ಮಾರ್ಚ್ ಮಧ್ಯದಲ್ಲಿ ಶೇ. 1.7 ರಿಂದ ಈಗ ಶೇ. 11.4 ಕ್ಕೆ ಏರಿದೆ. ಇದು ಆಗಸ್ಟ್ 2024 ರಲ್ಲಿ ದಾಖಲಾದ ಗರಿಷ್ಠ ಮಟ್ಟವನ್ನು ಮೀರಿದೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
ನಗರದಲ್ಲಿ ಕೋವಿಡ್ -19 ಪ್ರಕರಣಗಳು ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕೋವಿಡ್ ಪ್ರಕರಣಗಳ ಸಂಖ್ಯೆ ಉತ್ತುಂಗದಲ್ಲಿದೆ. ಮೇ 3 ರವರೆಗೆ ವರದಿಯಾದಂತೆ 31 ಗಂಭೀರ ಸ್ಥಿತಿಯ ಪ್ರಕರಣಗಳು ದಾಖಲಾಗಿವೆ ಹಾಗೂ ಸಾವಿನ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಹಾಂಗ್ ಕಾಂಗ್‌ನ ಆರೋಗ್ಯ ರಕ್ಷಣಾ ಕೇಂದ್ರದ ಸಾಂಕ್ರಾಮಿಕ ರೋಗಗಳ ಶಾಖೆಯ ಮುಖ್ಯಸ್ಥ ಆಲ್ಬರ್ಟ್ ಔ ಅವರು ತಿಳಿಸಿದ್ದಾರೆ.
ಕೋವಿಡ್ ಹೆಚ್ಚಳವೂ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದರ ಸೂಚನೆಯಾಗಿರಬಹುದು. ಹೀಗಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಅಲ್ಲಿನ ಅಧಿಕಾರಿಗಳು ಜನರನ್ನು ಒತ್ತಾಯಿಸುತ್ತಿದ್ದಾರೆ ಎಂದು ಇಂಡಿಪೆಂಡೆಂಟ್ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಇನ್ನು ಸಿಂಗಾಪುರದಲ್ಲಿಯೂ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಾಗಿ ವರದಿಯಾಗಿದೆ. ಸಿಂಗಾಪುರ ಆರೋಗ್ಯ ಸಚಿವಾಲಯವು ಈ ಮೇ ತಿಂಗಳಲ್ಲಿ ಸುಮಾರು ಒಂದು ವರ್ಷದ ನಂತರ ಇದೇ ಮೊದಲ ಬಾರಿಗೆ ಕೋವಿಡ್ ಬಗ್ಗೆ ಮಾಹಿತಿ ನೀಡಿದೆ. ಮೇ 3 ಕ್ಕೆ ಕೊನೆಗೊಂಡ ವಾರದಲ್ಲಿ ಕೋವಿಡ್ -19 ಪ್ರಕರಣಗಳು ಶೇ. 28 ರಷ್ಟು ಹೆಚ್ಚಾಗಿ, 14,200ಕ್ಕೆ ತಲುಪಿದೆ.
ಅಲ್ಲದೆ ದೈನಂದಿನ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಸುಮಾರು ಶೇ. 30 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.