ಕಠ್ಮಂಡು: ನೇಪಾಳದ ಕೇಂದ್ರ ಬ್ಯಾಂಕ್ ಗುರುವಾರ ಹೊಸ ರೂ. 100 ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತವು "ಕೃತಕ ವಿಸ್ತರಣೆ" ಎಂದು ಕರೆಯುವ ವಿವಾದಾತ್ಮಕ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರ ಪ್ರದೇಶಗಳು ಒಳಗೊಂಡ ಪರಿಷ್ಕೃತ ನಕ್ಷೆ ಇದೆ.
ನೇಪಾಳ ರಾಷ್ಟ್ರ ಬ್ಯಾಂಕ್(NRB) ಬಿಡುಗಡೆ ಮಾಡಿದ ಈ ಹೊಸ ನೋಟಿನಲ್ಲಿ ಹಿಂದಿನ ಗವರ್ನರ್ ಮಹಾ ಪ್ರಸಾದ್ ಅಧಿಕಾರಿ ಅವರ ಸಹಿ ಇದೆ. ಬ್ಯಾಂಕ್ ನೋಟಿನ ಬಿಡುಗಡೆ ದಿನಾಂಕವನ್ನು 2081 BS ಎಂದು ಉಲ್ಲೇಖಿಸಲಾಗಿದೆ, ಇದು ಹಿಂದಿನ ವರ್ಷ(2024)ವನ್ನು ಸೂಚಿಸುತ್ತದೆ.
ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರದಲ್ಲಿ, ನೇಪಾಳವು ಮೇ 2020 ರಲ್ಲಿ ಸಂಸತ್ತಿನ ಅನುಮೋದನೆಯ ಮೂಲಕ ಕಲಾಪಾನಿ, ಲಿಪುಲೇಕ್ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ಒಳಗೊಂಡ ನಕ್ಷೆಯನ್ನು ನವೀಕರಿಸಲಾಗಿದೆ.
ನಕ್ಷೆಯ ನವೀಕರಿಸಿದ ಆವೃತ್ತಿಯ ಕುರಿತು ಸ್ಪಷ್ಟಪಡಿಸಿದ NRB ವಕ್ತಾರರು, ನಕ್ಷೆಯು ಹಳೆಯ ರೂ. 100 ಬ್ಯಾಂಕ್ ನೋಟಿನಲ್ಲಿ ಈಗಾಗಲೇ ಇದೆ ಮತ್ತು ಸರ್ಕಾರದ ನಿರ್ಧಾರದ ಪ್ರಕಾರ ಅದನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
10 ರೂ., 50 ರೂ., 500 ರೂ. ಮತ್ತು 1,000 ರೂ. ನಂತಹ ವಿವಿಧ ಮುಖಬೆಲೆಯ ಬ್ಯಾಂಕ್ ನೋಟುಗಳಲ್ಲಿ ಯಾವುದೇ ನಕ್ಷೆ ಇಲ್ಲ. ಆದರೆ 100 ರೂ. ಮುಖಬೆಲೆಯ ಬ್ಯಾಂಕ್ ನೋಟು ಮಾತ್ರ ನೇಪಾಳದ ನಕ್ಷೆಯನ್ನು ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಲಿಪುಲೇಖ್, ಕಲಾಪಾಣಿ ಮತ್ತು ಲಿಂಪಿಯಾಧುರವು ನಮ್ಮ ದೇಶಕ್ಕೆ ಸೇರಿವೆ ಎಂದು ಭಾರತ ಹೇಳುತ್ತದೆ.
2020 ರಲ್ಲಿ ಭಾರತವು ಈ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿ, ನೇಪಾಳದ ಪರಿಷ್ಕೃತ ನಕ್ಷೆಯನ್ನು "ಏಕಪಕ್ಷೀಯ ಕ್ರಿಯೆ" ಎಂದು ಕರೆದಿತ್ತು ಮತ್ತು ಪ್ರಾದೇಶಿಕ ಹಕ್ಕುಗಳಂತಹ "ಕೃತಕ ವಿಸ್ತರಣೆ" ಸ್ವೀಕಾರಾರ್ಹವಲ್ಲ ಎಂದು ಕಠ್ಮಂಡುವಿಗೆ ಎಚ್ಚರಿಕೆ ನೀಡಿತ್ತು.