ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂಬ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಇದು ಪಾಕಿಸ್ತಾನದ ಸಾಮಾಜಿಕ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.
ಜೈಲಿನಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಬಗ್ಗೆ ಪರಿಶೀಲಿಸದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ಟ್ರೆಂಡ್ ಆಗಿವೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ "ಕೊಲೆಯಾಗಿದ್ದಾರೆ" ಎಂದು ಮೂಲಗಳಿಂದ ಮಾಹಿತಿ ಇದೆ ಎಂದು ಅಫ್ಘಾನ್ ಟೈಮ್ಸ್ ಎಂಬ ನ್ಯೂಸ್ ಹ್ಯಾಂಡಲ್ ಹೇಳಿಕೊಂಡ ನಂತರ ವದಂತಿಗಳು ಪ್ರಾರಂಭವಾಗಿವೆ.
ಆಧಾರರಹಿತ ಮತ್ತು ಪರಿಶೀಲಿಸದ ಈ ಹೇಳಿಕೆಗಳನ್ನು ಯಾವುದೇ ವಿಶ್ವಾಸಾರ್ಹ ಸಂಸ್ಥೆ ಅಥವಾ ಇಲಾಖೆ ಇದುವರೆಗೆ ದೃಢೀಕರಿಸಿಲ್ಲ. ಇಮ್ರಾನ್ ಖಾನ್ ಅವರ ಮೃತದೇಹದ್ದು ಎನ್ನಲಾದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇಮ್ರಾನ್ ಬಗ್ಗೆ ಹರಡಿರುವ ಸುದ್ದಿಗಳನ್ನು ಸತ್ಯಾಸತ್ಯತೆಯನ್ನು ತಿಳಿಯಲು ಇಮ್ರಾನ್ ಅವರ ಸೋದರಿಯರು ಇತ್ತೀಚೆಗೆ ಅದಾಲಾ ಜೈಲಿಗೆ ಭೇಟಿ ನೀಡಿದ್ದಾಗ, ಅವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಇದು ಇಮ್ರಾನ್ ಅವರ ಸಾವಿನ ಬಗ್ಗೆ ಇರುವ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಸದಸ್ಯರ ಪ್ರಕಾರ, ಇಮ್ರಾನ್ ಖಾನ್ ಅವರ ಸಹೋದರಿಯರಾದ ನೂರಿನ್ ನಿಜಾಮ್, ಅಲೀಮಾ ಖಾನ್ ಮತ್ತು ಡಾ. ಉಜ್ಮಾ ಖಾನ್ ಅವರು ಅದಾಲಾ ಜೈಲಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ತಮ್ಮ ಸಹೋದರನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಅವರು ಮನವಿ ಮಾಡುತ್ತಿದ್ದರು.
ಆದರೆ, ಪೊಲೀಸರು ಯಾವುದೇ ಎಚ್ಚರಿಕೆ ನೀಡದೆ, ದಿಢೀರನೆ ಬೀದಿ ದೀಪಗಳನ್ನು ಆಫ್ ಮಾಡಿ, ಕತ್ತಲಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೂರಿನ್ ನಿಜಾಮ್ ಆರೋಪಿಸಿದ್ದಾರೆ.