ನವದೆಹಲಿ: ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದ ಜೌಗು ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಆನೆಯೊಂದು ದಾಳಿ ಮಾಡಿದ್ದು ಬೋಟಿಂಗ್ ಮಾಡುತ್ತಿದ್ದವರು ಜೀವ ಉಳಿಸಿಕೊಳ್ಳಲು ಓಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬೋಟ್ಸ್ವಾನಾದ ಜೌಗು ಪ್ರದೇಶಗಳಲ್ಲಿ ಈ ಘಟನೆ ನಡೆದಿದ್ದು, ಸಫಾರಿ ದೋಣಿ ಪ್ರವಾಸದ ಸಮಯದಲ್ಲಿ ತನ್ನ ಮರಿಗಳ ಹತ್ತಿರಕ್ಕೆ ಹೋದ ಹಿನ್ನಲೆಯಲ್ಲಿ ಆನೆಯೊಂದು ಪ್ರವಾಸಿಗರ ದೋಣಿಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಅಮೆರಿಕ ಮತ್ತು ಬ್ರಿಟೀಷ್ ಪ್ರವಾಸಿಗರಿದ್ದ2 ದೋಣಿಗಳು ಮಗುಚಿಕೊಂಡಿದ್ದು, ದೋಣಿಯಲ್ಲಿದ್ದ ಪ್ರವಾಸಿಗರು ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಸೆಪ್ಟೆಂಬರ್ 27 ರಂದು ಪ್ರಸಿದ್ಧ ವನ್ಯಜೀವಿ ಪ್ರದೇಶವಾದ ಒಕಾವಾಂಗೊ ಡೆಲ್ಟಾದ ಆಳವಿಲ್ಲದ ನೀರಿನಲ್ಲಿ ಈ ಘಟನೆ ಸಂಭವಿಸಿದೆ. ಸಹ ಪ್ರವಾಸಿಗರು ಸೆರೆಹಿಡಿದ ನಾಟಕೀಯ ದೃಶ್ಯಗಳು, ತಾಯಿ ಆನೆಯು ತನ್ನ ಕುಟುಂಬಕ್ಕೆ ತುಂಬಾ ಹತ್ತಿರಕ್ಕೆ ಹೋದಾಗ ಅವರ ಗುಂಪಿನ ಮೇಲೆ ದಾಳಿ ಮಾಡಿದ ಕ್ಷಣವನ್ನು ತೋರಿಸುತ್ತದೆ.
ಮೊಕೊರೊಸ್ ಎಂದು ಕರೆಯಲ್ಪಡುವ ದೋಣಿಗಳನ್ನು ಆಫ್ರಿಕಾ ಮೂಲದ ಅಂಬಿಗ ಚಲಾವಣೆ ಮಾಡುತ್ತಿದ್ದಾಗ ಉದ್ರಿಕ್ತ ಆನೆ ಏಕಾಏಕಿ ದೋಣಿಗಳ ಮೇಲೆ ದಾಳಿ ಮಾಡಲು ಅಟ್ಟಾಡಿಸಿದೆ.
ಈ ವೇಳೆ ಪ್ರವಾಸಿದರು ತಪ್ಪಿಸಿಕೊಳ್ಳಲು ವೇಗವಾಗಿ ದೋಣಿ ಚಲಾಯಿಸಿದ್ದಾರೆಯಾದರೂ ವೇಗವಾಗಿ ಬಂದ ಆನೆ 2 ದೋಣಿಗಳ ಮೇಲೆ ದಾಳಿ ನಡೆಸಿದೆ. ತನ್ನ ಸೊಂಡಿಲನ್ನು ಬಳಸಿ, ಆನೆ ಎರಡು ದೋಣಿಗಳನ್ನು ಡಿಕ್ಕಿ ಹೊಡೆದು ಪ್ರವಾಸಿಗರನ್ನು ನೀರಿಗೆ ಬೀಳಿಸಿದೆ.
ಈ ಘಟನೆಯಿಂದ ಫೋನ್‌ಗಳು ಮತ್ತು ಕ್ಯಾಮೆರಾಗಳು ಸೇರಿದಂತೆ ಸಿಬ್ಬಂದಿಯ ವೈಯಕ್ತಿಕ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೊಳಗಾದವು ಎಂದು ಸಫಾರಿ ಸಿಬ್ಬಂದಿ ತಿಳಿಸಿದ್ದಾರೆ.