ಕೀವ್: ರಷ್ಯಾದ ಸೇನೆಗೆ ಸೇರ್ಪಡೆಯಾಗಿದ್ದ ಭಾರತ ಮೂಲದ ವ್ಯಕ್ತಿಯೊಬ್ಬರು ಮಂಗಳವಾರ ಉಕ್ರೇನ್ ಪಡೆಗಳಿಗೆ ಶರಣಾಗಿದ್ದಾರೆ ಎಂದು ಉಕ್ರೇನ್ ಮಾಧ್ಯಮಗಳು ವರದಿ ಮಾಡಿವೆ.
ಹೌದು.. ರಷ್ಯಾ ಸೇನೆಯಲ್ಲಿದ್ದ ಭಾರತ ಮೂಲದ ವ್ಯಕ್ತಿಯನ್ನು ಮಂಗಳವಾರ ಉಕ್ರೇನ್ ಸೇನಾಪಡೆಗಳು ವಶಕ್ಕೆ ಪಡೆದಿದ್ದು, ಈ ಕುರಿತು ಭಾರತ ಸರ್ಕಾರಕ್ಕೂ ಮಾಹಿತಿ ನೀಡಿವೆ ಎಂದು ಹೇಳಲಾಗಿದೆ. ಗುಜರಾತ್ ಮೂಲದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಎಂಬುವರನ್ನು ಉಕ್ರೇನ್ ಪಡೆಗಳು ಸೆರೆಹಿಡಿದಿವೆ ಎಂದು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ.
22 ವರ್ಷದ ಹುಸೇನ್ ಕೇವಲ ಮೂರು ದಿನಗಳನ್ನು ಮಾತ್ರ ರಷ್ಯಾ ಸೇನೆಯಲ್ಲಿ ಮುಂಚೂಣಿಯಲ್ಲಿ ಕಳೆದರು. ತಾನು ರಷ್ಯಾಕ್ಕೆ ಅಧ್ಯಯನ ಮಾಡಲು ಬಂದಿದ್ದಾಗಿ ಹೇಳಿಕೊಂಡಿದ್ದ. ಆದರೆ ಬಳಿಕ ಮಾದಕವಸ್ತುಗಳೊಂದಿಗೆ ಸಿಕ್ಕಿಬಿದ್ದಿದ್ದಕ್ಕೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದಾದ ನಂತರ, ಆತನನ್ನು ರಷ್ಯಾದ ಸಶಸ್ತ್ರ ಪಡೆಗಳೊಂದಿಗೆ ಒಪ್ಪಂದವನ್ನು ನೀಡಲಾಯಿತು ಎಂದು ಹೇಳಲಾಗಿದೆ.
‘ನಾನು ವ್ಯಾಸಂಗ ಮಾಡುವುದಕ್ಕಾಗಿ ರಷ್ಯಾಕ್ಕೆ ಬಂದಿದ್ದೆ. ಆದರೆ, ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಎಂಬ ಆರೋಪದ ಮೇಲೆ ನನಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ರಷ್ಯಾ ಸೇನೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ನಾನು ಜೈಲಿನಲ್ಲಿ ಉಳಿಯಲು ಬಯಸಲಿಲ್ಲ, ಆದ್ದರಿಂದ ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೆ. 16 ದಿನಗಳ ತರಬೇತಿ ಪಡೆದ ನಂತರ ಅಕ್ಟೋಬರ್ 1ರಂದು ನನ್ನನ್ನು ಯುದ್ಧ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು’ ಎಂದು ಹುಸೇನ್ ವಿವರಿಸಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉದ್ದೇಶಪೂರ್ವಕಾಗಿ ಉಕ್ರೇನ್ ಸೇನೆಗೆ ಶರಣಾದೆ
ಅಂತೆಯೇ "ನಾನು ಸುಮಾರು 2-3 ಕಿಲೋಮೀಟರ್ (1-2 ಮೈಲುಗಳು) ದೂರದಲ್ಲಿ ಉಕ್ರೇನಿಯನ್ ಕಂದಕ ಸ್ಥಾನವನ್ನು ಕಂಡೆ... ಈ ವೇಳೆ ನಾನು ತಕ್ಷಣ ನನ್ನ ರೈಫಲ್ ಅನ್ನು ಕೆಳಗಿಟ್ಟು, ನಾನು ಹೋರಾಡಲು ಬಯಸುವುದಿಲ್ಲ. ನನಗೆ ಸಹಾಯ ಬೇಕು ಎಂದು ಹೇಳಿ ಉಕ್ರೇನ್ ಸೇನೆ ಎದುರು ಶರಣಾದೆ" ಎಂದು ಹುಸ್ಸೇನ್ ಹೇಳಿದ್ದಾರೆ.
ವಿದೇಶಾಂಗ ಇಲಾಖೆ ಸ್ಪಷ್ಟನೆ
ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ 27 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸುವಂತೆ ಭಾರತ ಒತ್ತಾಯಿಸಿದೆ ಎಂದು ವಿದೇಶಾಂಗ ಸಚಿವಾಲಯವು ಈ ಹಿಂದೆ ತಿಳಿಸಿತ್ತು. ವಿದ್ಯಾರ್ಥಿ ಮತ್ತು ವ್ಯಾಪಾರ ವೀಸಾದಡಿ ರಷ್ಯಾಕ್ಕೆ ಬಂದಿರುವ ಭಾರತೀಯರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಟ ನಡೆಸಲು ಸೇನೆಗೆ ಸೇರುವಂತೆ ಒತ್ತಾಯಿಸಲಾಗುತ್ತಿದೆ. ಸದ್ಯ ರಷ್ಯಾದ ಸೇನೆಗೆ ನೇಮಕಗೊಂಡ ಭಾರತೀಯರ ಸಂಖ್ಯೆ 150ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ರಷ್ಯಾ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವ್ಲಾಡಿಮಿರ್ ಪುಟಿನ್ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಅಂತೆಯೇ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಕನಿಷ್ಠ 12 ಭಾರತೀಯರು ಮೃತಪಟ್ಟಿದ್ದರೆ, ರಷ್ಯಾದ ಅಧಿಕಾರಿಗಳು 96 ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ 16 ಜನರನ್ನು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.