ಮನಿಲಾ: ದಕ್ಷಿಣ ಫಿಲಿಪೈನ್ಸ್ ಪ್ರಾಂತ್ಯದಲ್ಲಿ ಶುಕ್ರವಾರ ಬೆಳಗ್ಗೆ 7.6 ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅಪಾಯಕಾರಿ ಸುನಾಮಿ ಉಂಟಾಗುವ ಸಾಧ್ಯತೆಯಿದೆ. ದಾವೋ ಓರಿಯೆಂಟಲ್ ಪ್ರಾಂತ್ಯದ ಮನಾಯ್ ಪಟ್ಟಣದ ಆಗ್ನೇಯಕ್ಕೆ ಸುಮಾರು 62 ಕಿಲೋಮೀಟರ್ (38 ಮೈಲುಗಳು) ದೂರದಲ್ಲಿ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರದಿಂದ 300 ಕಿಲೋಮೀಟರ್ (186 ಮೈಲುಗಳು) ಒಳಗೆ ಅಪಾಯಕಾರಿ ಅಲೆಗಳು ಸುನಾಮಿ ಅಲೆಗಳು ಉಂಟಾಗುವ ಸಾಧ್ಯತೆ ಇರುವುದಾಗಿ ಹೊನೊಲುಲುವಿನ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ.
ಭೂಕಂಪನದ ಸಮೀಪವಿರುವ ಕೆಲವು ಫಿಲಿಪೈನ್ ಕರಾವಳಿಗಳಲ್ಲಿ ಸಾಮಾನ್ಯ ಅಲೆಗಳಿಗಿಂತ 3 ಮೀಟರ್ (10 ಅಡಿ) ವರೆಗಿನ ಅಲೆಗಳು, ಇಂಡೋನೇಷ್ಯಾ ಮತ್ತು ಪಲಾವ್ನಲ್ಲಿ ಸಣ್ಣ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.
ಸೆಪ್ಟೆಂಬರ್ 30 ರ ಭೂಕಂಪದಿಂದ ಫಿಲಿಪೈನ್ಸ್ ಇನ್ನೂ ಚೇತರಿಸಿಕೊಳ್ಳುತ್ತಿದೆ. ಸೆಂಟ್ರಲ್ ಪ್ರಾಂತ್ಯದ ಸಿಬುದಲ್ಲಿ, ವಿಶೇಷವಾಗಿ ಬೊಗೊ ನಗರ ಮತ್ತು ಹೊರಗಿನ ಪಟ್ಟಣಗಳಲ್ಲಿ ಸಂಭವಿಸಿದ್ದ 6.9 ರ ತೀವ್ರತೆಯ ಭೂಕಂಪದಿಂದ 74 ಜನರು ಸಾವನ್ನಪ್ಪಿದ್ದರು. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿತ್ತು.
ಪ್ರಪಂಚದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರಗಳಲ್ಲಿ ಒಂದಾದ ಫಿಲಿಪೈನ್ಸ್ ನಲ್ಲಿ ಸಾಮಾನ್ಯವಾಗಿ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಪೋಟವಾಗುತ್ತಿರುತ್ತದೆ. ದ್ವೀಪಸಮೂಹವು ಪ್ರತಿ ವರ್ಷ ಚಂಡಮಾರುತಗಳ ಹೊಡೆತಕ್ಕೆ ಸಿಲುಕುತ್ತದೆ.