ಅಫ್ಘಾನಿಸ್ತಾನದ ಕಾಬೂಲ್ ಮೇಲಿನ ವಾಯುದಾಳಿಯಿಂದ ಭುಗಿಲೆದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಈಗ ಪೂರ್ಣ ಪ್ರಮಾಣದ ಯುದ್ಧದತ್ತ ಸಾಗುತ್ತಿರುವಂತೆ ಕಾಣುತ್ತಿದೆ. ಕಾಬೂಲ್ ದಾಳಿಗೆ ಪ್ರತಿಕ್ರಿಯೆಯಾಗಿ ತಾಲಿಬಾನ್ ನೇತೃತ್ವದ ಅಫ್ಘಾನ್ ಭದ್ರತಾ ಪಡೆಗಳು ಶನಿವಾರ ತಡರಾತ್ರಿ ಡುರಾಂಡ್ ಲೈನ್ (ಅಫ್ಘಾನ್-ಪಾಕಿಸ್ತಾನ ಗಡಿ) ದಾಟಿ ಪಾಕಿಸ್ತಾನಿ ಸೇನಾ ಔಟ್‌ಪೋಸ್ಟ್‌ಗಳ ಮೇಲೆ ದಾಳಿ ಮಾಡಿವೆ. ಗಡಿ ಪ್ರಾಂತ್ಯಗಳಿಂದ ಅಫ್ಘಾನ್ ಪಡೆಗಳು ಏಕಕಾಲಕ್ಕೆ ಪಾಕ್ ಚೆಕ್ ಪೋಸ್ಟ್ ಗಳ ಮೇಲೆ ದಾಳಿ ನಡೆಸಿವೆ. ಏಳು ಪಾಕಿಸ್ತಾನಿ ಸೇನಾ ಔಟ್‌ಪೋಸ್ಟ್‌ಗಳು ನಾಶವಾಗಿದ್ದು ಹಲವು ಪೋಸ್ಟ್ ಗಳನ್ನು ಅಫ್ಘಾನ್ ಪಡೆಗಳು ವಶಪಡಿಸಿಕೊಂಡಿವೆ. ದಾಳಿ ಎಷ್ಟು ಅನಿರೀಕ್ಷಿತವಾಗಿತ್ತೆಂದರೆ ಪಾಕಿಸ್ತಾನಿ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪಲಾಯನ ಮಾಡಬೇಕಾಯಿತು.
ಅಫ್ಘಾನಿಸ್ತಾನ್ ದಾಳಿ ನಡೆಸಿದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಅಲ್ಲಾಹು ಅಕ್ಬರ್ ಎಂದು ಪ್ರಾರ್ಥನೆ ಮಾಡುತ್ತಾ ಭಯಪಡುತ್ತಿರುವುದನ್ನು ಕೇಳಬಹುದು. ಪಾಕಿಸ್ತಾನದ ಸೈನಿಕರ ಗುಂಪು ನಿಂತಿದ್ದ ಜಾಗಕ್ಕೆ ಅಫ್ಘಾನ್ ದಾಳಿ ನಡೆಸಿದೆ. ಆ ದಾಳಿಯ ಹೊಡೆತಕ್ಕೆ ಪಾಕಿಸ್ತಾನಿ ಸೈನಿಕರು ಛಿದ್ರವಾಗಿದ್ದು ದೇಹಗಳು ಆಕಾಶದೆತ್ತರಕ್ಕೆ ಹಾರಿ ಬಿದ್ದಿದೆ. ಇದುವರೆಗೂ ಪಾಕಿಸ್ತಾನದ 58 ಸೈನಿಕರನ್ನು ಕೊಂದಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
ಆಫ್ಘಾನ್ ಪಡೆಗಳ ದಾಳಿಯ ನಂತರ ಪಾಕಿಸ್ತಾನಿ ಸೈನಿಕರು ಓಡಿಹೋದರು ಎಂದು ಹುರಿಯತ್ ರೇಡಿಯೋ ವರದಿ ಮಾಡಿದೆ. ಖೋಸ್ಟ್ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ತ್ಯಜಿಸಿದ ಶಸ್ತ್ರಾಸ್ತ್ರಗಳನ್ನು ಅಫ್ಘಾನ್ ಪಡೆಗಳು ಪರಿಶೀಲಿಸುತ್ತಿರುವ ವೀಡಿಯೊವನ್ನು ಹುರಿಯತ್ ರೇಡಿಯೋ ಪ್ರಸಾರ ಮಾಡಿದೆ. ಅಫ್ಘಾನ್ ಮಾಧ್ಯಮ ವರದಿಗಳ ಪ್ರಕಾರ, ಹೆಲ್ಮಂಡ್, ಕಂದಹಾರ್, ಜಬುಲ್, ಪಕ್ತಿಕಾ, ಖೋಸ್ಟ್, ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಪಾಕಿಸ್ತಾನಿ ನೆಲೆಗಳ ಮೇಲೆ ಅಫ್ಘಾನ್ ಪಡೆಗಳು ದಾಳಿ ಮಾಡಿವೆ. ಕಾರ್ಯಾಚರಣೆ ಮಧ್ಯರಾತ್ರಿ 12 ಗಂಟೆಗೆ ಕೊನೆಗೊಂಡಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಆದಾಗ್ಯೂ, ಇತ್ತೀಚಿನ ವರದಿಗಳು ಹೋರಾಟ ಇನ್ನೂ ಮುಂದುವರೆದಿದೆ ಎಂದು ಸೂಚಿಸುತ್ತವೆ. ಪಾಕಿಸ್ತಾನಿ ಸೇನೆಯು ನಿರಂತರವಾಗಿ ಮಾರ್ಟರ್‌ಗಳಿಂದ ಅಫ್ಘಾನಿಸ್ತಾನದ ಮೇಲೆ ಶೆಲ್ ದಾಳಿ ನಡೆಸುತ್ತಿದೆ.
ಅಫ್ಘಾನಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿಗೆ ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸುತ್ತಿದ್ದೇವೆ ಎಂದು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಗಡಿಯುದ್ದಕ್ಕೂ 6ಕ್ಕೂ ಹೆಚ್ಚು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಅವರು ವರದಿ ಮಾಡಿದ್ದಾರೆ. ಮೂರು ಪಾಕಿಸ್ತಾನಿ ಗಡಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಪಡೆಗಳು ಹೇಳಿವೆ ಎಂದು ಸಿಎನ್‌ಎನ್ ವರದಿ ಉಲ್ಲೇಖಿಸಿದೆ. ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಹಲವಾರು ಅಫ್ಘಾನ್ ಸ್ಥಾನಗಳನ್ನು ನಾಶಪಡಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಹಂಚಿಕೊಂಡ ವೀಡಿಯೊ ದೃಶ್ಯಗಳು ಅಫ್ಘಾನ್ ಕಡೆಯಿಂದ ಬಂದೂಕು ಮತ್ತು ಫಿರಂಗಿ ಗುಂಡಿನ ದಾಳಿಯನ್ನು ತೋರಿಸುತ್ತವೆ.