ಗಾಜಾ ಶೃಂಗಸಭೆಯಲ್ಲಿ ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ಬಹಳ ಚೆನ್ನಾಗಿ ಬದುಕಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದು, ಅವರ ಹಿಂದೆ ನಿಂತಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ನೋಡುತ್ತಾ ನಗುನಗುತ್ತಾ ಪ್ರತಿಕ್ರಿಯಿಸಿದರು.
ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಭಾರತವು ಒಟ್ಟಿಗೆ ಬಹಳ ಚೆನ್ನಾಗಿ ಬದುಕಲಿವೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಹೇಳಿದರು.
ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಗಾಜಾ ಶೃಂಗಸಭೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಿದ್ದರು. ಟ್ರಂಪ್ ಷರೀಫ್ ಕಡೆಗೆ ತಿರುಗಿ "ನೀವು ಏನಾದರೂ ಹೇಳಲು ಬಯಸುತ್ತೀರಾ?" ಎಂದು ಕೇಳಿ ಅಂದು ನನ್ನಲ್ಲಿ ಹೇಳಿದ ಮಾತುಗಳನ್ನು ಇಂದು ಹೇಳಿ ಎಂದರು.
ಪಾಕಿಸ್ತಾನ ಪ್ರಧಾನಿ ಏನೆಂದರು?
ಐದು ನಿಮಿಷಗಳ ಭಾಷಣದಲ್ಲಿ, ಪಾಕಿಸ್ತಾನ ಪ್ರಧಾನಿ ಭಾರತ-ಪಾಕ್ ಸಂಘರ್ಷ ಪ್ರದೇಶಗಳಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಟ್ರಂಪ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ಟ್ರಂಪ್ ಅವರನ್ನು ಶಾಂತಿಯ ದೂತ ಎಂದು ಹೊಗಳಿದರು.
ಸಮಕಾಲೀನ ಇತಿಹಾಸದಲ್ಲಿ ಇದು ಅತ್ಯಂತ ಶ್ರೇಷ್ಠ ದಿನಗಳಲ್ಲಿ ಒಂದು ಎಂದು ನಾನು ಹೇಳುತ್ತೇನೆ, ಏಕೆಂದರೆ ನಿರಂತರ ಪ್ರಯತ್ನಗಳ ನಂತರ ಶಾಂತಿಯನ್ನು ಸಾಧಿಸಲಾಗಿದೆ. ಅಧ್ಯಕ್ಷ ಟ್ರಂಪ್ ನೇತೃತ್ವದ ಪ್ರಯತ್ನಗಳು ನಿಜವಾಗಿಯೂ ಶಾಂತಿಪ್ರಿಯವಾಗಿದ್ದು, ಈ ಜಗತ್ತನ್ನು ಶಾಂತಿ ಮತ್ತು ಸಮೃದ್ಧಿಯಲ್ಲಿ ಬದುಕಲು ಒಂದು ಸ್ಥಳವನ್ನಾಗಿ ಮಾಡಲು ಇಷ್ಟು ಸಮಯಗಳಲ್ಲಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವಿರತವಾಗಿ ಶ್ರಮಿಸಿದ್ದಾರೆ" ಎಂದು ಶೆಹಬಾಜ್ ಷರೀಫ್ ಹೇಳಿದರು.
ನೊಬೆಲ್ ಶಾಂತಿ ಸಿಗಲೇಬೇಕು
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಮತ್ತು ಮಧ್ಯಪ್ರಾಚ್ಯದಲ್ಲಿ ಕದನ ವಿರಾಮಕ್ಕೆ ಕೊಡುಗೆ ನೀಡುವಲ್ಲಿ ಅಧ್ಯಕ್ಷರ ಪಾತ್ರವನ್ನು ಉಲ್ಲೇಖಿಸಿ, ತಮ್ಮ ಸರ್ಕಾರ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು ಎಂದು ಷರೀಫ್ ಹೇಳಿದರು.
ಮತ್ತೊಮ್ಮೆ, ನಾನು ಈ ಮಹಾನ್ ಅಧ್ಯಕ್ಷರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಬಯಸುತ್ತೇನೆ. ಏಕೆಂದರೆ ಅವರು ಶಾಂತಿ ಪ್ರಶಸ್ತಿಗೆ ಅತ್ಯಂತ ನಿಜವಾದ ಮತ್ತು ಅದ್ಭುತ ಅಭ್ಯರ್ಥಿ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ ಎಂದು ಹೇಳಿದರು.
ಯುದ್ಧ ನಡೆಯುತ್ತಿತ್ತು
ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಶಕ್ತಿ ರಾಷ್ಟ್ರಗಳಾಗಿರುವಾಗ ಈ ಸಂಭಾವಿತ ವ್ಯಕ್ತಿ ಇಲ್ಲದಿದ್ದರೆ, ಆ ನಾಲ್ಕು ದಿನಗಳಲ್ಲಿ ಟ್ರಂಪ್ ಅವರು ತಮ್ಮ ಅದ್ಭುತ ತಂಡದೊಂದಿಗೆ ಮಧ್ಯಪ್ರವೇಶಿಸದಿದ್ದರೆ, ಯುದ್ಧವು ಒಂದು ಹಂತಕ್ಕೆ ಏರಿಕೆಯಾಗುತ್ತಿತ್ತು, ಏನಾಯಿತು ಎಂದು ಹೇಳಲು ಯಾರು ಬದುಕುತ್ತಿರಲಿಲ್ಲವೇನೋ ಎಂದು ಷರೀಫ್ ಹೇಳಿದರು.
ಆಗ ಡೊನಾಲ್ಡ್ ಟ್ರಂಪ್ ಅವರು ಮತ್ತೆ ವೇದಿಕೆಯಲ್ಲಿ ಉತ್ಸಾಹದಿಂದ ಹಾಸ್ಯಮಯವಾಗಿ ಪ್ರತಿಕ್ರಿಯಿಸುತ್ತಾ, "ವಾವ್! ನಾನು ಅದನ್ನು ನಿರೀಕ್ಷಿಸಿರಲಿಲ್ಲ. ನಾನು ಹೇಳಲು ಇನ್ನೇನೂ ಇಲ್ಲ. ಬಹಳ ಅದ್ಭುತವಾಗಿ ಮಾತನಾಡಿದ್ದೀರಿ, ಇನ್ನು ಎಲ್ಲರೂ ಮನೆಗೆ ಹೋಗೋಣ ತುಂಬಾ ಧನ್ಯವಾದಗಳು ಎಂದರು.
ನಂತರ ಈ ಕಾರ್ಯಕ್ರಮದಲ್ಲಿ, ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸುತ್ತಾ, ಭಾರತವು ನನ್ನ ಉತ್ತಮ ಸ್ನೇಹಿತನ ನಾಯಕತ್ವದಲ್ಲಿ ಉತ್ತಮ ದೇಶವಾಗಿದೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದರು.