ಇಸ್ಲಾಮಾಬಾದ್: ಕಾಬೂಲ್‌ನೊಂದಿಗಿನ ಇಸ್ಲಾಮಾಬಾದ್‌ನ ವ್ಯಾಪಕ ಉದ್ವಿಗ್ನತೆ ಹಿಂದೆ ಭಾರತವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಸಾಮಾ ಟಿವಿಯೊಂದಿಗೆ ಮಾತನಾಡಿದ ಆಸಿಫ್, ಭಾರತವು 'ಗಡಿ ವಿಚಾರದಲ್ಲಿ ಕೊಳಕು ಆಟದಲ್ಲಿ ತೊಡಗಿಕೊಳ್ಳಬಹುದು' ಮತ್ತು ಅಫ್ಗಾನಿಸ್ತಾನದೊಂಗಿನ ಗಡಿ ಉದ್ವಿಗ್ನತೆಯ ನಡುವೆ ಅಗತ್ಯ ಬಿದ್ದರೆ ಪಾಕಿಸ್ತಾನವು ಎರಡೂ ದೇಶಗಳೊಂದಿಗೆ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಭಾರತದ ಪ್ರಚೋದನೆಗಳ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಸಿಫ್, 'ಇಲ್ಲ, ಸಂಪೂರ್ಣವಾಗಿ, ನೀವು ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಬಲವಾದ ಸಾಧ್ಯತೆಗಳಿವೆ' ಎಂದರು.
'ಎರಡೂ ಕಡೆಗಳಲ್ಲಿ ಯುದ್ಧ ಆರಂಭವಾದರೆ, ಅದನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ನೀವು ಪ್ರಧಾನಿಯೊಂದಿಗೆ ಯಾವುದೇ ಸಭೆ ನಡೆಸಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಹೌದು, ಕಾರ್ಯತಂತ್ರಗಳು ಜಾರಿಯಲ್ಲಿವೆ. ನಾನು ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ಆದರೆ, ಯಾವುದೇ ಸಂದರ್ಭಕ್ಕೂ ನಾವು ಸಿದ್ಧರಿದ್ದೇವೆ' ಎಂದರು.
ಈ ಹಿಂದೆಯೂ ಭಾರತದ ವಿರುದ್ಧ ನಾಲಗೆ ಹರಿಬಿಟ್ಟಿದ್ದ ಆಸಿಫ್, ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರವು ಭಾರತದ ಪರವಾಗಿ 'ಪ್ರಾಕ್ಸಿ ಯುದ್ಧವನ್ನು ನಡೆಸುತ್ತಿದೆ' ಎಂದು ಆರೋಪಿಸಿದ್ದರು.
ಪಾಕಿಸ್ತಾನವು ತನ್ನ ನೆಲದಲ್ಲಿ ಉಗ್ರರನ್ನು ಬೆಂಬಲಿಸುತ್ತದೆ ಎಂದು ಅಂತರರಾಷ್ಟ್ರೀಯವಾಗಿ ದೀರ್ಘಕಾಲ ಆರೋಪಿಸಲಾಗಿದೆ. ಈಗ ತಾಲಿಬಾನ್ ನೇತೃತ್ವದ ಆಫ್ಗನ್ ಸರ್ಕಾರವು 'ಪ್ರಾಕ್ಸಿ ಯುದ್ಧ'ದಲ್ಲಿ (ಮೂರನೇ ವ್ಯಕ್ತಿಯಿಂದ ಪ್ರಚೋದಿಸಲ್ಪಟ್ಟ ಅಥವಾ ಬೆಂಬಲಿತವಾದ ಸಂಘರ್ಷ) ತೊಡಗಿದೆ. ಪಾಕಿಸ್ತಾನದ ಮೇಲೆ ಪರೋಕ್ಷವಾಗಿ ದಾಳಿ ಮಾಡಲು ಅಥವಾ ಅಸ್ಥಿರಗೊಳಿಸಲು ಭಾರತವು ಆಫ್ಗಾನಿಸ್ತಾನವನ್ನು (ತಾಲಿಬಾನ್ ಮೂಲಕ) ಬಳಸುತ್ತಿದೆ ಎಂದು ದೂರಿದ್ದರು.
ಈ ವಾರದ ಆರಂಭದಲ್ಲಿ ಜಿಯೋ ನ್ಯೂಸ್‌ನೊಂದಿಗೆ ಮಾತನಾಡಿದ ಆಸಿಫ್, 'ಕದನ ವಿರಾಮವನ್ನು ಹೊಂದುವ ಬಗ್ಗೆ ನನಗೆ ಅನುಮಾನವಿದೆ. ಏಕೆಂದರೆ, ತಾಲಿಬಾನ್‌ನ ನಿರ್ಧಾರಗಳನ್ನು ದೆಹಲಿ ಪ್ರಾಯೋಜಿಸುತ್ತಿದೆ. ಇದೀಗ, ಕಾಬೂಲ್ ದೆಹಲಿಗಾಗಿ ಪ್ರಾಕ್ಸಿ ಯುದ್ಧವನ್ನು ನಡೆಸುತ್ತಿದೆ ಎಂದಿದ್ದರು.
ಇಸ್ಲಾಮಾಬಾದ್ ಮತ್ತು ಕಾಬೂಲ್ ಬುಧವಾರ ತಡರಾತ್ರಿ 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ ನಂತರ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆ ಹೊರಬಿದ್ದಿದೆ. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಹಿಂಸಾಚಾರಕ್ಕೆ ಬ್ರೇಕ್ ಬಿದ್ದಿದೆ.