ಇಸ್ಲಾಮಾಬಾದ್: ಕಳೆದ ಏಪ್ರಿಲ್‌ನಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯಾನಕ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಗೂ ಕೆಲ ಸಮಯಕ್ಕೂ ಮುನ್ನ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತದ ವಿರುದ್ಧದ ಹಲವಾರು ಹೇಳಿಕೆ ನೀಡಿದ್ದರು. ಇದು ಆತನ ಭಾರತ ವಿರೋಧಿ ನಿಲುವನ್ನು ಬಹಿರಂಗಪಡಿಸಿತ್ತು. ಅಸಿಮ್ ಮುನೀರ್ ಮತ್ತೊಮ್ಮೆ ಇದೇ ರೀತಿಯ ಭಾರತ ವಿರೋಧಿ ಹೇಳಿಕೆಗಳು ಹೊರಬಂದಿವೆ. ಪಾಕಿಸ್ತಾನಿ ಸೇನೆಯು ಅಫ್ಘಾನ್ ಗಡಿಯಲ್ಲಿ ಪದೇ ಪದೇ ಹಿನ್ನಡೆ ಅನುಭವಿಸಿದೆ. ತಾಲಿಬಾನ್‌ನಿಂದ ಸೇನೆಯ ಹಿನ್ನಡೆಯ ನಡುವೆ, ಮುನೀರ್ ಭಾರತದ ವಿರುದ್ಧ ವಿಷವನ್ನು ಕಕ್ಕಿದ್ದಾರೆ. ಇದು ಭಾರತದ ವಿರುದ್ಧದ ಅವರ ಆಕ್ರಮಣಕಾರಿ ವಾಕ್ಚಾತುರ್ಯದ ಹಿಂದಿನ ಕಾರಣವೇನಿರಬಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮುನೀರ್ ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. ಪರಮಾಣು ಶಸ್ತ್ರಸಜ್ಜಿತ ವಾತಾವರಣದಲ್ಲಿ ಯುದ್ಧಕ್ಕೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು. ಸಣ್ಣದೊಂದು ಪ್ರಚೋದನೆಯೂ ಸಹ ಪಾಕಿಸ್ತಾನದಿಂದ ನಿರ್ಣಾಯಕ ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎಂದು ಮುನೀರ್ ಹೇಳಿದ್ದಾರೆ. ಮೇ ತಿಂಗಳಲ್ಲಿ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದಲ್ಲಿ ಪಾಕಿಸ್ತಾನದ ವಿಜಯದ ಬಗ್ಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥರು ಹೆಮ್ಮೆಪಡುತ್ತಾರೆ.
ಹರಕು ಬಾಯಿ ಸೇನಾ ಮುಖ್ಯಸ್ಥರು, ಹೊಸ ಯುದ್ಧದ ಅಲೆ ಭುಗಿಲೆದ್ದರೆ ಪಾಕಿಸ್ತಾನವು ಶತ್ರು ನಿರೀಕ್ಷಿಸುವುದಕ್ಕಿಂತ ಹೆಚ್ಚು ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಮುನೀರ್ ಘೋಷಿಸಿದರು. ಭವಿಷ್ಯದ ಉಲ್ಬಣವು ಇಡೀ ಪ್ರದೇಶ ಮತ್ತು ಅದರಾಚೆಗೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಈ ವಿನಾಶಕ್ಕೆ ಭಾರತ ಮಾತ್ರ ಕಾರಣವಾಗುತ್ತದೆ ಎಂದು ಮುನೀರ್ ಮತ್ತಷ್ಟು ಪ್ರತಿಪಾದಿಸಿದರು.
ಪಾಕಿಸ್ತಾನಿ ಸೇನೆಯು ತಾಲಿಬಾನ್ ಜೊತೆಗಿನ ಮುಖಾಮುಖಿಗಾಗಿ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಮುನೀರ್ ಈ ಹೇಳಿಕೆ ನೀಡಿದ್ದಾರೆ. ಒಂದೆಡೆ ಅಫ್ಘಾನ್ ಪಡೆಗಳನ್ನು ಎದುರಿಸಲು ವಿಫಲವಾದ ಕಾರಣಕ್ಕಾಗಿ ಅವರು ದೇಶದೊಳಗೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ಅಫ್ಘಾನಿಸ್ತಾನದಲ್ಲಿ ನಾಗರಿಕರ ಮೇಲೆ ಬಾಂಬ್ ದಾಳಿ ಮಾಡಿದ್ದಕ್ಕಾಗಿ ಪಾಕಿಸ್ತಾನಿ ಸೇನೆಯು ವಿಶ್ವಾದ್ಯಂತ ಕಠಿಣ ಪ್ರಶ್ನೆಗಳನ್ನು ಎದುರಿಸುತ್ತಿದೆ.
ಮುನೀರ್ ವಿಶೇಷ ತಂತ್ರ
ಅಫ್ಘಾನಿಸ್ತಾನದೊಂದಿಗಿನ ಸಂಘರ್ಷದಲ್ಲಿ ಭಾರತದ ಬಗ್ಗೆ ಮುನೀರ್ ಪದೇ ಪದೇ ಉಲ್ಲೇಖಿಸುವುದನ್ನು ವಿಶ್ಲೇಷಕರು ಉದ್ದೇಶಪೂರ್ವಕ ತಂತ್ರವೆಂದು ಪರಿಗಣಿಸುತ್ತಾರೆ. ಮುನೀರ್ ಅವರ ಪರಿಚಿತ ಭಾರತ ವಿರೋಧಿ ಹೇಳಿಕೆಗಳು ಆಂತರಿಕ ಪ್ರಕ್ಷುಬ್ಧತೆಯಿಂದ ಸಾರ್ವಜನಿಕ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದರು. ತಾಲಿಬಾನ್ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನವು ಹೇಳುತ್ತಿರುವುದು ಈ ವಿಷಯದ ಬಗ್ಗೆ ತನ್ನ ಖ್ಯಾತಿಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿದೆ. ಮುನೀರ್ ತಮ್ಮ ಭಾಷಣದಲ್ಲಿ ತಾಲಿಬಾನ್ ಆಡಳಿತವನ್ನು ಎಚ್ಚರಿಸಿದ್ದಾರೆ. ಅಫ್ಘಾನ್ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಟಿಪಿಯಂತಹ ಗುಂಪುಗಳ ವಿರುದ್ಧ ತಾಲಿಬಾನ್ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ವೈಮಾನಿಕ ದಾಳಿಗಳು ಮೂವರು ಕ್ಲಬ್ ಕ್ರಿಕೆಟಿಗರು ಸೇರಿದಂತೆ ಹಲವಾರು ಜನರನ್ನು ಬಲಿ ತೆಗೆದುಕೊಂಡ ಕೆಲವೇ ಗಂಟೆಗಳ ನಂತರ ಮುನೀರ್ ಅವರ ಹೇಳಿಕೆ ಬಂದಿದೆ.