ದಕ್ಷಿಣ ಕ್ಯಾಲಿಫೋರ್ನಿಯಾ: 21 ವರ್ಷದ ಭಾರತದ ಅಕ್ರಮ ವಲಸಿಗನೋರ್ವ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಡ್ಡಾದಿಡ್ಡಿ'ಯಾಗಿ ಟ್ರಕ್ ಓಡಿಸಿ ಮೂವರು ಸಾವಿಗೆ ಕಾರಣವಾಗಿದ್ದಾರೆ.
ಈತನನ್ನು ಜಶನ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಸ್ಯಾನ್ ಬರ್ನಾರ್ಡಿನೋ ಕೌಂಟಿಯ ಫ್ರೀವೇಯಲ್ಲಿ ಟ್ರಾಫಿಕ್ ನಿಧಾನಗತಿಯಲ್ಲಿದ್ದರೂ ಮಾದಕ ದ್ರವ್ಯದ ನಶೆಯಲ್ಲಿ ಕಾರಿಗೆ ಗುದ್ದಿದ್ದಾರೆ. ತದನಂತರ ಟ್ರಕ್ ಸೇರಿದಂತೆ ಎದುರಿಗೆ ಬಂದ ವಾಹನಗಳಿಗೆ ಗುದ್ದಿಕೊಂಡು ಹೋಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರಣಿ ಅಪಘಾತ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಯುಎಸ್ ನ್ಯೂಸ್ ವರದಿಗಳು ಹೇಳಿವೆ.
ಸಿಂಗ್ ಅವರು 2022 ರಲ್ಲಿ ದಕ್ಷಿಣ ಯುಎಶ್ ಗಡಿಯನ್ನು ದಾಟಿದ್ದಾರೆಂದು ವರದಿಯಾಗಿದೆ. ಅವರು ಮಾರ್ಚ್ 2022 ರಲ್ಲಿ ಕ್ಯಾಲಿಫೋರ್ನಿಯಾದ ಎಲ್ ಸೆಂಟ್ರೊ ಸೆಕ್ಟರ್‌ನಲ್ಲಿ ಗಡಿ ಗಸ್ತು ಏಜೆಂಟರಿಗೆ ಸಿಕ್ಕಿಬಿದ್ದಿದ್ದರು. ಆದರೆ ಬೈಡನ್ ಆಡಳಿತಾವಧಿಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅಪಘಾತದ ದೃಶ್ಯವು ಜಶನ್‌ಪ್ರೀತ್ ಸಿಂಗ್ ಅವರ ಟ್ರಕ್ ನಲ್ಲಿದ್ದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಹಿಡಿಯಲ್ಪಟ್ಟಿದೆ.
ಮೊದಲಿಗೆ ಟ್ರಕ್ ಕಾರಿಗೆ ಡಿಕ್ಕಿ ಹೊಡೆದರಿಂದ ಕನಿಷ್ಠ ಮೂವರು ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಮೂವರನ್ನು ಇನ್ನೂ ಸಾರ್ವಜನಿಕವಾಗಿ ಗುರುತಿಸಲಾಗಿಲ್ಲ. ಗಾಯಗೊಂಡವರಲ್ಲಿ ಸಿಂಗ್ ಮತ್ತು ವಾಹನದ ಟೈರ್ ಬದಲಾಯಿಸಲು ಸಹಾಯ ಮಾಡುತ್ತಿದ್ದ ಮೆಕ್ಯಾನಿಕ್ ಸೇರಿದ್ದಾರೆ.
ಡ್ರಗ್ಸ್‌ನ ಅಮಲಿನಲ್ಲಿದ್ದ ಕಾರಣ ಸಿಂಗ್ ಬ್ರೇಕ್ ಹಾಕಿಲ್ಲದ ಕಾರಣ ಈ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂತಿಮವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಸಿಬ್ಬಂದಿಯಿಂದ ತಪಾಸಣೆ ನಡೆಸಲಾಗಿದೆ. ಡ್ರಗ್ಸ್ ಸೇವಿಸಿ ವಾಹನ ಚಲಾಯಿಸುತ್ತಿದದ್ದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿರುವುದಾಗಿ ABC7 News ವರದಿ ಮಾಡಿದೆ. ಸಿಂಗ್ ಅಮೆರಿಕದಲ್ಲಿ ಕಾನೂನುಬದ್ಧವಾಗಿ ವಲಸೆ ಸ್ಥಾನಮಾನ ಹೊಂದಿಲ್ಲ ಎಂದು US Department of Homeland Security ದೃಢಪಡಿಸಿದೆ.