ದುಬೈ: 29 ವರ್ಷದ ಭಾರತೀಯ ಪ್ರಜೆ ಮತ್ತು ದೀರ್ಘಕಾಲದಿಂದ ಅಬುಧಾಬಿಯಲ್ಲಿ ನೆಲೆಸಿರುವ ಆಂಧ್ರ ಮೂಲದ ಅನಿಲ್‌ಕುಮಾರ್ ಬೊಲ್ಲಾ ಎಂಬಾತನ ಭವಿಷ್ಯವೇ ಬದಲಾಗಿದೆ. ಅದಕ್ಕೆ ಕಾರಣವಾಗಿದ್ದು ಆತ ತಾಯಿಯ ಹುಟ್ಟುಹಬ್ಬದ ದಿನ. ಹೌದು... ಅಕ್ಟೋಬರ್ 18ರ ಶನಿವಾರ ನಡೆದ ಯುಎಇ ಲಾಟರಿಯ 23ನೇ ಲಕ್ಕಿ ಡೇ ಡ್ರಾ #251018 ರಲ್ಲಿ ಚಿನ್ನ ಗೆದ್ದು, ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ.
ಯುಎಇ ಲಾಟರಿ ಅಧಿಕಾರಿಗಳು ಅದೃಷ್ಟಶಾಲಿ ಭಾರತೀಯನ ಚಿತ್ರವನ್ನು ಬಿಡುಗಡೆ ಮಾಡಿರುವುದರಿಂದ ಸಸ್ಪೆನ್ಸ್ ಕೊನೆಗೂ ಕೊನೆಗೊಂಡಿದೆ. ಇತಿಹಾಸದಲ್ಲಿಯೇ ಅತಿ ದೊಡ್ಡ ಬಹುಮಾನ (ಸುಮಾರು 240 ಕೋಟಿ ರೂಪಾಯಿಗಳು (10 ಕೋಟಿ ದಿರ್ಹಮ್‌ಗಳು)) ಗೆದ್ದ ಅದೃಷ್ಟಶಾಲಿ ವಿಜೇತರ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಲಾಗಿದ್ದು, ಒಂದು ವಾರಕ್ಕೂ ಹೆಚ್ಚು ಕಾಲದ ವದಂತಿಗಳಿಗೆ ಅಂತ್ಯ ಹಾಡಲಾಗಿದೆ. ಅನಿಲ್ ಕುಮಾರ್ ಒಟ್ಟಾರೆ 12 ಟಿಕೆಟ್ ಗಳನ್ನು ತಲಾ 1210 ರೂಪಾಯಿ ಕೊಟ್ಟು ಖರೀದಿಸಿದ್ದರು.
ಈ ಗೆಲುವು ತನ್ನ ಕನಸಿಗೆ ಮೀರಿದ್ದು ಎಂದು ಬೊಲ್ಲಾ ಭಾವುಕರಾದರು. 100 ಮಿಲಿಯನ್ ದಿರ್ಹಮ್‌ಗಳ ಬಹುಮಾನವನ್ನು ಗೆದ್ದಿದ್ದೇನೆ ಎಂದು ತಿಳಿದಾಗ ತಾನು ಅಕ್ಷರಶಃ ದಿಗ್ಭ್ರಮೆಗೊಂಡಿದ್ದಾಗಿ ಹೇಳಿದರು. ಯುಎಇ ಲಾಟರಿ ಅಧಿಕಾರಿಗಳಿಂದ ಕರೆ ಬಂದಾಗ, ಅದು ಅವಾಸ್ತವವೆನಿಸಿತು. ನಾನು ಅವರನ್ನು ಮತ್ತೆ ಸಂದೇಶವನ್ನು ಪುನರಾವರ್ತಿಸಲು ಕೇಳಿದೆ. ಇದನ್ನು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಇಂದಿಗೂ ನನ್ನ ಈ ಹೊಸ ವಾಸ್ತವವನ್ನು ನಂಬಲು ಸಾಧ್ಯವಿಲ್ಲ. ಬೊಲ್ಲಾ ಆಯ್ಕೆ ಮಾಡಿದ ಸಂಖ್ಯೆಗಳು, ಅವರ ತಾಯಿಯ ಹುಟ್ಟುಹಬ್ಬದ 11ನೇ ತಿಂಗಳು ಸೇರಿದಂತೆ, ಈ ಐತಿಹಾಸಿಕ ಗೆಲುವಿಗೆ ಕಾರಣವಾಯಿತು. ಅವರ ತಾಯಿಯ ಪ್ರಭಾವ ಅವರ ಅದೃಷ್ಟದ ಮೇಲೆ ಇತ್ತು ಎಂದು ನಂಬಲಾಗಿದೆ.
ದೀಪಾವಳಿಗೆ ಸ್ವಲ್ಪ ಮೊದಲು ಈ ಗೆಲುವು ಬಂದಿರುವುದು ಅನಿಲ್‌ಕುಮಾರ್‌ಗೆ ಇನ್ನಷ್ಟು ಸಂತೋಷವನ್ನು ತಂದಿತು. ಇದು ಅಸಾಧಾರಣ ಆಶೀರ್ವಾದದಂತೆ ತೋರುತ್ತದೆ. ಅಂತಹ ಶುಭ ಸಂದರ್ಭದಲ್ಲಿ ಗೆಲ್ಲುವುದು ಇನ್ನಷ್ಟು ಅರ್ಥಪೂರ್ಣವಾಗಿದೆ. ಯುಎಇ ಲಾಟರಿಯ ವಾಣಿಜ್ಯ ಗೇಮಿಂಗ್ ನಿರ್ದೇಶಕ ಸ್ಕಾಟ್ ಬರ್ಟನ್, ಅನಿಲ್ ಕುಮಾರ್ ಅವರ ಗೆಲುವಿಗೆ ಅಭಿನಂದಿಸಿದರು. 100 ಮಿಲಿಯನ್ ದಿರ್ಹಮ್ ಬಹುಮಾನವು ಅವರ ಜೀವನವನ್ನು ಬದಲಾಯಿಸಿದ್ದಲ್ಲದೆ, ಯುಎಇ ಲಾಟರಿಗೆ ಒಂದು ಮೈಲಿಗಲ್ಲು ಕೂಡ ಎಂದು ಸ್ಕಾಟ್ ಬರ್ಟನ್ ಹೇಳಿದರು.