ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಅಮೆರಿಕಾ ಮೇಲೆ ಭಾರತ ನಂಬಲಸಾಧ್ಯ ತೆರಿಗೆ ವಿಧಿಸಿದೆ, ಇದು ವಿಶ್ವದಲ್ಲೇ ಅತ್ಯಧಿಕ: ಸುಂಕಾಸ್ತ್ರ ಕ್ರಮಕ್ಕೆ ಟ್ರಂಪ್ ಸಮರ್ಥನೆ

ಭಾರತ ನಮಗೆ ಅಪಾರ ಸುಂಕಗಳನ್ನು ವಿಧಿಸುತ್ತಿತ್ತು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ, ಆದ್ದರಿಂದ ಅಮೆರಿಕ ಭಾರತದೊಂದಿಗೆ ಹೆಚ್ಚು ವ್ಯವಹಾರ ಮಾಡುತ್ತಿಲ್ಲ.

ವಾಷಿಂಗ್ಟನ್: ಅಮೆರಿಕಾ ಮೇಲೆ ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ಹೇಳುವ ಮೂಲಕ ಭಾರತದ ವಿರುದ್ಧ ಆರೋಪವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಚರಿಸಿದ್ದಾರೆ.

ಶ್ವೇತಭವನದಲ್ಲಿ ಮಾಧ್ಯಮಗಳು ಕೇಳಿದ ಭಾರತದ ಮೇಲೆ ವಿಧಿಸಲಾದ ಹೆಚ್ಚಿನ ತೆರಿಗೆಗಳನ್ನು ತೆಗೆದುಹಾಕುವ ಕುರಿತು ಚಿಂತನೆ ನಡೆಸುತ್ತಿದ್ದೀರಾ ಎಂಬ ಪ್ರಶ್ನೆಗೆ ಟ್ರಂಪ್ ಅವರು ಉತ್ತರಿಸಿದರು.

ಭಾರತದ ಮೇಲೆ ವಿಧಿಸಲಾದ ಹೆಚ್ಚಿನ ತೆರಿಗೆಗಳನ್ನು ತೆಗೆದುಹಾಕುವ ಕುರಿತು ಯಾವುದೇ ಚಿಂತನೆಗಳೂ ಇಲ್ಲ. ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಆದರೆ, ಹಲವು ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧ ಏಪಕ್ಷೀಯವಾಗಿದ್ದು, ನಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ಬದಲಾಯಿತು ಎಂದು ಹೇಳಿದ್ದಾರೆ.

ಭಾರತ ನಮಗೆ ಅಪಾರ ಸುಂಕಗಳನ್ನು ವಿಧಿಸುತ್ತಿತ್ತು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ, ಆದ್ದರಿಂದ ಅಮೆರಿಕ ಭಾರತದೊಂದಿಗೆ ಹೆಚ್ಚು ವ್ಯವಹಾರ ಮಾಡುತ್ತಿಲ್ಲ. ಭಾರತದ ಜೊತೆ ನಮ್ಮ ವ್ಯಾಪಾರ-ವ್ಯವಹಾರ ತುಂಬಾ ಕಡಿಮೆ ಇದೆ. ಅವರು (ಭಾರತ) ನಮ್ಮಲ್ಲಿ ಅಪಾರ ಪ್ರಮಾಣದ ವ್ಯಾಪಾರ ಮಾಡುತ್ತಿದ್ದಾರೆ. ನಮ್ಮ ಪಾಲು ತುಂಬಾ ಕಡಿಮೆ ಇದೆ.

ಸರಳವಾಗಿ ಹೇಳುವುದಾದರೆ ಭಾರತ ಬೃಹತ್‌ ಪ್ರಮಾಣದ ಸರಕು ರಫ್ತು ಮಾಡುತ್ತಿದೆ. ನಮ್ಮ ವಸ್ತುಗಳ ರಫ್ತು ಪ್ರಮಾಣ ತುಂಬಾ ಕಡಿಮೆ ಇದೆ. ಜೊತೆಗೆ ನಮ್ಮ ವಸ್ತುಗಳ ಮೇಲೆ ಭಾರತದಲ್ಲಿ ಅತ್ಯಧಿಕ ಸುಂಕ ವಿಧಿಸಲಾಗುತ್ತಿದೆ. ಕಳೆದ ಕೆಲವು ದಶಗಳಿಂದ ನಡೆಯುತ್ತಿರುವ ಏಕಪಕ್ಷೀಯ ವ್ಯಾಪಾರ ನೀತಿ ಸರಿದೂಗಿಸಲು ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಮೂರ್ಖತನದಿಂದ ನಾವು ಅವರಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಭಾರತವು ತನ್ನ ಉತ್ಪನ್ನಗಳನ್ನು ಅಮೆರಿಕಾದಲ್ಲಿರಿಸಿ, ನಮಗೆ ಹೆಚ್ಚಿನ ತೆರಿಗೆ ಹೇರುತ್ತಿತ್ತು. ಇದೀಗ ನಾವೇ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರಿಂದ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಹಾರ್ಲೆ ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಉದಾಹರಣೆಯನ್ನು ಉಲ್ಲೇಖಿಸಿದ ಟ್ರಂಪ್ ಅವರು, ಮೋಟಾರ್‌ಸೈಕಲ್ ಮೇಲೆ ಶೇ.200 ಸುಂಕವಿರುವುದರಿಂದ ಕಂಪನಿಯು ತನ್ನ ವಸ್ತುವನ್ನು ಭಾರತಕ್ಕೆ ಮಾರಾಟ ಮಾಡಲು ಸಾಧ್ಯವಿಲ್ಲದಂತಾಯಿತು. ಇದೀಗ ಹಾರ್ಲೆ ಡೇವಿಡ್ಸನ್ ಭಾರತಕ್ಕೆ ಹೋಗಿ ಮೋಟಾರ್‌ಸೈಕಲ್ ಸ್ಥಾವರವನ್ನು ನಿರ್ಮಿಸಿದೆ. ಈಗ ಅವರು ನಮ್ಮಂತೆಯೇ ಸುಂಕವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.

ಚೀನಾದ ಟಿಯಾಂಜಿನ್‌ನಲ್ಲಿ ನರೇಂದ್ರ ಮೋದಿ, ವ್ಲಾದಿಮಿರ್‌ ಪುಟಿನ್‌ ಹಾಗೂ ಕ್ಸಿ ಜಿನ್‌ಪಿಂಗ್‌ ನಡುವೆ ಮಾತುಕತೆ ನಡೆದಿದ್ದು, ಇದು ವಿಶ್ವದ ಗಮನ ಸೆಳೆದಿದೆ.

ಈ ನಡುವೆ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ ಕ್ರಮಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸ್ವದೇಶದಲ್ಲಿಯೇ ಟೀಕೆಗೆ ಗುರಿಯಾಗಿದ್ದಾರೆ.

ಟ್ರಂಪ್ ಆಡಳಿತವು ಭಾರತದ ಮೇಲೆ ಶೇ. 25ರಷ್ಟು ಪ್ರತಿ-ಸುಂಕವನ್ನು ವಿಧಿಸಿತ್ತು. ಇದರ ಜೊತೆಗೆ, ರಷ್ಯಾದಿಂದ ಭಾರತವು ತೈಲ ಖರೀದಿಸಿದ್ದಕ್ಕಾಗಿ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕವನ್ನು ಹೇರಲಾಗಿತ್ತು. ಇದರಿಂದಾಗಿ, ಭಾರತದ ಮೇಲೆ ವಿಧಿಸಲಾದ ಒಟ್ಟು ಸುಂಕವು ಶೇ. 50ಕ್ಕೆ ತಲುಪಿ, ಇದು ವಿಶ್ವದಲ್ಲೇ ಅತಿ ಹೆಚ್ಚಿನ ಸುಂಕಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆ"- GST ಸುಧಾರಣೆ ಶ್ಲಾಘಿಸಿದ ಪ್ರಧಾನಿ ಮೋದಿ

ಜಿಎಸ್‌ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

ADR report: ದೇಶದಲ್ಲಿ ಶೇ. 47 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪ, ಬಿಲಿಯನೇರ್ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ, ಡಿಕೆಶಿ ಎಷ್ಟನೇ ಶ್ರೀಮಂತ?

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಭಾರತದ ಮೇಲಿನ 'ಸುಂಕಾಸ್ತ್ರ' ನಿರ್ಣಾಯಕ: US ಸುಪ್ರೀಂ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಮಾಹಿತಿ

SCROLL FOR NEXT