ಜೆರುಸಲೆಮ್: ಇಸ್ರೇಲ್ ವೈಮಾನಿಕ ದಾಳಿ ಮುಂದುವರೆಸಿದ್ದು, ಶನಿವಾರ ಗಾಜಾ ನಗರದಲ್ಲಿ ಒಂದು ಎತ್ತರದ ಕಟ್ಟಡವನ್ನು ನೆಲಸಮಗೊಳಿಸಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಎರಡನೇ ಭೀಕರ ದಾಳಿಯಾಗಿದೆ.
ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ನಡೆಸಿದ ಯೋಜಿತ ದಾಳಿಗೂ ಮುನ್ನ, ಅಲ್ಲಿನ ಜನರಿಗೆ ದಕ್ಷಿಣಕ್ಕೆ "ಮಾನವೀಯ ವಲಯ"ಕ್ಕೆ ಪಲಾಯನ ಮಾಡುವಂತೆ ಮಿಲಿಟರಿ ಎಚ್ಚರಿಕೆ ನೀಡಿತ್ತು. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇಸ್ರೇಲ್ ಕಳೆದ ವಾರ ಗಾಜಾ ನಗರವನ್ನು ಯುದ್ಧ ವಲಯ ಎಂದು ಘೋಷಿಸಿದಾಗಿನಿಂದ ನಗರದ ಮೇಲೆ ವಾಯುದಾಳಿಗಳು ಮತ್ತು ಫಿರಂಗಿ ಶೆಲ್ ದಾಳಿಗಳು ಮುಂದುವರೆದಿವೆ.
ಶನಿವಾರ, ಗಾಜಾ ನಗರದ ಎತ್ತರದ ಕಟ್ಟಡವನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. "ಹಮಾಸ್ ಭಯೋತ್ಪಾದಕರು ಇಸ್ರೇಲಿ ಪಡೆಗಳನ್ನು ಮೇಲ್ವಿಚಾರಣೆ ಮಾಡಲು ಗುಪ್ತಚರ ಸಂಗ್ರಹಣಾ ಉಪಕರಣಗಳನ್ನು ಹೊಂದ್ದಿದರು ಮತ್ತು ವೀಕ್ಷಣಾ ಪೋಸ್ಟ್‌ಗಳನ್ನು ಇರಿಸಿದರು" ಎಂದು ಇಸ್ರೇಲ್ ಹೇಳಿದೆ. ಆದರೆ "ನಾಗರಿಕರಿಗೆ ಹಾನಿಯನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ತಿಳಿಸಿದೆ.
ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು, ಸುಮಾರು 15 ಅಂತಸ್ತಿನ ಕಟ್ಟಡ ಧ್ವಂಸಗೊಳಿಸುತ್ತಿರುವ ಮತ್ತು ಧೂಳು, ಹೊಗೆಯಲ್ಲಿ ಕಟ್ಟಡ ನೆಲಕ್ಕೆ ಬಾಗಿದಂತೆ ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
"ನಾವು ಮುಂದುವರಿಯುತ್ತಿದ್ದೇವೆ" ಎಂದು ಕ್ಯಾಟ್ಜ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಹಿಂದಿನ ದಿನ ಗಾಜಾ ನಗರದ ಮತ್ತೊಂದು ಎತ್ತರದ ಕಟ್ಟಡ ನಾಶ ಮಾಡಿದ ವಿಡಿಯೋವನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಕಳೆದ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ 31 ಜನ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆಸ್ಪತ್ರೆ ತಿಳಿಸಿದೆ. ಯುದ್ಧದಿಂದ ಹಲವು ಬಾರಿ ಗಾಜಾ ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದು, ಇದೀಗ ಅವರು ಹಸಿವು ಮತ್ತು ಯುದ್ದ ಹೀಗೆ ಎರಡೆರಡು ಬೆದರಿಕೆ ಎದುರಿಸುತ್ತಿದ್ದಾರೆ. ಇಸ್ರೇಲ್‌ನ ದಿಗ್ಬಂಧನದಿಂದ ಉಂಟಾದ ಬಿಕ್ಕಟ್ಟಿನಿಂದ ಪದೇ ಪದೆ ಜನರು ಸ್ಥಳಾಂತಗೊಳ್ಳುತ್ತಿದ್ದು, ಆಹಾರ ಉತ್ಪಾದನೆ ಕೂಡಾ ಕುಸಿತ ಕಂಡಿದೆ. ಇದು ಅಲ್ಲಿನ ಜನರನ್ನು ಕಂಗೆಡಿಸುವಂತೆ ಮಾಡಿದೆ.