ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರತಿಭಟನಾಕಾರರು ಹೋಟೆಲ್‌ಗೆ ಬೆಂಕಿ ಹಚ್ಚಿದ್ದರಿಂದ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಮೃತ ಮಹಿಖೆಯನ್ನು ರಾಜೇಶ್ ಗೋಲಾ (57) ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ರಾಮ್‌ವೀರ್ ಸಿಂಗ್ ಗೋಲಾ ಜೊತೆ ಸೆ.7 ರಂದು ನೇಪಾಳಕ್ಕೆ ತೆರಳಿದ್ದರು.
ಈ ಸಮಯದಲ್ಲಿ ನೇಪಾಳದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮನಸ್ಸಿಗೆ ಬಂದಂತೆ ಸಿಕ್ಕಸಿಕ್ಕ ಕಟ್ಟಡಗಳಿಗೆ ಹಾನಿ ಮಾಡಿದ್ದರು. ಅದೇ ರೀತಿ ರಾಮ್‌ವೀರ್ ಸಿಂಗ್ ಕುಟುಂಬ ತಂಗಿದ್ದ ಹೋಟೆಲ್‌ಗೆ ಸೆ.9 ರಂದು ಬೆಂಕಿ ಹಚ್ಚಿದ್ದರು.
ಹೊತ್ತಿ ಉರಿಯುತ್ತಿದ್ದ ಹೋಟೆಲ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಗೋಲಾ ದಂಪತಿ ಪರದಾಡಿದ್ದರು. ಈ ವೇಳೆ ರಾಜೇಶ್ ಗೋಲಾ ಪತಿಯಿಂದ ಬೇರ್ಪಟ್ಟು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದರು. ದುರಾದೃಷ್ಟವಶಾತ್ ಅವರು ಸಾವನ್ನಪ್ಪಿದ್ದಾರೆ.
ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ದಂಗೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.
ಇದಲ್ಲದೇ ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರ ಮುಚ್ಚಲಾಗಿತ್ತು.