ವಾಷಿಂಗ್ಟನ್: ಗುಂಡೇಟಿಗೆ ಬಲಿಯಾದ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತ ಚಾರ್ಲಿ ಕಿರ್ಕ್ (Charlie Kirk) ಅವರ ಪತ್ನಿ ಎರಿಕಾ ಕಿರ್ಕ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ಸೆಪ್ಟೆಂಬರ್ 10 ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ 31 ವರ್ಷದ ಕಿರ್ಕ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಎರಿಕಾ ಕಿರ್ಕ್ ತನ್ನ ಗಂಡನ ಜೀವನ ಮತ್ತು ತತ್ವ ಆದರ್ಶಗಳನ್ನು ಗೌರವಿಸುತ್ತಾ ದು:ಖವನ್ನು ಹಂಚಿಕೊಂಡಿದ್ದಾರೆ.
"ನನ್ನ ಪತಿ ನನಗಾಗಿ, ನಮ್ಮ ದೇಶಕ್ಕಾಗಿ, ನಮ್ಮ ಮಕ್ಕಳಿಗಾಗಿ ತನ್ನ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ಎರಿಕಾ ಹೇಳಿದ್ದಾರೆ. ನನ್ನ ಧ್ವನಿ ದುಃಖ ಮತ್ತು ಬಲದಿಂದ ತುಂಬಿದೆ. ಅವರು ನಿಜವಾದ ಪ್ರೀತಿ ತೋರಿಸಿದ್ದಾರೆ. ಚಾರ್ಲಿ ಯೇಸುವಿನ ತೋಳುಗಳಲ್ಲಿ ಸ್ವೀಕರಿಸಲ್ಪಡಲಿ ಎಂದು ಅವರು ಹೇಳಿದ್ದಾರೆ.
ದುರಂತ ಘಟನೆಯ ನಂತರ ಕುಟುಂಬಕ್ಕೆ ತೋರಿದ ಪ್ರೀತಿಗಾಗಿ ಅಸಂಖ್ಯಾತ ಬೆಂಬಲಿಗರಿಗೆ ಎರಿಕಾ ಧನ್ಯವಾದ ಸಲ್ಲಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. USA ಯ ಕ್ಯಾಂಪಸ್ ಪ್ರವಾಸಗಳು ಮತ್ತು ಅಮೇರಿಕಾ ಫೆಸ್ಟ್ ನಂತಹ ತನ್ನ ಪತಿ ಪ್ರಾರಂಭಿಸಿದ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಎರಿಕಾ ಘೋಷಿಸಿದ್ದಾರೆ.
ಈ ಮಧ್ಯೆ ಚಾರ್ಲಿ ಕಿರ್ಕ್ (Charlie Kirk) ರನ್ನು ಗುಂಡು ಹಾರಿಸಿ ಕೊಂದಿದ್ದ ಶೂಟರ್ ಇದೀಗ ನಮ್ಮ ವಶದಲ್ಲಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.