ನವದೆಹಲಿ: ಮಹತ್ವದ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರವು ಪ್ರಮುಖ ಭಾರತೀಯ ಸರಕುಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ವಿಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೊದಲ ನೇರ ಸಂಭಾಷಣೆ ನಡೆಸಿದ್ದಾರೆ.
ಇಂದು ಪ್ರಧಾನಿ ಮೋದಿ ಅವರ 75 ನೇ ಹುಟ್ಟುಹಬ್ಬವಾಗಿದ್ದು, ಅದಕ್ಕೆ ಮುನ್ನಾದಿನ ನಿನ್ನೆ ಅಮೆರಿಕ ಅಧ್ಯಕ್ಷರು ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಭಾರತ-ಯುಎಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಈ ಸಂದರ್ಭದಲ್ಲಿ ಉಭಯ ನಾಯಕರು ಪುನರುಚ್ಚರಿಸಿದರು. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕೂಡ ಚರ್ಚಿಸಿದ್ದಾರೆ.
“ನನ್ನ ಸ್ನೇಹಿತ, ಅಮೆರಿಕ ಅಧ್ಯಕ್ಷ ಟ್ರಂಪ್, ನನ್ನ 75 ನೇ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಾಶಯ ತಿಳಿಸಿರುವುದಕ್ಕೆ ನಿಮಗೆ ಧನ್ಯವಾದಗಳು ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
“ನಿಮ್ಮಂತೆಯೇ, ಭಾರತ-ಯುಎಸ್ ನ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ” ಎಂದು ಮೋದಿ ಬರೆದಿದ್ದಾರೆ.
ವಿವಾದಾತ್ಮಕ ಸುಂಕ ಕ್ರಮಗಳ ನಂತರ ರಾಜತಾಂತ್ರಿಕ ಸಂಬಂಧಗಳಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳ ಮಧ್ಯೆ ಟ್ರಂಪ್ ಅವರ ಈ ಫೋನ್ ಕರೆ ಮಹತ್ವ ಪಡೆದಿದೆ. ಎರಡೂ ರಾಷ್ಟ್ರಗಳ ನಡುವೆ ಆರ್ಥಿಕ ಸೇತುವೆಗಳನ್ನು ಪುನರ್ನಿರ್ಮಿಸಲು ಹೊಸ ಪ್ರಯತ್ನಗಳನ್ನು ಸೂಚಿಸುತ್ತದೆ.
ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಆರಂಭಿಕ ಪರಿಹಾರಕ್ಕಾಗಿ ಒತ್ತಾಯಿಸುವ ಪ್ರಮುಖ ಯುರೋಪಿಯನ್ ನಾಯಕರೊಂದಿಗೆ ಮೋದಿ ಮಾತನಾಡುತ್ತಿದ್ದಾರೆ.
ಭಾರತ ಅಮೆರಿಕ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿ ಮುಂದಿನ ಹಂತಗಳ ಕುರಿತು ಚರ್ಚಿಸಲು ನಿನ್ನೆ ಸಹಾಯಕ ಯುಎಸ್ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ದೆಹಲಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರೊಂದಿಗೆ ಸಕಾರಾತ್ಮಕ ಸಭೆ ನಡೆಸಿದರು" ಎಂದು ಯುಎಸ್ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಚರ್ಚೆಗಳಲ್ಲಿ ಸುಂಕ ಕಡಿತದ ಮಾರ್ಗಗಳು ಸೇರಿವೆ. ಮೋದಿ ಟ್ರಂಪ್ ಮಧ್ಯೆ ಫೋನ್ ಕರೆ ದ್ವಿಪಕ್ಷೀಯ ಸಂಬಂಧಗಳ ಮಹತ್ವವನ್ನು ಪುನರುಚ್ಚರಿಸುವಲ್ಲಿ ಮುಂದಿನ ಹಾದಿಯ ಗುರುತು ಎಂದು ಮೂಲಗಳು ತಿಳಿಸಿವೆ.