ನವದೆಹಲಿ: ಸ್ಥಗಿತಗೊಂಡ ವ್ಯಾಪಾರ ಮಾತುಕತೆಗಳ ಪುನರಾರಂಭ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸಿಸಿದ ಬೆನ್ನಲ್ಲೇ ಅಮೆರಿಕ ಭಾರತಕ್ಕೆ ಮತ್ತೊಂದು ಹೊಡೆತ ನೀಡಿದೆ. ವಾಷಿಂಗ್ಟನ್ ಇರಾನ್‌ನ ಚಬಹಾರ್ ಬಂದರಿಗೆ ನೀಡಲಾದ ನಿರ್ಬಂಧ ವಿನಾಯಿತಿಗಳನ್ನು ರದ್ದುಗೊಳಿಸಿದೆ.
ಸೆಪ್ಟೆಂಬರ್ 29 ರಿಂದ ನಿರ್ಬಂಧ ವಿನಾಯಿತಿ ರದ್ದುಗೊಳ್ಳಲಿದ್ದು, ಅಮೆರಿಕದ ದಂಡದ ಅಪಾಯ ಇಲ್ಲದೆ ಬಂದರಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದಾಗಿದ್ದ ಭಾರತ ಮತ್ತಿತರ ರಾಷ್ಟ್ರಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ.
ಗೇಟ್‌ವೇ ಆಗಿ ಅಭಿವೃದ್ಧಿಪಡಿಸುವ ಭಾರತದ ಯೋಜನೆಗೆ ಅಡ್ಡಿ: ಇರಾನ್ ಸ್ವಾತಂತ್ರ್ಯ ಮತ್ತು ಪ್ರತಿ-ಪ್ರಸರಣ ಕಾಯಿದೆ (IFCA) ಅಡಿಯಲ್ಲಿ ಮೂಲತಃ 2018 ರಲ್ಲಿ ನೀಡಲಾದ ನಿರ್ಬಂಧ ವಿನಾಯಿತಿಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಅಮೆರಿಕ ಘೋಷಿಸಿದೆ. ಇದರಿಂದ ಚಬಹಾರ್ ಬಂದರನ್ನು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಗೇಟ್‌ವೇ ಆಗಿ ಅಭಿವೃದ್ಧಿಪಡಿಸುವ ತನ್ನ ದೀರ್ಘಕಾಲದ ಯೋಜನೆಯನ್ನು ಮುಂದುವರಿಸಲು ಭಾರತಕ್ಕೆ ದೊರೆತಿದ್ದ ಅವಕಾಶ ಕೈತಪ್ಪಿದಂತಾಗಿದೆ.
ಇರಾನ್ ಆಡಳಿತ ಪ್ರತ್ಯೇಕಿಸುವ ಟ್ರಂಪ್ ಅವರ ಒತ್ತಡ ನೀತಿಯೊಂದಿಗೆ ನಿರ್ಬಂಧ ವಿನಾಯಿತಿ ಹಿಂಪಡೆಯಲಾಗುತ್ತಿದೆ. ಚಬಹಾರ್ ಬಂದರಿನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವ ಅಥವಾ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವವರು ನಿರ್ಬಂಧಗಳಿಗೆ ಒಡ್ಡಿಕೊಳ್ಳುವ ಅಪಾಯವಿದೆ ಎಂದು ಸೆಪ್ಟೆಂಬರ್ 16 ರಂದು US ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವಕ್ತಾರರ ಕಚೇರಿಯಿಂದ ಹೊರಡಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿರ್ಬಂಧ ವಿನಾಯಿತಿ ರದ್ದತಿ ಜಾರಿಯಾದ ನಂತರ ಚಬಹಾರ್ ಬಂದರನ್ನು ನಿರ್ವಹಿಸುವ ಅಥವಾ IFCA ಯಲ್ಲಿ ವಿವರಿಸಿದ ಇತರ ಚಟುವಟಿಕೆಗಳಲ್ಲಿ ತೊಡಗಿರುವವರು ನಿರ್ಬಂಧಗಳಿಗೆ ಒಡ್ಡಿಕೊಳ್ಳಬೇಕಾಗುತ್ತದೆ ಎಂದು ಅದರಲ್ಲಿ ಹೇಳಲಾಗಿದೆ. ಇದು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಸಂಕೀರ್ಣಗೊಳಿಸಲಿದೆ. ಸ್ಥಗಿತಗೊಂಡಿದ್ದ ವ್ಯಾಪಾರ ಮಾತುಕತೆಗಳು ಪುನರ್ ಆರಂಭವಾದ ದಿನದಂದೇ ನಿರ್ಬಂಧ ವಿನಾಯಿತಿ ರದ್ದುಗೊಳಿಸಲಾಗಿದೆ.
ಕಾರ್ಯತಂತ್ರದ ಹೊಡೆತ: ಅಮೆರಿಕದ ನಿರ್ಧಾರ ಪ್ರಾದೇಶಿಕ ವ್ಯಾಪಾರದ ಸಂಪರ್ಕಗಳಿಗೆ ಬಂದರನ್ನು ಬಳಸುವ ಭಾರತದ ಯೋಜನೆಯನ್ನು ದುರ್ಬಲಗೊಳಿಸುತ್ತದೆ. 2003 ರಲ್ಲಿ ಮೊದಲ ಬಾರಿಗೆ ಭಾರತ ಈ ಯೋಜನೆಯನ್ನು ಪ್ರಸ್ತಾಪಿಸಿತ್ತು. ಇದು ಚೀನಾದಿಂದ ನಿರ್ವಹಿಸಲ್ಪಡುವ ಪಾಕಿಸ್ತಾನದ ಗ್ವಾದರ್ ಬಂದರಿನಿಂದ ಕೇವಲ 140 ಕಿಮೀ ದೂರದಲ್ಲಿದೆ.
ಅರೇಬಿಯನ್ ಸಮುದ್ರದಲ್ಲಿ ಚಬಹಾರ್ ಬಂದರು ಭಾರತಕ್ಕೆ ಪ್ರಮುಖ ನಿರ್ಣಾಯಕ ಪ್ರದೇಶವಾಗಿತ್ತು. ಕಳೆದ ಕೆಲವು ವರ್ಷಗಳಿಂದ, ಅಫ್ಘಾನಿಸ್ತಾನಕ್ಕೆ ಗೋಧಿ, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಕಳುಹಿಸಲು ಈ ಬಂದರನ್ನು ಬಳಸಲಾಗುತ್ತಿತ್ತು. ಜವಳಿ, ಎಂಜಿನಿಯರಿಂಗ್ ಸರಕುಗಳು, ಔಷಧೀಯ ವಸ್ತುಗಳು ಮತ್ತು ಆಹಾರ ಉತ್ಪನ್ನಗಳ ವ್ಯಾಪಕ ವ್ಯಾಪಾರಕ್ಕಾಗಿ ಇದನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.
ಭಾರತೀಯ ರಫ್ತುಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತದೆ. ಅಲ್ಲದೇ ರಷ್ಯಾ- ಯುರೋಪ್‌ನೊಂದಿಗೆ ವ್ಯಾಪಾರಕ್ಕಾಗಿ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ನೊಂದಿಗೆ ಭಾರತವನ್ನು ಹೆಚ್ಚು ನಿಕಟವಾಗಿ ಸಂಯೋಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.