ನ್ಯೂಯಾರ್ಕ್/ವಾಷಿಂಗ್ಟನ್: ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಕೆಲಸ ಮಾಡಿದ್ದು, ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಬರಲೇಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರ ಮಾತುಕತೆ ಮೂಲಕ ಪರಿಹರಿಸಿದ್ದೇನೆ. ಏಳು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ. ಇದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಬರಬೇಕು ಎಂದಿದ್ದಾರೆ. ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಗೌರವಾನ್ವಿತ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
"ನಾವು ಶಾಂತಿ ಒಪ್ಪಂದಗಳನ್ನು ರೂಪಿಸುತ್ತಿದ್ದು, ಯುದ್ಧಗಳನ್ನು ನಿಲ್ಲಿಸುತ್ತಿದ್ದೇವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಗಳನ್ನು ನಿಲ್ಲಿಸಿದ್ದೇವೆ" ಎಂದು ಟ್ರಂಪ್ ಶನಿವಾರ ಅಮೆರಿಕನ್ ಕಾರ್ನರ್‌ಸ್ಟೋನ್ ಇನ್‌ಸ್ಟಿಟ್ಯೂಟ್ ಫೌಂಡರ್ ಡಿನ್ನರ್‌ನಲ್ಲಿ ಹೇಳಿದರು.
"ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಅದರ ಬಗ್ಗೆ ಯೋಚಿಸಿ. ನಾನು ಅದನ್ನು ಹೇಗೆ ನಿಲ್ಲಿಸಿದೆ ಎಂದು ನಿಮಗೆ ತಿಳಿದಿದೆ. ಅವರು ನಮ್ಮೊಂದಿಗೆ ವ್ಯಾಪಾರ ಮಾಡಲು ಬಯಸುತ್ತಾರೆ. ನನಗೆ ಇಬ್ಬರೂ ನಾಯಕರ ಬಗ್ಗೆ ಅಪಾರ ಗೌರವವಿದೆ.
ವಿಶ್ವ ಮಟ್ಟದಲ್ಲಿ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ: ಭಾರತ, ಪಾಕಿಸ್ತಾನ, ಥೈಲ್ಯಾಂಡ್, ಕಾಂಬೋಡಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ರುವಾಂಡಾ ಮತ್ತು ಕಾಂಗೋ ಈ ಎಲ್ಲಾ ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅವುಗಳಲ್ಲಿ ಶೇ. 60 ರಷ್ಟು ವ್ಯಾಪಾರದ ಕಾರಣದಿಂದ ನಿಲ್ಲಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಹೇಳಿದರು.
ಯುದ್ಧ ಮುಂದುವರೆಸಿದರೆ ವ್ಯಾಪಾರ ಮಾಡಲ್ಲ: ಭಾರತ ಮತ್ತು ಪಾಕಿಸ್ತಾನ ಪರಮಾಣು ಹೊಂದಿವೆ. ನೀವು ಯುದ್ಧ ಮುಂದುವರೆಸಿದರೆ ನಿಮ್ಮೊಂದಿಗೆ ಯಾವುದೇ ವ್ಯಾಪಾರ ವ್ಯವಹಾರ ಮಾಡುವುದಿಲ್ಲ ಎಂದು ಭಾರತಕ್ಕೆ ಹೇಳುವ ಮೂಲಕ ಯುದ್ಧ ನಿಲ್ಲಿಸಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಿದರೆ ನನಗೆ ನೊಬೆಲ್ ಪ್ರಶಸ್ತಿ ಬರಬೇಕು ಎಂದು ಟ್ರಂಪ್ ಪ್ರತಿಪಾದಿಸಿದರು.
ಪುಟಿನ್ ನಡೆಯಿಂದ ನಿರಾಸೆ: ಪುಟಿನ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರಿಂದ ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟನ್ನು ಸುಲಭವಾಗಿ ಪರಿಹರಿಸಬಹುದು ಅಂದುಕೊಂಡಿದ್ದೆ. ಆದರೆ, ಅವರಿಂದ ನಿರಾಸೆಗೊಂಡಿದ್ದೇನೆ. ಆದರೆ ನಾನು ಅದನ್ನು ಮಾಡೇ ಮಾಡುತ್ತೇನೆ. ಒಂದು ದಾರಿ ಇಲ್ಲ ಅಂದ್ರೆ ಮತ್ತೊಂದು ದಾರಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಟ್ರಂಪ್ ಹೇಳಿದರು.