ಇಸ್ಲಾಮಾಬಾದ್: ಪಾಕಿಸ್ತಾನದ ವಾಯುಪಡೆ ಸೋಮವಾರ ಬೆಳಗ್ಗೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ತಿರಾ ಕಣಿವೆಯ ಮಾತ್ರೆ ದಾರಾ ಗ್ರಾಮದಲ್ಲಿ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಯುದ್ಧ ವಿಮಾನಗಳು ಎಂಟು LS-6 ಬಾಂಬ್‌ಗಳನ್ನು ಹಾಕಿದೆ. ಸತ್ತವರೆಲ್ಲರೂ ನಾಗರಿಕರು ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ, ಆದರೂ ಅವರ ಸ್ಥಿತಿ ಸ್ಪಷ್ಟವಾಗಿ ಮಾಹಿತಿ ಇಲ್ಲ.
ಸ್ಥಳೀಯ ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದಾಳಿ ನಡೆದ ಸ್ಥಳದ ದೃಶ್ಯಗಳು, ಅವಶೇಷಗಳ ನಡುವೆ ಮಕ್ಕಳೂ ಸೇರಿದಂತೆ ಹಲವು ಶವಗಳು ಬಿದ್ದಿರುವುದನ್ನು ಕಂಡುಬರುತ್ತಿದೆ. ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುವಲ್ಲಿ ರಕ್ಷಣಾ ಸಿಬ್ಬಂದಿ ನಿರತವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಿಂದ ಇಡೀ ಗ್ರಾಮ ಸಂಪೂರ್ಣ ನಾಶವಾಗಿದೆ. ತಿರಾ ಕಣಿವೆ ಮತ್ತು ಖೈಬರ್ ಪಖ್ತುಂಖ್ವಾದ ಇತರ ಭಾಗಗಳಲ್ಲಿ ಈ ಹಿಂದೆ ಪದೇ ಪದೇ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ನಡೆದಿವೆ. ಇಲ್ಲಿ ನಾಗರಿಕ ಸಾವುನೋವುಗಳು ಆಗಾಗ್ಗೆ ವರದಿಯಾಗುತ್ತಿವೆ.
ಇತ್ತೀಚಿನ ದಿನಗಳಲ್ಲಿ, ಖೈಬರ್ ಪಖ್ತುಂಖ್ವಾವು ಅಫ್ಘಾನಿಸ್ತಾನದ ಗಡಿಯಲ್ಲಿರುವ ಪರ್ವತ ಪ್ರದೇಶಗಳಲ್ಲಿ ಅಡಗಿರುವ ಭಯೋತ್ಪಾದಕರ ವಿರುದ್ಧ ಹಲವಾರು ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಭಾನುವಾರ, ಡೆರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಗುಪ್ತಚರ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಟಿಟಿಪಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.