ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರು ಇಸ್ರೇಲ್ ವಿರುದ್ಧ ತೀವ್ರವಾಗಿ ಗುಡುಗಿದ್ದು, ಅವರ ಹೇಳಿಕೆಗಳು ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಖ್ವಾಜಾ ಆಸೀಫ್ ಅವರು ಇಸ್ರೇಲ್ ವಿರುದ್ಧ “ನೀವು ಮಾನವಕುಲಕ್ಕೆ ಶಾಪ”, “ನರಕದಲ್ಲಿ ಬೆಂದು ಹೋಗಿ” ಎಂಬ ಕಠಿಣ ಪದಗಳನ್ನು ಬಳಕೆ ಮಾಡಿದ್ದು, ಲೆಬನಾನ್‌ನಲ್ಲಿ ಇಸ್ರೇಲ್ ಕೈಗೊಂಡಿರುವ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಹೇಳಿಕೆಗಳು ಶಾಂತಿ ಮಾತುಕತೆಗಳು ನಡೆಯುತ್ತಿರುವ ಸಮಯದಲ್ಲೇ ಹೊರಬಂದಿರುವುದರಿಂದ, ಮಧ್ಯಪ್ರಾಚ್ಯದಲ್ಲಿ ಹೊಸ ಉದ್ವಿಗ್ನತೆಯೊಂದು ಹುಟ್ಟಿಕೊಳ್ಳುವಂತೆ ಮಾಡಿದೆ.
ಖ್ವಾಜಾ ಆಸಿಫ್ ಅವರು ಇಸ್ರೇಲ್ ಲೆಬನಾನ್‌ನಲ್ಲಿ ಜನಾಂಗೀಯ ಹತ್ಯೆ ನಡೆಸುತ್ತಿದೆ. ಇಸ್ರೇಲ್ ನ್ನು ಕ್ಯಾನ್ಸರ್ ಕಾರಕ ದೇಶ, ಮಾನವೀಯತೆಗೆ ಶಾಪ ಎಂದು ಕರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಇಸ್ರೇಲ್ ಒಂದು ದುಷ್ಟ ಶಕ್ತಿ ಮತ್ತು ಮಾನವಕುಲಕ್ಕೆ ಶಾಪವಾಗಿದೆ. ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವಾಗಲೇ ಲೆಬನಾನ್‌ನಲ್ಲಿ ನರಮೇಧ ನಡೆಯುತ್ತಿದೆ. ಮೊದಲು ಗಾಜಾ, ನಂತರ ಇರಾನ್...ಈಗ ಲೆಬನಾನ್‌ನಲ್ಲಿ ಇಸ್ರೇಲ್‌ನಿಂದ ಅಮಾಯಕ ನಾಗರಿಕರ ಕೊಲೆಯಾಗುತ್ತಿದೆ. ರಕ್ತಪಾತವು ಅವಿರತವಾಗಿ ಮುಂದುವರೆದಿದೆ ಎಂದು ದೂಷಿಸಿದ್ದಾರೆ.
‘ಯುರೋಪಿಯನ್ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ಟೀನ್ ಭೂಮಿಯಲ್ಲಿ ಈ ‘ಕ್ಯಾನ್ಸರ್‌ಕಾರಕ ರಾಷ್ಟ್ರ’ವನ್ನು (ಇಸ್ರೇಲ್) ಸೃಷ್ಟಿಸಿದವರು ನರಕದಲ್ಲಿ ಬೆಂದು ಹೋಗಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದೂ ಕಿಡಿಕಾರಿದ್ದಾರೆ.
ಪಾಕಿಸ್ತಾನ ಹಿಂದಿನಿಂದಲೂ ಪ್ಯಾಲೆಸ್ಟೈನ್ ಪರ ನಿಲುವು ಹೊಂದಿದ್ದು, ಇಸ್ರೇಲ್‌ಗೆ ಅಧಿಕೃತವಾಗಿ ಮಾನ್ಯತೆ ನೀಡಿಲ್ಲ. ಆದರೆ, ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕಾರನ ಪಾತ್ರ ವಹಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿರುವಾಗಲೇ ಪಾಕಿಸ್ತಾನ ರಕ್ಷಣಾ ಸಚಿವರಿಂದಲೇ ಇಂತರ ಕಠಿಣ ಪದಗಳ ಬಳಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಸ ಚರ್ಚೆ ಶುರುವಾಗುವಂತೆ ಮಾಡಿದೆ.
ಒಟ್ಟಿನಲ್ಲಿ, ಶಾಂತಿ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಪಾಕಿಸ್ತಾನದ ಈ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಕಾದಾಟ ಆರಂಭವಾಗುವ ಸೂಚನೆಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಇನ್ನಷ್ಟು ರಾಜತಾಂತ್ರಿಕ ಪ್ರತಿಕ್ರಿಯೆಗಳು ಹಾಗೂ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಇದೆ.