ನವದೆಹಲಿ: ಕಳೆದ ಎರಡು ವಾರಗಳ ಅವಧಿಯಲ್ಲಿ ಅಮೆರಿಕಾ ಮತ್ತು ಇರಾನ್ ಕ್ಷಿಪಣಿ ದಾಳಿಗಳು, ಪರಸ್ಪರ ಆರೋಪ–ಪ್ರತ್ಯಾರೋಪಗಳು ಹಾಗೂ ಶಾಂತಿ ಒಪ್ಪಂದದ ಪ್ರಯತ್ನಗಳಲ್ಲಿ ತೊಡಗಿದ್ದರೆ, ಅದೇ ಸಮಯದಲ್ಲಿ ಇಸ್ರೇಲಿ ಸೇನೆ ದಕ್ಷಿಣ ಲೆಬನಾನ್‌ನ ಸಂಪೂರ್ಣ ಹಳ್ಳಿಗಳನ್ನು ಕ್ರಮಬದ್ಧವಾಗಿ ಧ್ವಂಸಗೊಳಿಸುವ ಕಾರ್ಯಾಚರಣೆ ನಡೆಸಿದೆ.
ಗಾರ್ಡಿಯನ್ ಪತ್ರಿಕೆಯ ವರದಿ ಪ್ರಕಾರ, ಇಸ್ರೇಲಿ ಸೇನೆ ಮನೆಗಳಿಗೆ ಸ್ಫೋಟಕಗಳನ್ನು ಅಳವಡಿಸಿ, ಅವನ್ನು ದೂರ ನಿಯಂತ್ರಿತ ಭಾರಿ ಸ್ಫೋಟಗಳಿಂದ ಉಡಾಯಿಸುವ ಮೂಲಕ ಇಡೀ ಹಳ್ಳಿಗಳನ್ನು ನೆಲಸಮಗೊಳಿಸಿದೆ.
ಇಸ್ರೇಲಿ ಸೇನೆ ಸ್ವತಃ ಪ್ರಕಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮೂರು ವಿಡಿಯೋಗಳನ್ನು ಗಾರ್ಡಿಯನ್ ಪರಿಶೀಲಿಸಿದ್ದು, ಅವುಗಳಲ್ಲಿ ತಾಯ್ಬೆ, ನಕ್ವೂರಾ ಮತ್ತು ದೀರ್ ಸೆರ್ಯಾನ್ ಗಡಿಭಾಗದ ಹಳ್ಳಿಗಳಲ್ಲಿ ನಡೆದ ಈ ಸಾಮೂಹಿಕ ಸ್ಫೋಟಗಳ ದೃಶ್ಯಗಳು ದಾಖಲಾಗಿವೆ.
ಲೆಬನಾನ್ ಮಾಧ್ಯಮಗಳು ಇತರ ಗಡಿಹಳ್ಳಿಗಳಲ್ಲಿಯೂ ಇದೇ ರೀತಿಯ ಭಾರಿ ಸ್ಫೋಟಗಳ ಬಗ್ಗೆ ವರದಿ ಮಾಡಿದ್ದರೂ, ಆ ನಿರ್ದಿಷ್ಟ ಆರೋಪಗಳನ್ನು ದೃಢೀಕರಿಸಲು ಅಗತ್ಯವಾದ ಉಪಗ್ರಹ ಚಿತ್ರಗಳು ತಕ್ಷಣ ಲಭ್ಯವಾಗಿಲ್ಲ. ಗಾರ್ಡಿಯನ್ ವರದಿ ಪ್ರಕಾರ, ಈ ಧ್ವಂಸ ಕಾರ್ಯಾಚರಣೆ, ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಗಡಿಭಾಗದ ಹಳ್ಳಿಗಳಲ್ಲಿನ “ಎಲ್ಲಾ ಮನೆಗಳನ್ನು” ಧ್ವಂಸಗೊಳಿಸುವಂತೆ ಸಾರ್ವಜನಿಕವಾಗಿ ನೀಡಿದ ಕರೆ ನಂತರ ತೀವ್ರಗೊಂಡಿದೆ. ಈ ಕ್ರಮವನ್ನು ಗಾಜಾದ ರಫಾ ಮತ್ತು ಬೈತ್ ಹನುನ್ ಪ್ರದೇಶಗಳಲ್ಲಿ ಅನುಸರಿಸಿದ ಮಾದರಿಯಂತೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ದಕ್ಷಿಣ ಗಾಜಾದ ರಫಾದಲ್ಲಿ ಇಸ್ರೇಲಿ ಸೇನೆ ಸುಮಾರು 90 ಶೇಕಡಾ ಮನೆಗಳನ್ನು ನಾಶಮಾಡಿದೆ. ಗಾರ್ಡಿಯನ್ ಉಲ್ಲೇಖಿಸಿದಂತೆ, ಗಾಜಾದಲ್ಲಿ ನಾಗರಿಕ ವಸತಿಗೃಹಗಳನ್ನು ಇಂತಹ ದೊಡ್ಡ ಪ್ರಮಾಣದಲ್ಲಿ ಧ್ವಂಸಗೊಳಿಸುವ ತಂತ್ರವನ್ನು ಕೆಲವು ಅಕಾಡೆಮಿಕ್ ವಲಯಗಳು “ಡೊಮಿಸೈಡ್” ಎಂದು ವರ್ಣಿಸಿವೆ – ಅಂದರೆ, ಸಂಪೂರ್ಣ ಪ್ರದೇಶಗಳನ್ನು ವಾಸಯೋಗ್ಯವಲ್ಲದಂತೆ ಮಾಡಲು ನಾಗರಿಕ ಮನೆಗಳನ್ನು ಉದ್ದೇಶಪೂರ್ವಕವಾಗಿ, ವ್ಯವಸ್ಥಿತವಾಗಿ ನಾಶಮಾಡುವ ಕ್ರಿಯೆ ಇದಾಗಿದೆ. ಈ ವಿಧಾನವನ್ನು ಬಳಸಿದ ಹಿನ್ನೆಲೆಯಲ್ಲಿ ಗಾಜಾದಲ್ಲಿ ಇಸ್ರೇಲ್ ವಿರುದ್ಧ ಜನಾಂಗಹತ್ಯೆಯ ಆರೋಪಗಳು ಕೂಡ ಕೇಳಿಬಂದಿವೆ.
ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಯಿಂದ ಉಡಾಯಿಸಲಾದ ರಾಕೆಟ್ ದಾಳಿಗಳಿಗೆ ಪ್ರತಿಯಾಗಿ ಇಸ್ರೇಲಿ ಸೇನೆ ಲೆಬನಾನ್‌ನಲ್ಲಿ ವಾಯುದಾಳಿ ಮತ್ತು ಭೂ ಆಕ್ರಮಣ ನಡೆಸಿದೆ. ಲೆಬನಾನ್ ಮಾಧ್ಯಮಗಳ ಪ್ರಕಾರ, ಶನಿವಾರ ದಕ್ಷಿಣ ಲೆಬನಾನ್ ಮೇಲೆ ನಡೆದ ಇಸ್ರೇಲಿ ದಾಳಿಗಳಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಯುದ್ಧ ಆರಂಭವಾದ ನಂತರದಿಂದ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಗಳಿಂದ ಮೃತಪಟ್ಟವರ ಒಟ್ಟು ಸಂಖ್ಯೆ ಈಗ 2,000 ಕ್ಕೂ ಅಧಿಕವಾಗಿದೆ.
ಶನಿವಾರ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್‌ನೊಂದಿಗೆ “ತಲೆಮಾರುಗಳವರೆಗೆ ಮುಂದುವರಿಯುವ” ಶಾಂತಿ ಒಪ್ಪಂದವನ್ನು ಬಯಸುತ್ತಿರುವುದಾಗಿ ಹೇಳಿದರು. ಆದರೆ ಈ ಶಾಂತಿ ಒಪ್ಪಂದ ಹಿಜ್ಬುಲ್ಲಾಗೆ ಅನ್ವಯಿಸುವುದಿಲ್ಲ; ಆ ಸಂಘಟನೆಯನ್ನು ಇಸ್ರೇಲ್ ಇನ್ನೂ “ಭಯೋತ್ಪಾದಕ ಸಂಘಟನೆ” ಎಂದು ಗುರುತಿಸುತ್ತಲೇ ಇದೆ. ಇಸ್ರೇಲಿ ಸೇನೆ, ನಡೆಸಿದ ಧ್ವಂಸ ಕಾರ್ಯಾಚರಣೆಗಳು ಹಿಜ್ಬುಲ್ಲಾ ಮೂಲಸೌಕರ್ಯಗಳನ್ನೇ ಗುರಿಯಾಗಿಸಿಕೊಂಡಿದ್ದವು ಎಂದು ಹೇಳಿದೆ.
ಇದರಲ್ಲಿ ಸುರಂಗ ಮಾರ್ಗಗಳು ಹಾಗೂ ಆ ಸಂಘಟನೆ ನಾಗರಿಕರ ಮನೆಗಳೊಳಗೆ ಅಡಗಿಸಿದ್ದಾಗಿ ಆರೋಪಿಸಲಾದ ಸೈನಿಕ ಸೌಲಭ್ಯಗಳು ಸೇರಿವೆ. ಇಸ್ರೇಲ್, ದಕ್ಷಿಣ ಲೆಬನಾನ್‌ನ ವಿಶಾಲ ಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಮತ್ತು ಲಿಟಾನಿ ನದಿವರೆಗೂ ವ್ಯಾಪಿಸುವ “ಭದ್ರತಾ ವಲಯ”ವನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಇಸ್ರೇಲ್‌ನ ಉತ್ತರ ಭಾಗದ ನಗರಗಳ ಭದ್ರತೆ ಸಂಪೂರ್ಣವಾಗಿ ಖಚಿತವಾಗುವವರೆಗೆ ಸ್ಥಳಾಂತರಗೊಂಡ ನಿವಾಸಿಗಳಿಗೆ ತಮ್ಮ ಮನೆಗಳಿಗೆ ಮರಳಲು ಅನುಮತಿ ಇರುವುದಿಲ್ಲ. ಇದರಿಂದ ದೀರ್ಘಕಾಲೀನ ಸ್ಥಳಾಂತರದ ಭೀತಿ ಹೆಚ್ಚಾಗಿದೆ.
ಇನ್ನು ಮಧ್ಯಪ್ರಾಚ್ಯದ ಇತರ ಭಾಗಗಳಲ್ಲಿ, ಭಾನುವಾರ ಇರಾನ್ ಮತ್ತು ಅಮೆರಿಕಾದ ನಡುವೆ ವ್ಯಾಪಕ ಸಂಘರ್ಷಕ್ಕೆ ತೆರೆ ಎಳೆಯುವ ಒಪ್ಪಂದಕ್ಕೆ ತಲುಪುವಲ್ಲಿ ವಿಫಲವಾಯಿತು. ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಪಾಕಿಸ್ತಾನದಲ್ಲಿ ನಡೆದ ಮಾತುಕತೆಗಳ ನಂತರ ಅಲ್ಲಿಂದ ಹೊರಟರು; 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಎರಡೂ ದೇಶಗಳ ನಡುವೆ ನಡೆದ ಅತ್ಯುನ್ನತ ಮಟ್ಟದ ಈ ಭೇಟಿಯ ಬಳಿಕ, ವಾಷಿಂಗ್ಟನ್ ತನ್ನ “ಕೊನೆಯ ಮತ್ತು ಅತ್ಯುತ್ತಮ” ಪ್ರಸ್ತಾವನೆಯನ್ನು ತೆಹ್ರಾನ್‌ಗೆ ನೀಡಿರುವುದಾಗಿ ತಿಳಿಸಿದ್ದಾರೆ.
“ನಾವು ಇಲ್ಲಿ ಬಹಳ ಸರಳವಾದ ಒಂದು ಪ್ರಸ್ತಾವನೆ ಇಟ್ಟು ಹೋಗುತ್ತಿದ್ದೇವೆ,” ಎಂದು ವ್ಯಾನ್ಸ್ ಹೇಳಿದರು. “ಇರಾನಿಯರು ಅದನ್ನು ಸ್ವೀಕರಿಸುತ್ತಾರೆಯೇ ಎಂಬುದನ್ನು ನೋಡೋಣ.” ಇರಾನ್ ಸಂಸತ್ ಅಧ್ಯಕ್ಷ ಮೊಹಮ್ಮದ್ ಬಾಗರ್ ಘಾಲಿಬಾಫ್, ತಮ್ಮ ಮಾತುಕತೆ ತಂಡ “ರಚನಾತ್ಮಕ ಸಲಹೆಗಳನ್ನು ಮುಂದಿಟ್ಟಿದ್ದರೂ, ಈ ಸುತ್ತಿನ ಮಾತುಕತೆಯಲ್ಲಿ ಎದುರಾಳಿ ಇರಾನ್ ಪ್ರತಿನಿಧಿ ಮಂಡಳಿಯ ವಿಶ್ವಾಸವನ್ನು ಗಳಿಸಲು ವಿಫಲವಾಯಿತು” ಎಂದು ಹೇಳಿದರು.