ಹಾರ್ಮುಜ್ ಜಲಸಂಧಿ 
ವಿದೇಶ

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

ಕಳೆದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನಡೆಸಲು ಉದ್ದೇಶಿಸಿದ್ದ ಭಾರಿ ಪ್ರಮಾಣದ ಸೇನಾ ದಾಳಿಯನ್ನು ಕೊನೆಯ ಕ್ಷಣದಲ್ಲಿ ತಡೆಹಿಡಿದಿದ್ದರು.

ವಾಷಿಂಗ್ಟನ್: ಜಾಗತಿಕ ತೈಲ ಸಾಗಣೆ ಮತ್ತು ಸಮುದ್ರ ವ್ಯಾಪಾರದ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ಪುನಃ ಸುಗಮಗೊಳಿಸಲು ಅಮೆರಿಕ, ಇರಾನ್ ಮತ್ತು ಒಮಾನ್ ನಡುವಿನ ಮಹತ್ವದ ಮಧ್ಯಂತರ ಒಪ್ಪಂದ ಅಂತಿಮ ಹಂತ ತಲುಪಿದೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬುಧವಾರವೇ ಈ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಆಕ್ಸಿಯೊಸ್ (Axios) ವರದಿ ಮಾಡಿದೆ. ಎರಡು ಪ್ರಾದೇಶಿಕ ಮೂಲಗಳು ಹಾಗೂ ಅಮೆರಿಕದ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಈ ಮಾಹಿತಿ ನೀಡಲಾಗಿದೆ.

ಈ ಮಧ್ಯಂತರ ಒಪ್ಪಂದದ ಮೂಲಕ ಕಳೆದ ತಿಂಗಳು ಮುರಿದುಬಿದ್ದಿದ್ದ ಅಮೆರಿಕ–ಇರಾನ್ ಕದನ ವಿರಾಮವನ್ನು ಮತ್ತೆ ಜಾರಿಗೆ ತರುವುದು, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸುವುದು ಹಾಗೂ ಇರಾನ್‌ನ ಅಣು ಕಾರ್ಯಕ್ರಮ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಕುರಿತು ಹೊಸ ಸುತ್ತಿನ ರಾಜತಾಂತ್ರಿಕ ಮಾತುಕತೆಗೆ ವೇದಿಕೆ ಸಿದ್ಧಪಡಿಸುವುದು ಪ್ರಮುಖ ಉದ್ದೇಶವಾಗಿದೆ.

ಕಳೆದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನಡೆಸಲು ಉದ್ದೇಶಿಸಿದ್ದ ಭಾರಿ ಪ್ರಮಾಣದ ಸೇನಾ ದಾಳಿಯನ್ನು ಕೊನೆಯ ಕ್ಷಣದಲ್ಲಿ ತಡೆಹಿಡಿದಿದ್ದರು.

ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ನಡೆಸಿದ ಸಮಾಲೋಚನೆಯ ಬಳಿಕ ರಾಜತಾಂತ್ರಿಕ ಪ್ರಯತ್ನಗಳಿಗೆ ಇನ್ನಷ್ಟು ಅವಕಾಶ ನೀಡುವ ನಿರ್ಧಾರವನ್ನು ಟ್ರಂಪ್ ಕೈಗೊಂಡಿದ್ದರು. ಆದರೆ, ಮಾತುಕತೆ ವಿಫಲವಾದರೆ ಸೇನಾ ಕ್ರಮ ಕೈಗೊಳ್ಳುವ ಆಯ್ಕೆಯನ್ನು ಅಮೆರಿಕ ಇನ್ನೂ ತೆರೆದಿಟ್ಟಿದೆ ಎಂಬ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದರು.

ಕರಡು ಒಪ್ಪಂದದ ಪ್ರಕಾರ, ಒಮಾನ್ ಮತ್ತು ಇರಾನ್ ನಡುವೆ ಮೊದಲ ಹಂತದಲ್ಲಿ 60 ದಿನಗಳ ತಾತ್ಕಾಲಿಕ ವ್ಯವಸ್ಥೆ ಜಾರಿಯಾಗಲಿದೆ. ಅಗತ್ಯವಿದ್ದರೆ ಈ ಅವಧಿಯನ್ನು ವಿಸ್ತರಿಸುವ ಅವಕಾಶವೂ ಇರಲಿದೆ. ಈ ಅವಧಿಯಲ್ಲಿ ಪರ್ಷಿಯನ್ ಕೊಲ್ಲಿಯೊಳಗೆ ಪ್ರವೇಶಿಸುವ ಎಲ್ಲಾ ವಾಣಿಜ್ಯ ಹಡಗುಗಳು ಇರಾನ್ ಜಲಪ್ರದೇಶದ ಉತ್ತರದ ಸಮುದ್ರ ಮಾರ್ಗವನ್ನು ಬಳಸಲಿದ್ದು, ಅರಬ್ಬೀ ಸಮುದ್ರದತ್ತ ಹೊರಡುವ ಹಡಗುಗಳು ಒಮಾನ್ ಜಲಪ್ರದೇಶದ ದಕ್ಷಿಣ ಮಾರ್ಗದ ಮೂಲಕ ಸಂಚರಿಸಲಿವೆ. ಈ ಸಂಪೂರ್ಣ ಸಂಚಾರ ವ್ಯವಸ್ಥೆಯನ್ನು ಉಭಯ ದೇಶಗಳ ಸಮನ್ವಯದಲ್ಲಿ ನಿರ್ವಹಿಸುವ ಯೋಜನೆ ರೂಪಿಸಲಾಗಿದೆ.

ಈ 60 ದಿನಗಳ ಅವಧಿಯಲ್ಲಿ ಹಾರ್ಮುಜ್ ಜಲಸಂಧಿ ಬಳಸುವ ಯಾವುದೇ ಹಡಗಿನಿಂದ ಟ್ರಾನ್ಸಿಟ್ ಶುಲ್ಕ ಅಥವಾ ಟೋಲ್ ಸಂಗ್ರಹಿಸಲಾಗುವುದಿಲ್ಲ. ಜಾಗತಿಕ ವ್ಯಾಪಾರಕ್ಕೆ ಅಡ್ಡಿಯಾಗದಂತೆ ಮತ್ತು ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿದೆ.

ಒಪ್ಪಂದದ ಮತ್ತೊಂದು ಪ್ರಮುಖ ಅಂಶವೆಂದರೆ, ಜಲಸಂಧಿಯ ಮಧ್ಯಭಾಗದಲ್ಲಿರುವ ನೌಕಾ ಸ್ಫೋಟಕಗಳನ್ನು (ನೇವಲ್ ಮೈನ್ಸ್) 30 ದಿನಗಳೊಳಗೆ ತೆರವುಗೊಳಿಸುವ ಯೋಜನೆ. ಈ ಕಾರ್ಯ ಪೂರ್ಣಗೊಂಡ ನಂತರ ಮಧ್ಯದ ನೌಕಾಯಾನ ಮಾರ್ಗವನ್ನು ಒಳಬರುವ ಹಾಗೂ ಹೊರಹೋಗುವ ಎರಡೂ ದಿಕ್ಕಿನ ಹಡಗುಗಳಿಗೆ ಬಳಸುವ ಶಾಶ್ವತ ವ್ಯವಸ್ಥೆಯನ್ನು ರೂಪಿಸಲು ಒಮಾನ್ ಮತ್ತು ಇರಾನ್ ನಡುವೆ ಪ್ರತ್ಯೇಕ ಮಾತುಕತೆ ನಡೆಯಲಿದೆ.

ಸುಮಾರು ಮೂರು ವಾರಗಳ ಹಿಂದೆಯೇ ಇದೇ ರೀತಿಯ ಒಪ್ಪಂದಕ್ಕೆ ಶ್ವೇತಭವನ, ಒಮಾನ್ ಹಾಗೂ ಇತರ ಮಧ್ಯಸ್ಥ ರಾಷ್ಟ್ರಗಳು ತಾತ್ವಿಕ ಒಪ್ಪಿಗೆ ಪಡೆದಿದ್ದವು ಎಂದು ಆಕ್ಸಿಯೊಸ್ ವರದಿ ಹೇಳಿದೆ. ಆದರೆ, ಬಳಿಕ ಇರಾನ್ ಮತ್ತೆ ಹಡಗುಗಳ ಮೇಲೆ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಿಸ್ಥಿತಿ ಹದಗೆಟ್ಟು, ಎರಡು ವಾರಗಳ ಕಾಲ ಸಂಘರ್ಷ ಮುಂದುವರಿದಿತ್ತು. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ವ್ಯಾಪಕ ಯುದ್ಧದ ಆತಂಕವೂ ಸೃಷ್ಟಿಯಾಗಿತ್ತು.

ಈ ಹೊಸ ಮಾತುಕತೆಯಲ್ಲಿ ಒಮಾನ್ ಜೊತೆಗೆ ಕತಾರ್, ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾ ಕೂಡ ಪ್ರಮುಖ ಮಧ್ಯಸ್ಥಿಕೆ ವಹಿಸಿವೆ. ಅಮೆರಿಕದ ಶ್ವೇತಭವನ ಕೂಡ ಸಂಪೂರ್ಣ ಮಾತುಕತೆ ಪ್ರಕ್ರಿಯೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಎಲ್ಲ ಪಕ್ಷಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವರದಿ ತಿಳಿಸಿದೆ.

ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್ ವಿಟ್‌ಕಾಫ್ ಕಳೆದ ಕೆಲವು ದಿನಗಳಿಂದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹಾಗೂ ಒಮಾನ್ ವಿದೇಶಾಂಗ ಸಚಿವ ಬದ್ರ್ ಅಲ್-ಬುಸೈದಿ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ವಾರಾಂತ್ಯದಲ್ಲೇ ಅಬ್ಬಾಸ್ ಅರಘ್ಚಿ ಈ ಕರಡು ಒಪ್ಪಂದಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದರೂ, ಅಂತಿಮ ನಿರ್ಧಾರಕ್ಕಾಗಿ ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಮತ್ತು ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಅನುಮೋದನೆ ಅಗತ್ಯವಾಗಿತ್ತು.

ಅಮೆರಿಕದ ಅಧಿಕಾರಿಗಳು ಮತ್ತು ಪ್ರಾದೇಶಿಕ ಮೂಲಗಳ ಪ್ರಕಾರ, ಮಂಗಳವಾರ ಇರಾನ್‌ನ ಉನ್ನತ ನಾಯಕತ್ವ ಈ ಪ್ರಸ್ತಾವನೆಗೆ ಅಂತಿಮ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿವೆ.

ಇದರಿಂದ ಒಪ್ಪಂದದ ಅಧಿಕೃತ ಘೋಷಣೆಗೆ ಇದ್ದ ಪ್ರಮುಖ ಅಡ್ಡಿ ನಿವಾರಣೆಯಾಗಿದ್ದು, ಬುಧವಾರವೇ ಅಮೆರಿಕ, ಇರಾನ್ ಮತ್ತು ಒಮಾನ್ ಈ ಮಹತ್ವದ ಒಪ್ಪಂದವನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

ಈ ಒಪ್ಪಂದ ಜಾರಿಯಾದರೆ ಜಾಗತಿಕ ತೈಲ ಮಾರುಕಟ್ಟೆ, ಸಮುದ್ರ ವ್ಯಾಪಾರ ಹಾಗೂ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯಲ್ಲಿ ಮಹತ್ವದ ಬದಲಾವಣೆ ಉಂಟಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!

Los Angeles ಭೇಟಿಗೂ ಮುನ್ನ ಟ್ರಂಪ್‌ಗೆ ಆಘಾತ; ಗಾಲ್ಫ್‌ ಮೈದಾನದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿ ಬಂಧನ, ಹತ್ಯೆಗೆ ಸಂಚು ಶಂಕೆ..!

ಭಾರತದ ಯುವಜನತೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ: ಭಾವನಾತ್ಮಕ Video ಮೂಲಕ ಮನದಾಳದ ಮಾತು ಹಂಚಿಕೊಂಡ ಸೋನಂ ವಾಂಗ್‌ಚುಕ್‌