ಇಸ್ಲಾಮಾಬಾದ್: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇಮ್ರಾನ್ ಖಾನ್ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಇಮ್ರಾನ್ ಅವರು ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ತಲುಪಿರುವುದು ಖಚಿತವಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸಲಾಗಿದೆ,” ಎಂದು PTI ವಕ್ತಾರ ಜುಲ್ಫಿ ಬುಖಾರಿ ತಿಳಿಸಿದ್ದಾರೆ.
PTI ಸದಸ್ಯ ಆರಿಫ್ ಅಲ್ವಿ ಕೂಡ ಇಮ್ರಾನ್ ಖಾನ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿರುವುದನ್ನು ‘ಎಕ್ಸ್’ನಲ್ಲಿ ದೃಢಪಡಿಸಿದ್ದಾರೆ. ಈ ಸುದ್ದಿ ಕೇಳಿ ದೇಶದ ಜನರು ಸಂತಸಗೊಂಡಿದ್ದಾರೆ ಎಂದು ಹೇಳಿದ್ದಾರೆ.
73 ವರ್ಷದ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿಗೆ ಕಳೆದ ವರ್ಷದ ಕೊನೆಯಲ್ಲಿ ಭ್ರಷ್ಟಾಚಾರ ಸೇರಿದಂತೆ ಇತರ ಪ್ರಕರಣಗಳಲ್ಲಿ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2023ರಿಂದ ಜೈಲಿನಲ್ಲಿರುವ ಖಾನ್, ತಮ್ಮ ವಿರುದ್ಧದ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸುತ್ತಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಆಸ್ಪತ್ರೆಯ ಬಳಿ ಜಮಾಯಿಸಿದರು. ಕೆಲವರು ಹಾದುಹೋಗುತ್ತಿದ್ದ ವಾಹನಗಳ ಮೇಲೆ ಕೆಂಪು ಹೂವಿನ ದಳಗಳನ್ನು ಸುರಿಸಿ ಸಂಭ್ರಮಿಸಿದರು.
69 ವರ್ಷದ ಯೂನಸ್ ಖುರೇಷಿ, “ಪಾಕಿಸ್ತಾನಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ ವ್ಯಕ್ತಿಗೆ ಬೆಂಬಲ ನೀಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಬೆಂಬಲಿಗ 52 ವರ್ಷದ ಬಿಲಾಲ್, ವಿಶ್ವಕಪ್ ಗೆದ್ದ ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಮ್ರಾನ್ ಖಾನ್ ಅವರ ಮೇಲಿನ ನಮ್ಮ ಪ್ರೀತಿ ಮತ್ತು ಬೆಂಬಲ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟಿದ್ದು, ವೈದ್ಯಕೀಯ ಪರೀಕ್ಷೆಯ ಅಗತ್ಯವಿದೆ ಎಂದು ಅವರ ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರ, ಎರಡು ದಿನಗಳೊಳಗೆ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿತ್ತು.
ಈ ವರ್ಷದ ಆರಂಭದಲ್ಲಿಯೂ ಇಮ್ರಾನ್ ಖಾನ್ ಕಣ್ಣಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರ ಕುಟುಂಬದವರು, ಬಲಗಣ್ಣಿನ ದೃಷ್ಟಿಯ ಬಹುಪಾಲು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದರು.
ಮೂರು ನ್ಯಾಯಮೂರ್ತಿಗಳ ಪೀಠವು ಇಮ್ರಾನ್ ಖಾನ್ ಅವರಿಗೆ ವಾರಕ್ಕೊಮ್ಮೆ ಕುಟುಂಬ ಸದಸ್ಯರನ್ನು ಭೇಟಿಯಾಗಲು ಹಾಗೂ ವಾರಕ್ಕೆ ಎರಡು ಬಾರಿ ಪುತ್ರರೊಂದಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ನೀಡುವಂತೆ ಆದೇಶಿಸಿದೆ.
ಅವರ ಚಿಕಿತ್ಸೆಗೆ ತಜ್ಞ ವೈದ್ಯರ ಸಮಿತಿಯನ್ನು ರಚಿಸಲಾಗುವುದು. ವೈದ್ಯೆಯಾಗಿರುವ ಅವರ ಸಹೋದರಿ ಉಜ್ಮಾ ಖಾನ್ ಅವರಿಗೂ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇಮ್ರಾನ್ ಖಾನ್ 2018ರಿಂದ 2022ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ರಾಜಕೀಯ ಬಿಕ್ಕಟ್ಟಿನ ನಡುವೆ ಅವಿಶ್ವಾಸ ನಿರ್ಣಯದ ಮೂಲಕ 2022ರಲ್ಲಿ ಅವರು ಅಧಿಕಾರ ಕಳೆದುಕೊಂಡರು. ಅವರ ಸರ್ಕಾರ ಮತ್ತು ಪ್ರಭಾವಿ ಸೇನಾ ವ್ಯವಸ್ಥೆಯ ನಡುವಿನ ಸಂಘರ್ಷವೂ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿತ್ತು. 2023ರ ಮೇನಲ್ಲಿ ಇಮ್ರಾನ್ ಖಾನ್ ಬಂಧನಕ್ಕೊಳಗಾದ ಬಳಿಕ ಪಾಕಿಸ್ತಾನದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.