ಇರಾನ್ ಸರ್ವೋಚ್ಛ ನಾಯಕ ಖಮೇನಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ 
ವಿದೇಶ

ಹಾರ್ಮುಜ್ ಜಲಸಂಧಿ ನಮ್ಮದೇ: ಟ್ರಂಪ್ ಸ್ಫೋಟಕ ಹೇಳಿಕೆ; ನಮ್ಮ ಭೂಪ್ರದೇಶಕ್ಕೆ ಕೈಹಾಕಿದರೆ ಸರ್ವನಾಶ ಗ್ಯಾರಂಟಿ- ಟೆಹ್ರಾನ್ ಖಡಕ್ ವಾರ್ನಿಂಗ್

ಟೆಹ್ರಾನ್ ಮೇಲೆ ಒತ್ತಡ ಹೇರಲು ಹಾಗೂ ಅಲ್ಲಿನ ಆಡಳಿತವನ್ನು ಉರುಳಿಸಲು ಟ್ರಂಪ್ ಆಡಳಿತವು ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಿಸಿರುವ ಬೆನ್ನಲ್ಲೇ ಇರಾನ್‌ ಈ ಎಚ್ಚರಿಕೆ ನೀಡಿದೆ.

ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ತೀವ್ರ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಘರ್ಷ ಏರ್ಪಟ್ಟಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು "ಅಮೆರಿಕದ ಭೂಭಾಗ" ಎಂದು ಘೋಷಿಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಜಲ, ಭೂಮಿ, ಆಕಾಶ್ ಮತ್ತು ಸೈಬರ್ ಮೂಲಕ "ವಿನಾಶಕಾರಿ" ಸೇನಾ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ.

ಟೆಹ್ರಾನ್ ಮೇಲೆ ಒತ್ತಡ ಹೇರಲು ಹಾಗೂ ಅಲ್ಲಿನ ಆಡಳಿತವನ್ನು ಉರುಳಿಸಲು ಟ್ರಂಪ್ ಆಡಳಿತವು ಇತಿಹಾಸದಲ್ಲೇ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಿಸಿರುವ ಬೆನ್ನಲ್ಲೇ ಇರಾನ್‌ ಈ ಎಚ್ಚರಿಕೆ ನೀಡಿದೆ.

ಅಮೆರಿಕದ ಆರ್ಥಿಕ ಸಚಿವ ಸ್ಕಾಟ್ ಬೆಸೆಂಟ್ ಸೋಮವಾರ ಹೊಸ ನಿರ್ಬಂಧಗಳ ವಿವರಗಳನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಯಾವುದೇ ರೀತಿಯಲ್ಲಿ ಇರಾನ್‌ಗೆ ನೆರವು ನೀಡುವ ದೇಶಗಳು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಎಚ್ಚರಿಸಿದ್ದಾರೆ.

ಸುಮಾರು ಆರು ತಿಂಗಳಿಂದ ಮುಂದುವರಿದಿರುವ ಅಮೆರಿಕ-ಇಸ್ರೇಲ್ ಯುದ್ಧವು ಇರಾನ್‌ನ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಆಯಕಟ್ಟಿನ ಪ್ರಮುಖ ಜಲಮಾರ್ಗವಾದ ಹೋರ್ಮುಜ್ ಜಲಸಂಧಿಯ ಮೂಲಕ ಸಾಗಾಟಕ್ಕೂ ಅಡ್ಡಿಯುಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿವೆ.

ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಲಿ ಅಬ್ದೊಲ್ಲಾಹಿ, ಟೆಹ್ರಾನ್ ಹಲವು ಕ್ಷೇತ್ರಗಳಲ್ಲಿ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಭೂಮಿ, ಸಮುದ್ರ, ವಾಯು, ವಾಯು ರಕ್ಷಣಾ ವ್ಯವಸ್ಥೆ ಮತ್ತು ಸೈಬರ್ ಕ್ಷೇತ್ರಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಶತ್ರುವಿನ ಹೊಸ ಬೆದರಿಕೆಗಳಿಗೆ ಇರಾನ್ ಸಶಸ್ತ್ರ ಪಡೆಗಳು ಪ್ರಬಲ, ಶಿಕ್ಷಾರ್ಹ ಹಾಗೂ ವಿನಾಶಕಾರಿ ಪ್ರತಿಕ್ರಿಯೆ ನೀಡಲಿವೆ ಎಂದು ಇರಾನ್ ಮಾಧ್ಯಮಗಳು ಉಲ್ಲೇಖಿಸಿವೆ.

ಯುದ್ಧದಿಂದ ಇರಾನ್‌ನ ಆರ್ಥಿಕತೆ ಹಾಗೂ ಸಾಂಪ್ರದಾಯಿಕ ಸೇನಾ ಸಾಮರ್ಥ್ಯಕ್ಕೆ ಭಾರಿ ಹಾನಿಯಾಗಿದ್ದರೂ, ತೈಲ ಸಾಗಣೆ ಹಡಗುಗಳ ಸಂಚಾರ ಹಾಗೂ ಪ್ರಾದೇಶಿಕ ಗುರಿಗಳಿಗೆ ಬೆದರಿಕೆ ಒಡ್ಡಬಲ್ಲ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯವನ್ನು ಇರಾನ್ ಇನ್ನೂ ಹೊಂದಿದೆ.

“ಇರಾನ್ ಇನ್ನೂ ಸರಿಯಾದ ಒಪ್ಪಂದಕ್ಕೆ ಸಿದ್ಧವಾಗಿಲ್ಲ”: ಟ್ರಂಪ್

ಶುಕ್ರವಾರ ಮಾತನಾಡಿದ ಟ್ರಂಪ್ ಅವರು, ಇರಾನ್ ತಾನು ಬಯಸುವ “ಸರಿಯಾದ ಒಪ್ಪಂದ”ಕ್ಕೆ ಇನ್ನೂ ಸಿದ್ಧವಾಗಿಲ್ಲ. ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವ ಮುನ್ನ ವಾಷಿಂಗ್ಟನ್ ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ಅಮೆರಿಕದ ಸೇನಾ ಆಯ್ಕೆಗಳ ಬಗ್ಗೆ ಕೇಳಿದಾಗ, “ಇದರರ್ಥ ನಾವು ಏನಾಗುತ್ತದೆ ಎಂಬುದನ್ನು ನೋಡುತ್ತಿದ್ದೇವೆ ಅಷ್ಟೇ” ಎಂದು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಸಂಪೂರ್ಣ ಪ್ರದೇಶದ ಮೇಲೆ ನಮ್ಮ ಸಂಪೂರ್ಣ ನಿಯಂತ್ರಣವಿದೆ. ಅದರೊಳಗಿನ ಭೂ ಪ್ರದೇಶಗಳ ಮೇಲೂ ನಮ್ಮ ನಿಯಂತ್ರಣವಿದೆ. ಅವರು ಒಪ್ಪಂದ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ನನ್ನ ಅಭಿಪ್ರಾಯದಲ್ಲಿ, ಅವರು ಸರಿಯಾದ ಒಪ್ಪಂದಕ್ಕೆ ಇನ್ನೂ ಸಿದ್ಧವಾಗಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಯಾವುದೇ ಕಾರಣಕ್ಕೂ ಇರಾನ್ ಪರಮಾಣು ಶಸ್ತ್ರಾಸ್ತ್ರ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.

ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ನಾವು ಅವಕಾಶ ನೀಡಬಾರದು. ಇರಾನ್ ಬಳಿ ಪರಮಾಣು ಶಸ್ತ್ರಾಸ್ತ್ರ ಬಂದರೆ ಬಹಳ ಕೆಟ್ಟ ಪರಿಣಾಮಗಳನ್ನು ನೀವು ನೋಡಬೇಕಾಗುತ್ತದೆ ಎಂದು ಹೇಳಿದರು.

ಇದೇ ವೇಳೆ, ಹಾರ್ಮುಜ್ ಜಲಸಂಧಿಯನ್ನು ನಾನು ಈಗ ಅಮೆರಿಕದ ಪ್ರದೇಶವೆಂದು ಪರಿಗಣಿಸುತ್ತೇನೆ. ಅದು ಅಮೆರಿಕದ ಪ್ರದೇಶ” ಎಂದು ಟ್ರಂಪ್ ಹೇಳಿರುವುದು ಗಮನ ಸೆಳೆದಿದೆ.

ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧ: ಅಮೆರಿಕ

ಅಮೆರಿಕಾ ಸಚಿವ ಸ್ಕಾಟ್ ಬೆಸೆಂಟ್ ಅವರು ಮಾತನಾಡಿ, ಇರಾನ್ ವಿರುದ್ಧ ಆರ್ಥಿಕ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸುವ ಭಾಗವಾಗಿ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇದು ಒಂದರ ಹಿಂದೆ ಒಂದರಂತೆ ಬರುವ ಎರಡು ಹಂತಗಳ ಕ್ರಮ. ನಮ್ಮ ಬಳಿ ದಿಗ್ಬಂಧನವಿದೆ. ಜೊತೆಗೆ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಿದ್ದೇವೆ. ನಾವು ಈ ಆಡಳಿತವನ್ನು ಕುಸಿಯುವಂತೆ ಮಾಡಲಿದ್ದೇವೆ” ಎಂದೂ ಹೇಳಿದ್ದಾರೆ.

ಇರಾನ್‌ಗೆ ಆರ್ಥಿಕ ನೆರವು ನೀಡುವ ದೇಶಗಳ ವಿರುದ್ಧವೂ ನಿರ್ಬಂಧ ವಿಧಿಸುವ ಸಾಧ್ಯತೆಯ ಬಗ್ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಸಮುದ್ರ ಮಾರ್ಗದ ಮೂಲಕ ಸಾಗಿಸುವ ತೈಲದ ಅತಿದೊಡ್ಡ ಖರೀದಿದಾರ ಚೀನಾ, ಅಮೆರಿಕದ ಕ್ರಮವನ್ನು ವಿರೋಧಿಸಿದೆ. “ನಿರ್ಬಂಧ ಮತ್ತು ಒತ್ತಡದಿಂದ ಸಮಸ್ಯೆ ಬಗೆಹರಿಯುವುದಿಲ್ಲ” ಎಂದು ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಹೇಳಿದ್ದು, ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದೆ.

ರಾಯಿಟರ್ಸ್ ಉಲ್ಲೇಖಿಸಿರುವ ಕೆಪ್ಲರ್ ದತ್ತಾಂಶದ ಪ್ರಕಾರ, 2025ರಲ್ಲಿ ಇರಾನ್ ಸಾಗಾಟ ಮಾಡಿದ ತೈಲದ ಶೇ.80ಕ್ಕೂ ಹೆಚ್ಚು ಭಾಗ ಚೀನಾಕ್ಕೆ ತೆರಳಿತ್ತು. ಚೀನಾದ ಮೇಲಿನ ಅಮೆರಿಕದ ಮತ್ತಷ್ಟು ಒತ್ತಡವು ಪ್ರತೀಕಾರದ ಕ್ರಮಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಈಗಾಗಲೇ ವ್ಯಾಪಾರ ಮತ್ತು ಪ್ರಮುಖ ಖನಿಜಗಳ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ.

ನಿರ್ಬಂಧಗಳಿಂದ ಆರ್ಥಿಕತೆಗೆ ಹೊಡೆತ: ಇರಾನ್ ಒಪ್ಪಿಗೆ

ಅಮೆರಿಕದ ಒತ್ತಡಕ್ಕೆ ಇರಾನ್ ನಾಯಕರು ತಿರುಗೇಟು ನೀಡುತ್ತಿದ್ದರೂ, ದೇಶದ ಆರ್ಥಿಕ ಸಂಕಷ್ಟದ ತೀವ್ರತೆಯನ್ನು ಒಪ್ಪಿಕೊಂಡಿದ್ದಾರೆ.

ಅಮೆರಿಕದೊಂದಿಗಿನ ಮಧ್ಯಸ್ಥಿಕೆ ಮಾತುಕತೆಯಲ್ಲಿ ಇರಾನ್‌ನ ಪ್ರಮುಖ ಸಂಧಾನಕಾರರಾಗಿರುವ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್, ನಿರ್ಬಂಧಗಳನ್ನು ಎದುರಿಸಲು ದೇಶ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

“ನ್ಯಾಯದ ನಿರ್ಬಂಧಗಳನ್ನು ಎದುರಿಸಲು ಯೋಜನೆ ರೂಪಿಸಬೇಕು. ಅವುಗಳನ್ನು ನಾವು ಮೀರಲು ಸಾಧ್ಯವಾಗಬೇಕು” ಎಂದು ನೆರೆಯ ಇರಾಕ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ದೇಶವನ್ನು ಉಳಿಸಿಕೊಳ್ಳಲು ಕೇವಲ ಸೇನಾ ಸಾಮರ್ಥ್ಯ ಸಾಕಾಗುವುದಿಲ್ಲ ಎಂದು ಖಾಲಿಬಾಫ್ ಎಚ್ಚರಿಸಿದ್ದಾರೆ.

“ನಮ್ಮ ಬಳಿ ಎಷ್ಟೇ ಸೇನಾ ಶಕ್ತಿ ಇದ್ದರೂ, ಜನರು ಹಸಿದಿದ್ದರೆ, ಹಣದ ಹರಿವು ಇಲ್ಲದಿದ್ದರೆ, ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಉತ್ಪಾದನೆ ಇಲ್ಲದಿದ್ದರೆ ನಾವು ಉಳಿಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ದಶಕಗಳಿಂದ ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿರುವ ಇರಾನ್, ಇದೀಗ ಹೆಚ್ಚುತ್ತಿರುವ ಹಣದುಬ್ಬರ, ದುರ್ಬಲಗೊಳ್ಳುತ್ತಿರುವ ಕರೆನ್ಸಿ, ಇಂಧನ ಕೊರತೆ ಮತ್ತು ಮೂಲಸೌಕರ್ಯ ಹಾನಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ.

ತೈಲ ಬೆಲೆ ಏರಿಕೆ

ಈ ನಡುವೆ ಅಮೆರಿಕದ ನಿರ್ಬಂಧಗಳ ಬೆದರಿಕೆಯ ಹಿನ್ನೆಲೆಯಲ್ಲಿ ಶುಕ್ರವಾರ ತೈಲ ಬೆಲೆ ಏರಿಕೆಯಾಗಿದೆ. ಪೂರೈಕೆ ಮತ್ತಷ್ಟು ಬಿಗಿಯಾಗಬಹುದು ಹಾಗೂ ಸಾಗಾಟದ ಅಡಚಣೆ ಮುಂದುವರಿಯಬಹುದು ಎಂಬ ನಿರೀಕ್ಷೆ ಮಾರುಕಟ್ಟೆಯಲ್ಲಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 94.39 ಡಾಲರ್‌ಗೆ ಏರಿಕೆಯಾದರೆ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲ 87.06 ಡಾಲರ್‌ಗೆ ತಲುಪಿದೆ.

ಹಾರ್ಮುಜ್ ಜಲಸಂಧಿ ಸಂಘರ್ಷದ ಪ್ರಮುಖ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಯುದ್ಧಕ್ಕೂ ಮುನ್ನ ಜಗತ್ತಿನ ಒಟ್ಟು ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗ ಈ ಕಿರಿದಾದ ಜಲಮಾರ್ಗದ ಮೂಲಕ ಸಾಗುತ್ತಿತ್ತು. ಆದರೆ ಈಗ ಸಾಗಾಟ ತೀವ್ರವಾಗಿ ಕುಸಿದಿದೆ. ಗುರುವಾರ ಕೇವಲ ಏಳು ಸರಕು ಸಾಗಣೆ ಹಡಗುಗಳು ಜಲಸಂಧಿಯನ್ನು ದಾಟಿರುವುದಾಗಿ ಕೆಪ್ಲರ್ ದತ್ತಾಂಶವನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಹಾರ್ಮುಜ್ ಮೂಲಕ ನೌಕಾಯಾನವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಇರಾನ್ ಮತ್ತು ಒಮಾನ್ ಪ್ರತ್ಯೇಕ ಮಾತುಕತೆ ನಡೆಸಿವೆ. ಆದರೆ, ಹಡಗುಗಳಿಗೆ ಶುಲ್ಕ ವಿಧಿಸುವ ಯಾವುದೇ ವ್ಯವಸ್ಥೆಯನ್ನು ಅಮೆರಿಕ ವಿರೋಧಿಸಿದೆ.

ನೌಕಾಯಾನದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳ ಕುರಿತು ಚರ್ಚಿಸಲು ನ್ಯಾಟೋದ ಉನ್ನತ ಕಮಾಂಡರ್ ಅಮೆರಿಕ ವಾಯುಪಡೆಯ ಜನರಲ್ ಅಲೆಕ್ಸಸ್ ಗ್ರಿಂಕೆವಿಚ್ ಮಿತ್ರರಾಷ್ಟ್ರಗಳ ರಕ್ಷಣಾ ಮುಖ್ಯಸ್ಥರೊಂದಿಗೆ ವಿಡಿಯೊ ಸಭೆ ನಡೆಸಿದ್ದಾರೆ. ಇದು ನ್ಯಾಟೋದ ಅಧಿಕೃತ ಕಾರ್ಯಾಚರಣೆಯಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದರೂ, ನ್ಯಾಟೋದ ಸಾಮರ್ಥ್ಯಗಳನ್ನು ಬಳಸಿಕೊಂಡು ಸಮನ್ವಯ ಸಾಧಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಟ್ರಂಪ್ ಜನಪ್ರಿಯತೆಗೂ ಹೊಡೆತ

ಯುದ್ಧದಿಂದ ಇರಾನ್‌ಗೆ ಭಾರಿ ಹಾನಿಯಾಗಿದ್ದರೂ, ಟ್ರಂಪ್ ಆರಂಭದಲ್ಲಿ ಘೋಷಿಸಿದ್ದ ಎಲ್ಲ ಗುರಿಗಳನ್ನು ಇನ್ನೂ ಸಾಧಿಸಿಲ್ಲ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಾಶಪಡಿಸುವುದು ಹಾಗೂ ಅಲ್ಲಿನ ಧಾರ್ಮಿಕ ಆಡಳಿತವನ್ನು ಉರುಳಿಸಲು ಪೂರಕ ಪರಿಸ್ಥಿತಿ ನಿರ್ಮಿಸುವುದು ಪ್ರಮುಖ ಗುರಿಗಳಾಗಿದ್ದವು.

ಯುದ್ಧದಿಂದ ಇಂಧನ ಬೆಲೆ ಏರಿಕೆಯಾಗಿದ್ದು, ಟ್ರಂಪ್ ಅವರ ದೇಶೀಯ ಜನಪ್ರಿಯತೆಯ ಮೇಲೂ ಪರಿಣಾಮ ಬೀರಿದೆ. ಈ ವಾರ ಬಿಡುಗಡೆಯಾದ ರಾಯಿಟರ್ಸ್/ಇಪ್ಸೋಸ್ ಸಮೀಕ್ಷೆಯಲ್ಲಿ ಟ್ರಂಪ್ ಅವರ ಅನುಮೋದನೆ ಪ್ರಮಾಣ ಪ್ರಸ್ತುತ ಅವಧಿಯಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ.

ಅಮೆರಿಕ ಮತ್ತು ಇರಾನ್ ಏಪ್ರಿಲ್ ಹಾಗೂ ಜೂನ್‌ನಲ್ಲಿ ಎರಡು ಬಾರಿ ಕದನ ವಿರಾಮದ ವ್ಯವಸ್ಥೆ ಘೋಷಿಸಿದ್ದರೂ, ಹೋರ್ಮುಜ್ ಮೂಲಕ ಸಾಮಾನ್ಯ ನೌಕಾಯಾನ ಪುನರಾರಂಭಿಸುವ ಪ್ರಯತ್ನಗಳು ಇನ್ನೂ ಶಾಶ್ವತ ಪರಿಹಾರಕ್ಕೆ ಕಾರಣವಾಗಿಲ್ಲ.

ಸದ್ಯ ವಾಷಿಂಗ್ಟನ್ ಸೇನಾ ಕ್ರಮಗಳ ಬದಲಿಗೆ ಆರ್ಥಿಕ ಒತ್ತಡಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ, ಇರಾನ್ ನಿರ್ಬಂಧಗಳನ್ನು ಎದುರಿಸುವ ಸಾಮರ್ಥ್ಯ ತಮಗಿದೆ ಎಂದು ಹೇಳುತ್ತಿದ್ದು, ಮತ್ತಷ್ಟು ಉದ್ವಿಗ್ನತೆ ಉಂಟಾದರೆ ಸೇನಾ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನನಗೆ ಸಾಯುವುದೊಂದೇ ದಾರಿ’: ಐಫೋನ್ EMI, 'ಮಹಾ' ದುರಂತ, ಇಡೀ ಕುಟುಂಬ ಬಲಿ

ಮಗನನ್ನು ರಕ್ಷಿಸಲು ಹೋಗಿ ಬೆಟ್ಟದಿಂದ ಕೆಳಗೆ ಬಿದ್ದ ತಂದೆ; ಇಬ್ಬರು ಇಲ್ಲದೆ ನಾನೇಕೆ ಅಂತ ತಾಯಿಯೂ ಆತ್ಮಹತ್ಯೆ, Video

ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!

‘FIR ದಾಖಲಿಸಿದರೂ ಹೆದರಬೇಡಿ, NICE ರಸ್ತೆ ಟೋಲ್ ಕಟ್ಟಬೇಡಿ’: ಕೇಂದ್ರ ಸಚಿವ HD ಕುಮಾರಸ್ವಾಮಿ

ವಿದ್ಯಾರ್ಥಿಗೆ ಪೆಲೆಟ್ ಗನ್ ಪೆಟ್ಟು: ರಾಹುಲ್ ಧರಣಿ ಬೆನ್ನಲ್ಲೇ FIR ದಾಖಲಿಸಿದ ದೆಹಲಿ ಪೊಲೀಸ್