ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ 
ವಿದೇಶ

‘ಒಂದು ಹನಿ ತೈಲವೂ ರಫ್ತಾಗಲ್ಲ’: ಅಮೆರಿಕಾ 'ಎಕನಾಮಿಕ್ ಡಿ-ಡೇ'ಗೆ ಇರಾನ್ ತಿರುಗೇಟು, ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಮಾಡುವುದಾಗಿ ಬೆದರಿಕೆ..!

ಅಮೆರಿಕದ ಆರ್ಥಿಕ ಯುದ್ಧದಲ್ಲಿ ಭಾಗವಹಿಸುವ ಅಥವಾ ಇರಾನ್ ಜನರ ವಿರುದ್ಧದ ಆರ್ಥಿಕ ಯುದ್ಧಕ್ಕೆ ಬೆಂಬಲ ನೀಡುವ ಯಾವುದೇ ದೇಶದ ಕ್ರಮವನ್ನು ಇರಾನ್ ಯುದ್ಧದ ಕೃತ್ಯವೆಂದು ಪರಿಗಣಿಸಲಿದೆ.

ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸುವಂತಹ ಮಹತ್ವದ ಬೆಳವಣಿಗೆಯೊಂದರಲ್ಲಿ, ಅಮೆರಿಕಾದ "ಆರ್ಥಿಕ ಯುದ್ಧ"ದ ವಿರುದ್ಧ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇರಾನ್ ವಿರುದ್ಧ ಅಮೆರಿಕ ಮುಂದುವರಿಸಿರುವ ‘ಆರ್ಥಿಕ ಯುದ್ಧ’ ನಿಲ್ಲದಿದ್ದರೆ ಹೋರ್ಮುಜ್ ಜಲಸಂಧಿ ಸೇರಿದಂತೆ ಪರ್ಷಿಯನ್ ಕೊಲ್ಲಿಯ ಯಾವುದೇ ಮಾರ್ಗದಿಂದಲೂ ತೈಲ ರಫ್ತು ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಅಮೆರಿಕವು ಇರಾನ್ ಮತ್ತು ಅದರೊಂದಿಗೆ ವ್ಯಾಪಾರ ನಡೆಸುವ ದೇಶಗಳನ್ನು ಗುರಿಯಾಗಿಸಿಕೊಂಡು ಹೊಸ ಸುತ್ತಿನ ಆರ್ಥಿಕ ನಿರ್ಬಂಧಗಳನ್ನು ಘೋಷಿಸಲು ಸಿದ್ಧವಾಗಿರುವ ಸಂದರ್ಭದಲ್ಲೇ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಈ ಎಚ್ಚರಿಕೆ ನೀಡಿದ್ದಾರೆ.

ಆರ್ಥಿಕ ಯುದ್ಧ ಮುಂದುವರಿದರೆ ಒಂದು ಹನಿ ತೈಲವೂ ರಫ್ತಾಗುವುದಿಲ್ಲ. ಹಾರ್ಮುಜ್ ಜಲಸಂಧಿಯಿಂದಷ್ಟೇ ಅಲ್ಲ, ಪರ್ಷಿಯನ್ ಕೊಲ್ಲಿಯ ಬೇರೆ ಯಾವುದೇ ಭಾಗದಿಂದಲೂ ಅಲ್ಲ” ಎಂದು ರೆಜಾಯಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಅಮೆರಿಕದ ಆರ್ಥಿಕ ಅಭಿಯಾನದಲ್ಲಿ ಭಾಗವಹಿಸುವ ಅಥವಾ ಅದನ್ನು ಬೆಂಬಲಿಸುವ ಯಾವುದೇ ದೇಶದ ಕ್ರಮವನ್ನು ಇರಾನ್ ‘ಯುದ್ಧದ ಕೃತ್ಯ’ ಎಂದು ಪರಿಗಣಿಸಲಿದೆ ಎಂದೂ ಇದೇ ವೇಳೆ ಅವರು ಎಚ್ಚರಿಸಿದ್ದಾರೆ.

ಇರಾನ್‌ನ ಎಚ್ಚರಿಕೆ ಬೆನ್ನಲ್ಲೇ ಅಮೆರಿಕವು ಟೆಹ್ರಾನ್ ವಿರುದ್ಧ ಮತ್ತಷ್ಟು ಕಠಿಣ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.

ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ಸೋಮವಾರ ಸುದ್ದಿಗೋಷ್ಠಿ ನಡೆಸಲಿದ್ದು, ಇರಾನ್ ವಿರುದ್ಧ ಹೊಸ ಆರ್ಥಿಕ ಕ್ರಮಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

‘ಫೈನಾನ್ಷಿಯಲ್ ಟೈಮ್ಸ್’ನಲ್ಲಿ ಭಾನುವಾರ ಪ್ರಕಟವಾದ ಲೇಖನದಲ್ಲಿ ಬೆಸೆಂಟ್, ಮುಂಬರುವ ಕ್ರಮಗಳನ್ನು “ಎದುರಾಳಿಯ ವಿರುದ್ಧ ಇದುವರೆಗೆ ರೂಪಿಸಲಾದ ಅತಿದೊಡ್ಡ ಆರ್ಥಿಕ ದಾಳಿ” ಎಂದು ಬಣ್ಣಿಸಿದ್ದಾರೆ.

ನಿರ್ದಿಷ್ಟ ಕ್ರಮಗಳ ವಿವರ ನೀಡದಿದ್ದರೂ, ಇರಾನ್‌ನ ಆರ್ಥಿಕತೆ ಮತ್ತು ಹಣಕಾಸು ವ್ಯವಸ್ಥೆಯೊಂದಿಗೆ ಸಂಪರ್ಕ ಮುಂದುವರಿಸುವ ದೇಶಗಳನ್ನು ಗುರಿಯಾಗಿಸುವ ಸುಳಿವನ್ನು ವಾಷಿಂಗ್ಟನ್ ನೀಡಿದೆ.

ಟೆಹ್ರಾನ್‌ನೊಂದಿಗೆ ಆರ್ಥಿಕ ಸಂಬಂಧ ಮುಂದುವರಿಸುವ ‘ಭಯಪಡುವ ದೇಶಗಳು’ ಹಾಗೂ ‘ಮೃದು ನೀತಿ’ ಅನುಸರಿಸುವ ರಾಷ್ಟ್ರಗಳು ಅದರ ಪರಿಣಾಮಗಳನ್ನು ಪರಿಗಣಿಸಬೇಕು ಎಂದು ಬೆಸೆಂಟ್ ಎಚ್ಚರಿಸಿದ್ದಾರೆ.

ನಿರ್ಬಂಧ ಬೆಂಬಲಿಸುವ ದೇಶಗಳಿಗೂ ಇರಾನ್ ಎಚ್ಚರಿಕೆ

ರೆಜಾಯಿ ಅವರ ಎಚ್ಚರಿಕೆ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕದ ಆರ್ಥಿಕ ಅಭಿಯಾನಕ್ಕೆ ಬೆಂಬಲ ನೀಡುವ ಅಥವಾ ಅದರಲ್ಲಿ ಭಾಗವಹಿಸುವ ಇತರ ದೇಶಗಳಿಗೂ ಅವರು ಎಚ್ಚರಿಕೆ ನೀಡಿದ್ದಾರೆ.

“ಅಮೆರಿಕದ ಆರ್ಥಿಕ ಯುದ್ಧದಲ್ಲಿ ಭಾಗವಹಿಸುವ ಅಥವಾ ಇರಾನ್ ಜನರ ವಿರುದ್ಧದ ಆರ್ಥಿಕ ಯುದ್ಧಕ್ಕೆ ಬೆಂಬಲ ನೀಡುವ ಯಾವುದೇ ದೇಶದ ಕ್ರಮವನ್ನು ಇರಾನ್ ಯುದ್ಧದ ಕೃತ್ಯವೆಂದು ಪರಿಗಣಿಸಲಿದೆ” ಎಂದು ಅವರು ಹೇಳಿದ್ದಾರೆ.

ಇರಾನ್ ವಿರುದ್ಧದ ಆರ್ಥಿಕ ಕ್ರಮಗಳಿಗೆ ಚೀನಾ ಸಹಕಾರ ನೀಡಬೇಕು ಎಂದು ಬೆಸೆಂಟ್ ಈ ಹಿಂದೆ ಒತ್ತಾಯಿಸಿದ್ದರು. ಚೀನಾದ ತೈಲ ಆಮದಿನ ಅರ್ಧದಷ್ಟು ಕೊಲ್ಲಿ ಪ್ರದೇಶದಿಂದ ಬರುತ್ತದೆ ಎಂಬುದನ್ನು ಅವರು ಉಲ್ಲೇಖಿಸಿದ್ದರು.

ಆದರೆ, ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರರು ನಿರ್ಬಂಧಗಳು ಮತ್ತು ಒತ್ತಡದಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿ, ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದ್ದಾರೆ.

ಅಮೆರಿಕದ ನಿರ್ಬಂಧ ಬೆದರಿಕೆಗೆ ಇರಾನ್ ನಾಯಕರ ತಿರುಗೇಟು

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಕೂಡ ಅಮೆರಿಕದ ಹೊಸ ನಿರ್ಬಂಧಗಳ ಬೆದರಿಕೆಯನ್ನು ವ್ಯಂಗ್ಯವಾಡಿದ್ದಾರೆ.

‘ಇರಾನ್ ಬೂಮರಾಂಗ್’ ಎಂಬ ಪದ ಬಳಸಿರುವ ಅವರು, ಅಮೆರಿಕ ಎಸೆಯುವ ಆರ್ಥಿಕ ದಾಳಿ ಬೂಮರಾಂಗ್‌ನಂತೆ ತಿರುಗಿ ಅದನ್ನೇ ಹೊಡೆಯಬಹುದು ಎಂದು ವ್ಯಂಗ್ಯಚಿತ್ರದ ಮೂಲಕ ಟೀಕಿಸಿದ್ದಾರೆ.

ಇದೇ ವೇಳೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಕ್ತಾರ ಸರ್ದಾರ್ ಮೊಹೆಬಿ, ಆರ್ಥಿಕ ಒತ್ತಡದ ಮೇಲೆ ಅಮೆರಿಕ ಅವಲಂಬಿಸಿರುವುದು ಸೇನಾ ಕ್ಷೇತ್ರದಲ್ಲಿ ಎದುರಿಸಿದ ‘ಅವಮಾನಕರ ಸೋಲಿನ’ ಪರೋಕ್ಷ ಒಪ್ಪಿಗೆ ಎಂದು ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ಕೂಡ ನಿರ್ಬಂಧಗಳ ಬೆದರಿಕೆಯನ್ನು ಟೀಕಿಸಿದ್ದು, ಯುದ್ಧ ಮತ್ತು ನಿರ್ಬಂಧಗಳು ಇರಾನ್‌ಗೆ ಹೊಸದೇನಲ್ಲ ಎಂದು ಹೇಳಿದ್ದಾರೆ. ಇರಾನ್ ಕಳೆದ 20 ವರ್ಷಗಳಿಂದ ನಿರ್ಬಂಧಗಳನ್ನು ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿಯೇ ಕೇಂದ್ರಬಿಂದು

ಅಂತಾರಾಷ್ಟ್ರೀಯ ನಿರ್ಬಂಧಗಳಿಂದ ಈಗಾಗಲೇ ಒತ್ತಡದಲ್ಲಿದ್ದ ಇರಾನ್ ಆರ್ಥಿಕತೆಯ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಂದ ಮೂಲಸೌಕರ್ಯ ಹಾನಿ, ವ್ಯಾಪಾರ ವ್ಯತ್ಯಯ, ಉತ್ಪಾದನೆ ಕುಸಿತ ಹಾಗೂ ಪುನರ್‌ನಿರ್ಮಾಣ ವೆಚ್ಚದ ಒತ್ತಡ ಮತ್ತಷ್ಟು ಹೆಚ್ಚಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇರಾನ್ ಬಳಿ ಇನ್ನೂ ಸಾಕಷ್ಟು ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯವಿದ್ದು, ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಹಾಗೂ ಹೋರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆ ಹಡಗುಗಳಿಗೆ ಬೆದರಿಕೆ ಒಡ್ಡುವ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ.

ಇದರಿಂದ ಪ್ರಮುಖ ಜಲಮಾರ್ಗದಲ್ಲಿ ಹಡಗು ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಜಾಗತಿಕ ಇಂಧನ ಬೆಲೆಗಳ ಮೇಲೂ ಒತ್ತಡ ಹೆಚ್ಚಾಗಿದೆ.

ಇರಾನ್‌ನ ಪರಮಾಣು ಕಾರ್ಯಕ್ರಮದ ನಿಖರ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕ ಮತ್ತು ಇಸ್ರೇಲ್ ಅದನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಗುರಿ ಹೊಂದಿವೆ.

ಆರು ತಿಂಗಳಿನಿಂದ ಮುಂದುವರಿದಿರುವ ಸಂಘರ್ಷದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹಲವು ವಾರಗಳಿಂದ ನೇರ ಸೇನಾ ದಾಳಿ ನಡೆದಿಲ್ಲ. ಆದರೆ, ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಮಾತುಕತೆಯೂ ನಡೆದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!