ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇರಾನ್ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ.
ಅಮೆರಿಕದ ಹೊಸ ಕ್ರಮಗಳಿಗೆ ತಲೆಬಾಗುವುದಿಲ್ಲ ಎಂದು ಹೇಳಿರುವ ಇರಾನ್, ಅಗತ್ಯವಿದ್ದರೆ ತೀವ್ರ ಪ್ರತೀಕಾರಕ್ಕೆ ಸಿದ್ಧವಿರುವುದಾಗಿ ಎಚ್ಚರಿಸಿದೆ.
ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಗಾಲಿಬಾಫ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಅಮೆರಿಕದ ಹೊಸ ನಿರ್ಬಂಧಗಳಿಂದ ಇರಾನ್‌ಗೆ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಹೇಳಿದ್ದಾರೆ. ಇತರ ರಾಷ್ಟ್ರಗಳೊಂದಿಗಿನ ತನ್ನ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ನಿರ್ಬಂಧಿಸುವ ಸ್ಥಿತಿಯಲ್ಲಿ ಅಮೆರಿಕ ಇಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕಾ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಸೋಮವಾರ ಇರಾನ್‌ನ “ಆರ್ಥಿಕ ಜೀವನಾಡಿಯನ್ನು ಕಡಿತಗೊಳಿಸುವ” ಉದ್ದೇಶದಿಂದ ಹೊಸ ಕ್ರಮಗಳನ್ನು ಘೋಷಿಸಿದ ಬಳಿಕ ಇರಾನ್‌ನಿಂದ ಈ ಪ್ರತಿಕ್ರಿಯೆ ಬಂದಿದೆ.
ಆದರೆ, ಅತ್ಯಂತ ಕಠಿಣ ನಿರ್ಬಂಧಗಳನ್ನು ತಕ್ಷಣ ಜಾರಿಗೊಳಿಸದ ಬೆಸೆಂಟ್, ಇರಾನ್ ಜತೆ ವ್ಯಾಪಾರ ಮುಂದುವರಿಸುವ ದೇಶಗಳು ಡಾಲರ್ ಆಧಾರಿತ ಹಣಕಾಸು ವ್ಯವಸ್ಥೆಯಿಂದ ಹೊರಗುಳಿಯುವ ಅಪಾಯ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.
ಯಾವ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಅಥವಾ ಅದು ಯಾವಾಗ ಜಾರಿಗೆ ಬರಲಿದೆ ಎಂಬುದನ್ನು ಬೆಸೆಂಟ್ ಬಹಿರಂಗಪಡಿಸಿಲ್ಲ. ಹೊಸ ನಿಯಮಗಳನ್ನು ಪಾಲಿಸಲು ಆ ದೇಶಗಳಿಗೆ ಸಮಯ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಅಮೆರಿಕದ ಖಜಾನೆ ಇಲಾಖೆ 60 ವ್ಯಕ್ತಿಗಳು, ಸಂಸ್ಥೆಗಳು ಮತ್ತು ಹಡಗುಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಆದರೆ, ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ಚೀನಾದ ಹಣಕಾಸು ಸಂಸ್ಥೆಗಳು ಈ ಪಟ್ಟಿಯಲ್ಲಿ ಸೇರಿಲ್ಲ.
ಇರಾನ್ ಹೇಳಿದ್ದೇನು?
ಅಮೆರಿಕದ ಘೋಷಣೆಯ ಬಳಿಕ ಗಾಲಿಬಾಫ್, “ಅಮೆರಿಕದ ಬೆದರಿಕೆಗಳಿಗೆ ಯಾರೂ ಬೆಲೆ ನೀಡುವುದಿಲ್ಲ. ಇತರ ದೇಶಗಳೊಂದಿಗಿನ ಸಂಬಂಧಗಳನ್ನು ಮತ್ತಷ್ಟು ನಿರ್ಬಂಧಿಸುವ ಆರ್ಥಿಕ ಸ್ಥಿತಿಯಲ್ಲಿ ಅಮೆರಿಕ ಇಲ್ಲ” ಎಂದು ಹೇಳಿದ್ದಾರೆ.
ಇರಾನ್‌ನ ವ್ಯಾಪಾರ ಪಾಲುದಾರರು ಮಾಧ್ಯಮಗಳ ಮೂಲಕವೂ, ನಮಗೆ ಕಳುಹಿಸಿರುವ ಸಂದೇಶಗಳ ಮೂಲಕವೂ ಅಮೆರಿಕದ ಈ ಹೇಳಿಕೆಗಳಿಗೆ ಯಾವುದೇ ಮಹತ್ವ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ಆರ್ಥಿಕ ಸಚಿವ ಅಲಿ ಮದಾನಿಜಾದೆ ಕೂಡ ಅಮೆರಿಕದ ನಿರ್ಬಂಧಗಳನ್ನು ಎದುರಿಸಲು ದೇಶ “ಸಂಪೂರ್ಣ ಸಿದ್ಧವಾಗಿದೆ” ಎಂದು ಹೇಳಿದ್ದಾರೆ.
ಶತ್ರುಗಳು ನಮ್ಮ ವಿರುದ್ಧ ಆರ್ಥಿಕ ಭಯೋತ್ಪಾದಕ ದಾಳಿ ನಡೆಸಲು ಮುಂದಾಗಿದ್ದಾರೆ. ಆದರೆ, ನಮ್ಮಲ್ಲಿಯೂ ಅಗತ್ಯ ಸಾಧನಗಳಿವೆ ಮತ್ತು ಈ ಆಟವನ್ನು ಹೇಗೆ ಆಡಬೇಕು ಎಂಬುದು ನಮಗೆ ತಿಳಿದಿದೆ. ನಮ್ಮ ರಕ್ಷಣಾ ವ್ಯವಸ್ಥೆ ಈಗ ಕೇವಲ ರಕ್ಷಣಾತ್ಮಕವಾಗಿಲ್ಲ. ಶತ್ರುಗಳು ದಾಳಿಯನ್ನು ಎದುರು ನೋಡಬೇಕು ಎಂದು ತಿಳಿಸಿದ್ದಾರೆ.
ಚೀನಾ ಮತ್ತು ರಷ್ಯಾ ಅಮೆರಿಕದ ಕ್ರಮಗಳನ್ನು ಒಪ್ಪಿಕೊಂಡಿಲ್ಲ ಎಂದಿರುವ ಅವರು, ಇತರ ದೇಶಗಳೂ ಅಮೆರಿಕದ ನಿರ್ಬಂಧಗಳನ್ನು ವಿರೋಧಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಅಮೆರಿಕದ ಆರ್ಥಿಕ ಕ್ರಮಗಳು ಘೋಷಣೆಯಾಗುವ ಮೊದಲೇ ಇರಾನ್ ಸಂಭವನೀಯ ಸೇನಾ ಪ್ರತಿಕ್ರಿಯೆ ಮತ್ತು ಕೊಲ್ಲಿ ಪ್ರದೇಶದಿಂದ ತನ್ನ ತೈಲ ರಫ್ತನ್ನು ಮತ್ತಷ್ಟು ಕಡಿಮೆ ಮಾಡುವ ಎಚ್ಚರಿಕೆ ನೀಡಿತ್ತು.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಕ್ತಾರ ಬ್ರಿಗೇಡಿಯರ್ ಜನರಲ್ ಹೊಸೈನ್ ಮೊಹೆಬ್ಬಿ ಕೂಡ ಇರಾನ್‌ನ ಮೂಲಸೌಕರ್ಯಕ್ಕೆ ಬೆದರಿಕೆ ಎದುರಾದರೆ ಅಮೆರಿಕದ ಪ್ರಮುಖ ಹಿತಾಸಕ್ತಿಗಳು ಮತ್ತು ಇಂಧನ ಸಾಗಣೆ ಮಾರ್ಗಗಳ ಮೇಲೆ ಭಾರಿ ಹೊಡೆತ ನೀಡುವುದಾಗಿ ಎಚ್ಚರಿಸಿದ್ದಾರೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.
ಇಂಧನ ಬೆಲೆ ಏರಿಕೆಗೆ ಕಾರಣವಾಗಿರುವ ಜನಪ್ರಿಯತೆ ಕಳೆದುಕೊಂಡ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಇರಾನ್ ಮೇಲೆ ಮತ್ತಷ್ಟು ಆರ್ಥಿಕ ಒತ್ತಡ ಹೇರುವ ತಂತ್ರವನ್ನು ಅಮೆರಿಕ ಅನುಸರಿಸುತ್ತಿದೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿ ಸುಮಾರು ಆರು ತಿಂಗಳು ಕಳೆದಿವೆ. ಕಳೆದ ಕೆಲವು ವಾರಗಳಲ್ಲಿ ಎರಡೂ ಕಡೆಯಿಂದ ದೊಡ್ಡ ಪ್ರಮಾಣದ ದಾಳಿಗಳು ನಡೆದಿಲ್ಲವಾದರೂ, ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಲಕ್ಷಣಗಳು ಇನ್ನೂ ಸ್ಪಷ್ಟವಾಗಿಲ್ಲ.
ಗಲ್ಫ್ ಪ್ರದೇಶದಲ್ಲಿ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳನ್ನು ತಡೆಯಲು ಅಮೆರಿಕ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಇತ್ತೀಚೆಗೆ ಅದರ ಮಿತ್ರ ರಾಷ್ಟ್ರಗಳ ಮೂಲಕ ಕೆಂಪು ಸಮುದ್ರದಲ್ಲಿಯೂ ಇರಾನ್‌ನ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ.
ಯುದ್ಧದಿಂದ ಇರಾನ್‌ನ ಸಾಂಪ್ರದಾಯಿಕ ಸೇನಾ ಸಾಮರ್ಥ್ಯದ ಬಹುಭಾಗ ಹಾನಿಗೊಳಗಾಗಿದ್ದರೂ, ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳಿಗೆ ಬೆದರಿಕೆ ಒಡ್ಡುವಷ್ಟು ಸಾಮರ್ಥ್ಯವನ್ನು ತೆಹ್ರಾನ್ ಉಳಿಸಿಕೊಂಡಿದೆ.
ಇರಾನ್‌ನ ಪರಮಾಣು ಕಾರ್ಯಕ್ರಮದ ಪ್ರಸ್ತುತ ಸ್ಥಿತಿ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸುವ ಗುರಿಯನ್ನು ಅಮೆರಿಕ ಮತ್ತು ಇಸ್ರೇಲ್ ಹೊಂದಿವೆ.