ವಾಷಿಂಗ್ಟನ್: ಇರಾನ್ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ವರ್ಷದ ಪುತ್ರ ಬ್ಯಾರನ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಅತ್ಯಂತ ಪ್ರಚೋದನಾಕಾರಿ ಪ್ರಚಾರದ ವೀಡಿಯೊವನ್ನು ಪ್ರಸಾರ ಮಾಡಿದೆ.
ಇದರಲ್ಲಿ ಬ್ಯಾರನ್ ಹತ್ಯೆಗೆ $10 ಮಿಲಿಯನ್ (ಸುಮಾರು 85 ಕೋಟಿ ರೂ.) ಬಹುಮಾನ ಘೋಷಿಸಿರುವ ಉಲ್ಲೇಖವಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಿಕಟವರ್ತಿ ಮಾಧ್ಯಮಗಳು ಚಾನೆಲ್ 3 ರಲ್ಲಿ "ಬ್ಯಾರನ್ ಟ್ರಂಪ್‌ನನ್ನು ಎಲ್ಲಿ ಮತ್ತು ಹೇಗೆ ಕೊಲ್ಲಬೇಕು?" ಎಂಬ ಶೀರ್ಷಿಕೆಯ ಮೂರು ನಿಮಿಷಗಳ ವೀಡಿಯೊವನ್ನು ಪ್ರಸಾರ ಮಾಡಿವೆ.
ಇದು ಟ್ರಂಪ್ ಕುಟುಂಬದ ಮೇಲಿನ ವೈಯಕ್ತಿಕ ಬೆದರಿಕೆಯಾಗಿದ್ದರೂ, ಇಂತಹ ಯಾವುದೇ ಅಧಿಕೃತ ಬಹುಮಾನ ಅಥವಾ ಕಾರ್ಯಾಚರಣೆಯ ಯೋಜನೆ ಇರುವುದನ್ನು ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ದೃಢೀಕರಿಸಿಲ್ಲ.
‘ಬ್ಯಾರನ್ ಟ್ರಂಪ್‌ರನ್ನು ಎಲ್ಲಿ ಮತ್ತು ಹೇಗೆ ಕೊಲ್ಲಬೇಕು?’ ಎಂಬ ಶೀರ್ಷಿಕೆಯೊಂದಿಗೆ ಪ್ರಸಾರವಾದ ವಿಡಿಯೊದಲ್ಲಿ ಬ್ಯಾರನ್ ವ್ಯಾಸಂಗ ಮಾಡುತ್ತಿರುವ ನ್ಯೂಯಾರ್ಕ್‌ನ ವಿಶ್ವವಿದ್ಯಾಲಯದ ಸ್ಥಳವನ್ನು ತೋರಿಸಲಾಗಿದೆ ಎನ್ನಲಾಗಿದೆ.
ಅವರ ಭದ್ರತೆಗೆ ನಿಯೋಜಿಸಿರುವ ಸೀಕ್ರೆಟ್ ಸರ್ವಿಸ್ ಸಿಬ್ಬಂದಿಯ ಸ್ಥಾನಗಳು ಮತ್ತು ಬೆಂಗಾವಲು ವಾಹನಗಳ ಕುರಿತ ವಿವರಗಳನ್ನೂ ವಿಡಿಯೊದಲ್ಲಿ ಪ್ರದರ್ಶಿಸಲಾಗಿದೆ ಎಂದು ವರದಿಯಾಗಿದೆ.
ಸೀಕ್ರೆಟ್ ಸರ್ವಿಸ್ ಭದ್ರತೆಯನ್ನು ಮೀರಿ ಅಪರಿಚಿತ ಮಹಿಳೆಯೊಬ್ಬರು ಬ್ಯಾರನ್ ಅವರನ್ನು ರಹಸ್ಯವಾಗಿ ಭೇಟಿಯಾಗಲು ಸಾಧ್ಯವಾಗಿತ್ತು ಎಂದು ಪ್ರಸಾರದಲ್ಲಿ ಹೇಳಲಾಗಿದೆ. ಅಲ್ಲದೆ, ಬ್ಯಾರನ್ ಖಾಸಗಿ ಸಂವಹನಕ್ಕಾಗಿ ಎಕ್ಸ್‌ಬಾಕ್ಸ್ ಸಾಧನ ಬಳಸುತ್ತಾರೆ ಎಂಬ ಆರೋಪವನ್ನೂ ಮಾಡಲಾಗಿದೆ.
ಇರಾನ್ ಸರ್ಕಾರಿ ದೂರದರ್ಶನದ ಇತ್ತೀಚಿನ ಪ್ರಸಾರಕ್ಕೂ ಮುನ್ನ ಕಳೆದ ತಿಂಗಳು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ಗುರಿಯಾಗಿಸಿ ಮತ್ತೊಂದು ವಿಡಿಯೊ ಪ್ರಸಾರವಾಗಿತ್ತು.
ಆ ವಿಡಿಯೊದಲ್ಲಿ ಮೆಲಾನಿಯಾ ಅವರು ಭದ್ರತಾ ವಾಹನಗಳ ಬೆಂಗಾವಲಿನಲ್ಲಿ ಸಂಚರಿಸುತ್ತಿರುವ ಹಾಗೂ ನ್ಯೂಯಾರ್ಕ್‌ನ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿರುವ ದೃಶ್ಯಗಳನ್ನು ತೋರಿಸಲಾಗಿತ್ತು. ಅವರು ಭೇಟಿ ನೀಡುತ್ತಾರೆ ಎನ್ನಲಾದ ಐಷಾರಾಮಿ ವಿನ್ಯಾಸಕರ ಅಂಗಡಿಗಳ ಬಗ್ಗೆಯೂ ವಿವರ ನೀಡಲಾಗಿತ್ತು.
ವಿಡಿಯೊದ ಕೊನೆಯಲ್ಲಿ ಗಮನವನ್ನು ಬ್ಯಾರನ್ ಕಡೆಗೆ ತಿರುಗಿಸಿ, ಅಮೆರಿಕ ಅಧ್ಯಕ್ಷರ ಪುತ್ರನಿಗೆ ನೇರ ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.
ವಿಡಿಯೊದ ಅಂತ್ಯದಲ್ಲಿ “ಇದು ಕೇವಲ ಆರಂಭ. ಬ್ಯಾರನ್ ಟ್ರಂಪ್, ನಮ್ಮನ್ನು ಎದುರು ನೋಡಿ” ಎಂಬ ರೀತಿಯ ಎಚ್ಚರಿಕೆ ನೀಡಲಾಗಿತ್ತು ಎಂದು ವರದಿಯಾಗಿದೆ.
ಬ್ಯಾರನ್ ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು, ಅವರು ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರ ಕಿರಿಯ ಪುತ್ರರಾಗಿದ್ದಾರೆ.
ಬ್ಯಾರನ್ ಮತ್ತು ಮೆಲಾನಿಯಾ ಇಬ್ಬರಿಗೂ 24 ಗಂಟೆಗಳೂ ಅಮೆರಿಕದ ಸೀಕ್ರೆಟ್ ಸರ್ವಿಸ್ ಭದ್ರತೆ ಇದೆ. ನ್ಯೂಯಾರ್ಕ್‌ನ ಟ್ರಂಪ್ ಟವರ್, ಶ್ವೇತಭವನ, ನ್ಯೂಜೆರ್ಸಿಯ ಬೆಡ್‌ಮಿನಿಸ್ಟರ್ ಗಾಲ್ಫ್ ಕ್ಲಬ್ ಹಾಗೂ ಫ್ಲೋರಿಡಾದ ಮಾರಾ-ಲಾಗೊ ಎಸ್ಟೇಟ್ ಸೇರಿದಂತೆ ಟ್ರಂಪ್ ಅವರ ಪ್ರಮುಖ ಆಸ್ತಿಗಳಿಗೂ ಕಠಿಣ ಭದ್ರತೆ ಒದಗಿಸಲಾಗಿದೆ ಎಂದು ವರದಿಯಾಗಿದೆ.