ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾಗಿ ಆರು ತಿಂಗಳು ಕಳೆದಿರುವ ಈ ಸಂದರ್ಭದಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ಭಾನುವಾರ ಲಿಖಿತ ಸಂದೇಶವೊಂದರ ಮೂಲಕ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಒಗ್ಗೂಡುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಫೆಬ್ರುವರಿ 28 ರಂದು ಯುದ್ಧದ ಆರಂಭದಲ್ಲಿ ತಮ್ಮ ತಂದೆ ಅಲಿ ಖಮೇನಿ ಹತ್ಯೆಗೀಡಾದ ಸ್ವಲ್ಪ ಸಮಯದ ನಂತರ ಅಧಿಕಾರ ವಹಿಸಿಕೊಂಡ ಮೊಜ್ತಾಬಾ ಖಮೇನಿ, ನೇಮಕಗೊಂಡಾಗಿನಿಂದ ಇಲ್ಲಿಯವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ; ಅಲ್ಲದೆ, ಅಧಿಕಾರಿಗಳು ಅವರ ಯಾವುದೇ ವಿಡಿಯೋ ಅಥವಾ ಆಡಿಯೋವನ್ನು ಸಹ ಬಿಡುಗಡೆ ಮಾಡಿಲ್ಲ. ಹೀಗಾಗಿ, ಅವರ ಇರುವಿಕೆ ಬಗ್ಗೆಯೇ ವ್ಯಾಪಕ ಅನುಮಾನಗಳು ವ್ಯಕ್ತವಾಗಿರುವ ಬೆನ್ನಲ್ಲೇ ಆ ಪ್ರದೇಶದ ಮುಸ್ಲಿಂ ರಾಷ್ಟ್ರಗಳಿಗೆ ಅವರು ಪತ್ರ ಬರೆದಿದ್ದಾರೆ.
'ಇಸ್ಲಾಮಿಕ್ ರಾಷ್ಟ್ರಗಳ ಸಮಸ್ಯೆಗಳಿಗೆ ಪರಿಹಾರವೆಂದರೆ ಒಗ್ಗಟ್ಟು, ಸ್ನೇಹ ಮತ್ತು ಒಳಿತಿನ ಹಾದಿಯಲ್ಲಿನ ಸಹಕಾರ' ಎಂದು ಶಿಯಾ ಮುಸ್ಲಿಮರು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಅವರು ಭಾನುವಾರ ಹೇಳಿದರು.
'ಮುಸ್ಲಿಮರ ನಡುವೆ ಒಡಕನ್ನು ಉಂಟುಮಾಡುವ ಮತ್ತು ಮುಸ್ಲಿಂ ಸಮುದಾಯದಲ್ಲಿ ಸಂಘರ್ಷ ಸೃಷ್ಟಿಸುವಂತಹ ಕೆಲಸವನ್ನು—ಅದು ತಿಳಿದೋ ಅಥವಾ ತಿಳಿಯದೆಯೋ, ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿ ಮಾಡಿದರೆ, ಅವರು ಇಸ್ಲಾಂನ ಶತ್ರುಗಳ ಉದ್ದೇಶವನ್ನೇ ಈಡೇರಿಸಿದಂತಾಗುತ್ತದೆ' ಎಂದು ಹೇಳಿರುವುದಾಗಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಅಮೆರಿಕ ಮತ್ತು ಇಸ್ರೇಲ್‌ಗಳನ್ನು ಉಲ್ಲೇಖಿಸುತ್ತಾ, ಪ್ರಾದೇಶಿಕ ದೇಶಗಳ ಆಡಳಿತಗಾರರು 'ತಮ್ಮ ನಿಜವಾದ ಶತ್ರುವನ್ನು ಗುರುತಿಸಿ, ಅವರ ಯೋಜನೆಯನ್ನು ಅರ್ಥಮಾಡಿಕೊಂಡು, ಅವರನ್ನು ಎದುರಿಸಬೇಕು' ಎಂದು ಸರ್ವೋಚ್ಚ ನಾಯಕ ಕರೆ ನೀಡಿದರು.
ಯುದ್ಧದ ಸಮಯದಲ್ಲಿ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್, ಕುವೈತ್, ಕತಾರ್ ಮತ್ತು ಬಹ್ರೇನ್ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕದ ಸೇನಾ ನೆಲೆಗಳನ್ನು ಇರಾನ್ ಗುರಿಯಾಗಿಸಿಕೊಂಡಿತು.
ಪ್ರಮುಖ ಸರ್ಕಾರಿ ನೀತಿಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರುವ ಖಮೇನಿ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಒಗ್ಗೂಡುವಂತೆ ಇರಾನ್‌ನ ಅಧಿಕಾರಿಗಳು ಹಾಗೂ ನಾಗರಿಕರಿಗೆ ಕರೆ ನೀಡಿದರು.
'ಮತ್ತೊಮ್ಮೆ ಹೇಳುವುದಾದರೆ, ಇರಾನಿನ ಜನರಿಗೆ ಈ ಸೇವಕನ ಸಲಹೆಯೇನೆಂದರೆ, ಅವರು ತಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಉಂಟಾಗಲು ಅವಕಾಶ ನೀಡಬಾರದು' ಎಂದು ಹೇಳಿದರು; ಶುಕ್ರವಾರದ ಮತ್ತೊಂದು ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನೇ ಅವರು ಇಲ್ಲಿಯೂ ಪ್ರತಿಧ್ವನಿಸಿದರು.
'ಸಾಮಾಜಿಕ ಸಾಮರಸ್ಯಕ್ಕೆ ಹಾನಿಕಾರಕವಾದ ಯಾವುದೇ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನಾನು ದೃಢವಾಗಿ ಘೋಷಿಸುತ್ತೇನೆ' ಎಂದು ಅವರು ಶುಕ್ರವಾರದ ಸಂದೇಶದಲ್ಲಿ ಹೇಳಿದ್ದರು.
ಅಮೆರಿಕದ ನೌಕಾ ದಿಗ್ಬಂಧನ ಮತ್ತು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದ ದೀರ್ಘಕಾಲದ ಕಠಿಣ ನಿರ್ಬಂಧಗಳ ನಂತರ, ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಆರ್ಥಿಕ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಇರಾನ್‌ನ ಆರ್ಥಿಕತೆಯನ್ನು ಹಂತ-ಹಂತವಾಗಿ ಡಾಲರ್-ಮುಕ್ತಗೊಳಿಸಲು (de-dollarisation) ಅವರು ಶುಕ್ರವಾರ ಕರೆ ನೀಡಿದರು.