ನೇಪಾಳ ಪ್ರವಾಹ 
ವಿದೇಶ

‘ಮತ್ತೆ ಕಟ್ಟುತ್ತೇವೆ’! ನೇಪಾಳ ಪ್ರವಾಹದ ಬಳಿಕ ಅವಶೇಷ ನಡುವೆ ಬದುಕು ಕಟ್ಟಿಕೊಳ್ಳಲು ಪರದಾಟ, ಆಹಾರ, ನೀರು, ಔಷಧಿಗಾಗಿ ಸಂತ್ರಸ್ಥರ ಸಂಕಷ್ಟ

ಕೆಸರು ಹಾಗೂ ಅವಶೇಷಗಳ ನಡುವೆ ತಮ್ಮ ವಸ್ತುಗಳನ್ನು ಹುಡುಕುತ್ತಾ, ಕಳೆದುಹೋದ ಸಂಬಂಧಿಕರಿಗಾಗಿ ಕುಟುಂಬಗಳು ಹುಡುಕಾಟ ಮುಂದುವರಿಸಿವೆ.

ಕಠ್ಮಂಡು: ನೇಪಾಳದಲ್ಲಿ ಆಗಸ್ಟ್‌ 26ರಂದು ಸಂಭವಿಸಿದ ಭೀಕರ ಪ್ರವಾಹದ ನೀರು ನಿಧಾನವಾಗಿ ಇಳಿಯುತ್ತಿದ್ದಂತೆ, ಸಂತ್ರಸ್ತರು ತಮ್ಮ ಧ್ವಂಸಗೊಂಡ ಮನೆಗಳು ಮತ್ತು ಅಂಗಡಿಗಳತ್ತ ಮರಳುತ್ತಿದ್ದಾರೆ.

ಕೆಸರು ಹಾಗೂ ಅವಶೇಷಗಳ ನಡುವೆ ತಮ್ಮ ವಸ್ತುಗಳನ್ನು ಹುಡುಕುತ್ತಾ, ಕಳೆದುಹೋದ ಸಂಬಂಧಿಕರಿಗಾಗಿ ಕುಟುಂಬಗಳು ಹುಡುಕಾಟ ಮುಂದುವರಿಸಿವೆ.

ಧಾದಿಂಗ್ ಜಿಲ್ಲೆಯ ಗಲ್ಛಿ ಪ್ರದೇಶದಲ್ಲಿ, 11ನೇ ತರಗತಿ ವಿದ್ಯಾರ್ಥಿ ನಯನ್‌ ತಿವಾರಿ ಮತ್ತು ಅವರ ಸೋದರ ಸಂಬಂಧಿ ನಿವಿ ಪ್ರವಾಹದಿಂದ ಹಾನಿಗೊಳಗಾದ ತಮ್ಮ ಮನೆಯಲ್ಲಿನ ಕೆಸರು ಮತ್ತು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ನೆರೆಹೊರೆಯಲ್ಲಿದ್ದ 15ಕ್ಕೂ ಹೆಚ್ಚು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

“ಇಲ್ಲಿ ಎಲ್ಲವೂ ಇತ್ತು. ಆದರೆ ಈಗ ಏನೂ ಉಳಿದಿಲ್ಲ,” ಎಂದು ನಯನ್‌ ನೋವಿನಿಂದ ಹೇಳಿದ್ದಾರೆ. ಆದರೆ ಎಲ್ಲವನ್ನೂ ಕಳೆದುಕೊಂಡರೂ ಕುಟುಂಬ ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪದಲ್ಲಿದೆ.

ನೇಪಾಳ-ಟಿಬೆಟ್‌ ಗಡಿ ಸಮೀಪ ಸಂಭವಿಸಿದ ಈ ಹಠಾತ್‌ ಪ್ರವಾಹದಲ್ಲಿ 750ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ನುವಾಕೋಟ್‌ನಲ್ಲಿ ಭಾರೀ ವಿನಾಶ

ನುವಾಕೋಟ್‌ನಲ್ಲಿ ಸ್ಥಳೀಯ ನಿವಾಸಿಗಳ ಪ್ರಕಾರ, ತ್ರಿಶೂಲಿ ನದಿಯ ನೀರು ಏಕಾಏಕಿ ಉಕ್ಕಿ ಹರಿದ ಪರಿಣಾಮ ನೂರಾರು ಮನೆಗಳು, ಅಂಗಡಿಗಳು, ವಾಹನಗಳು ಮತ್ತು ಶಾಲಾ ಕಟ್ಟಡಗಳು ಕೊಚ್ಚಿಹೋಗಿವೆ.

ಮನೆ ಕಳೆದುಕೊಂಡ ಕುಟುಂಬಗಳು ಇದೀಗ ಆಹಾರ ಮತ್ತು ಆಶ್ರಯಕ್ಕಾಗಿ ಪರಿಹಾರ ಶಿಬಿರಗಳನ್ನು ಅವಲಂಬಿಸಿವೆ. ಮತ್ತೊಂದೆಡೆ, ನಾಪತ್ತೆಯಾಗಿರುವ ತಮ್ಮವರಿಗಾಗಿ ಸಂಬಂಧಿಕರು ಆಸ್ಪತ್ರೆಗಳಿಗೆ ತೆರಳಿ ಹುಡುಕಾಟ ನಡೆಸುತ್ತಿದ್ದಾರೆ. ಕೆಲವರು ನದಿಯ ಕೆಳಭಾಗದಲ್ಲೂ ತಮ್ಮ ಪ್ರೀತಿಪಾತ್ರರಿಗಾಗಿ ಶೋಧ ನಡೆಸುತ್ತಿದ್ದಾರೆ.

ಪರಿಹಾರ ಶಿಬಿರಗಳಲ್ಲಿ ಆಹಾರ, ನೀರು, ಔಷಧಿಗಾಗಿ ಪರದಾಟ

ಆಗಸ್ಟ್‌ 26ರ ಪ್ರವಾಹದಿಂದ ಸ್ಥಳಾಂತರಗೊಂಡ ಸಾವಿರಾರು ಜನರ ಸಂಕಷ್ಟ ಇನ್ನೂ ಮುಗಿದಿಲ್ಲ. ರಾಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಸುಮಾರು 3,500 ಮಂದಿ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಈ ಶಿಬಿರಗಳಲ್ಲಿ ಆಹಾರ, ಶುದ್ಧ ಕುಡಿಯುವ ನೀರು, ಔಷಧ ಮತ್ತು ನೈರ್ಮಲ್ಯ ವ್ಯವಸ್ಥೆಯ ಕೊರತೆ ಎದುರಾಗಿದೆ.

ಪ್ರವಾಹದಿಂದ ಮನೆ ಕಳೆದುಕೊಂಡ ಗರ್ಭಿಣಿಯರು, ಇತ್ತೀಚೆಗೆ ಹೆರಿಗೆಯಾಗಿರುವ ಮಹಿಳೆಯರು ಹಾಗೂ ನಿರಂತರ ವೈದ್ಯಕೀಯ ಆರೈಕೆಯ ಅಗತ್ಯವಿರುವವರೂ ಶಿಬಿರಗಳಲ್ಲಿ ಆಶ್ರಯ ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಕಡೆ ಸೇರಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವೂ ಎದುರಾಗಿದೆ.

ರಸ್ತೆ, ನೀರಿನ ಪೈಪ್‌ಲೈನ್‌ಗಳಿಗೂ ಹಾನಿ

ಪ್ರವಾಹದ ರಭಸಕ್ಕೆ ರಸ್ತೆಗಳು, ನೀರಿನ ಪೈಪ್‌ಲೈನ್‌ಗಳು ಸೇರಿದಂತೆ ಹಲವು ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಇದರಿಂದ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತ ಪ್ರದೇಶಗಳಿಗೆ ತಲುಪಿಸುವ ಕಾರ್ಯಕ್ಕೂ ಅಡ್ಡಿಯಾಗಿದೆ.

ಕಠ್ಮಂಡು ಸಮೀಪದ ಒಂದು ಮಠದಲ್ಲಿ ಸುಮಾರು 500 ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಲಾಗಿದೆ. ಅವರಲ್ಲಿ ಬಹುತೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಿಗೆ ತೆರಳಬೇಕು ಎಂಬುದೇ ತಿಳಿಯದ ಸ್ಥಿತಿಯಲ್ಲಿದ್ದಾರೆ.

ಒಂದೆಡೆ ನಾಪತ್ತೆಯಾಗಿರುವ ಕುಟುಂಬ ಸದಸ್ಯರಿಗಾಗಿ ಹುಡುಕಾಟ, ಮತ್ತೊಂದೆಡೆ ಆಹಾರ, ನೀರು ಮತ್ತು ಔಷಧಿಗಾಗಿ ಹೋರಾಟ—ನೇಪಾಳದ ಪ್ರವಾಹ ಸಂತ್ರಸ್ತರ ಸಂಕಷ್ಟ ಇನ್ನೂ ಮುಂದುವರಿದಿದೆ. ಆದರೂ ಎಲ್ಲವನ್ನೂ ಕಳೆದುಕೊಂಡ ಕುಟುಂಬಗಳ ನಡುವೆ “ಮತ್ತೆ ಕಟ್ಟುತ್ತೇವೆ, ಮತ್ತೆ ಬದುಕು ಕಟ್ಟಿಕೊಳ್ಳುತ್ತೇವೆ” ಎಂಬ ಭರವಸೆ ನಿಧಾನವಾಗಿ ಮೂಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 768ಕ್ಕೇರಿಕೆ, 2,500ಕ್ಕೂ ಹೆಚ್ಚು ಮಂದಿ ನಾಪತ್ತೆ, ಸುರಂಗದೊಳಗೆ 100ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ!

ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್: 7ನೇ ಮಹಡಿಯಿಂದ ಜಿಗಿದ ಟೆಕ್ಕಿಗಳು; ಯುವತಿ ಸಾವು, ಯುವಕನ ಸ್ಥಿತಿ ಗಂಭೀರ

ಪ್ರವಾಹದ ಬಳಿಕ ನೇಪಾಳದಲ್ಲಿ ಭಾರೀ ಮಳೆ; ಉತ್ತರ ಪ್ರದೇಶದಲ್ಲಿ ನೆರೆ ಭೀತಿ, ನಾರಾಯಣಿ-ಗಂಡಕ್ ನೀರಿನ ಮಟ್ಟ ಏರಿಕೆ!

13 ವರ್ಷಗಳ ನಿರಂತರ ಸೇವೆ: ದಿಢೀರ್ ಅಂತ ಕೆಲಸಕ್ಕೆ ರಾಜಿನಾಮೆ ನೀಡಿದ ಉತ್ತರಪ್ರದೇಶ IAS ಅಧಿಕಾರಿ!

Nepal Floods: ‘ಪ್ರವಾಹ ಬರುತ್ತಿದೆ, ಓಡಿ’..; ಶಿಕ್ಷಕನ ಸಮಯಪ್ರಜ್ಞೆಯಿಂದ 1,643 ಮಕ್ಕಳ ಜೀವರಕ್ಷಣೆ