Nepal Floods: ‘ಪ್ರವಾಹ ಬರುತ್ತಿದೆ, ಓಡಿ’..; ಶಿಕ್ಷಕನ ಸಮಯಪ್ರಜ್ಞೆಯಿಂದ 1,643 ಮಕ್ಕಳ ಜೀವರಕ್ಷಣೆ

ಭೀಕರ ಪ್ರವಾಹದ ಎಚ್ಚರಿಕೆ ಸಿಕ್ಕ ತಕ್ಷಣ ಶಾಲೆಯನ್ನು ಖಾಲಿ ಮಾಡಿಸುವ ಮೂಲಕ ನೇಪಾಳದ ನುವಾಕೋಟ್ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರು 1,643 ಮಕ್ಕಳ ಜೀವ ಉಳಿಸಿರುವ ಘಟನೆ ಇದೀಗ ಎಲ್ಲರ ಗಮನ ಸೆಳೆದಿದೆ.
Teacher Received Flood Warning
ನೇಪಾಳ ಪ್ರವಾಹದಲ್ಲಿ ಮಕ್ಕಳ ರಕ್ಷಿಸಿದ ಶಿಕ್ಷಕ
Updated on

ಕಠ್ಮಂಡು: ಇತಿಹಾಸದ ಕರಾಳ ಪ್ರವಾಹ ಕಂಡ ನೇಪಾಳದಲ್ಲಿ ದಿನಕಳೆದಂತೆ ದಿನಕ್ಕೊಂದು ರೋಚಕ ಕಥೆಗಳು ಬಯಲಾಗುತ್ತಿದ್ದು, ಇದೀಗ ಶಾಲಾ ಶಿಕ್ಷಕನ ಸಮಯ ಪ್ರಜ್ಞೆ 1,600ಕ್ಕೂ ಅಧಿಕ ಮಕ್ಕಳ ಜೀವ ರಕ್ಷಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಹೌದು.. ಭೀಕರ ಪ್ರವಾಹದ ಎಚ್ಚರಿಕೆ ಸಿಕ್ಕ ತಕ್ಷಣ ಶಾಲೆಯನ್ನು ಖಾಲಿ ಮಾಡಿಸುವ ಮೂಲಕ ನೇಪಾಳದ ನುವಾಕೋಟ್ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರು 1,643 ಮಕ್ಕಳ ಜೀವ ಉಳಿಸಿರುವ ಘಟನೆ ಇದೀಗ ಎಲ್ಲರ ಗಮನ ಸೆಳೆದಿದೆ.

47 ವರ್ಷದ ರಾಜೇಂದ್ರ ದವಾಡಿ ಅವರು ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಹಾಗೂ ಇಂಗ್ಲಿಷ್ ಶಿಕ್ಷಕರಾಗಿದ್ದಾರೆ. ಬುಧವಾರ ಬೆಳಗ್ಗೆ ಸುಮಾರು 9.20ರ ವೇಳೆಗೆ ಸ್ನೇಹಿತರೊಬ್ಬರು ಅವರಿಗೆ ಕರೆ ಮಾಡಿ, ಸಮೀಪದ ಗ್ರಾಮವೊಂದು ನದಿಯ ಪ್ರವಾಹಕ್ಕೆ ಕೊಚ್ಚಿಹೋಗಿದೆ ಎಂದು ಎಚ್ಚರಿಕೆ ನೀಡಿದ್ದರು. ತಕ್ಷಣ ಅಲ್ಲಿಂದ ಓಡಿ ಹೋಗುವಂತೆ ಸ್ನೇಹಿತ ಸೂಚಿಸಿದ್ದರು.

ಆದರೆ ಆರಂಭದಲ್ಲಿ ದವಾಡಿ ಅವರಿಗೆ ಶಾಲೆ ಸುರಕ್ಷಿತವಾಗಿಯೇ ಇದೆ ಎಂದು ಅನಿಸಿತ್ತು. ಮೂರು ಅಂತಸ್ತಿನ ಕಾಂಕ್ರೀಟ್ ಕಟ್ಟಡವು ನದಿಗಿಂತ ಸುಮಾರು 60 ಮೀಟರ್ ಎತ್ತರದಲ್ಲಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಬದಲಾಗಿದೆ.

ಶಾಲೆಯೊಂದರ ಪೋಷಕರು ಆತಂಕದಿಂದ ಓಡಿಬಂದು ನೀರಿನ ಮಟ್ಟ ವೇಗವಾಗಿ ಏರುತ್ತಿದೆ ಎಂದು ದವಾಡಿಗೆ ಮಾಹಿತಿ ನೀಡಿದರು. ಕೂಡಲೇ ಎಚ್ಚೆತ್ತ ಅವರು ಶಾಲೆಯ ಗಂಟೆ ಬಾರಿಸಿ, ತರಗತಿ ಕೊಠಡಿಗಳಲ್ಲಿದ್ದ ಮಕ್ಕಳನ್ನು ತಕ್ಷಣ ಹೊರಗೆ ಕರೆತರುವಂತೆ ಶಿಕ್ಷಕರಿಗೆ ಸೂಚಿಸಿದರು.

ಅಷ್ಟೇ ಅಲ್ಲದೆ, ಶಾಲಾ ಬಸ್‌ ಚಾಲಕರಿಗೂ ಕರೆ ಮಾಡಿ ಬಸ್‌ಗಳನ್ನು ವಾಪಸ್‌ ಕಳುಹಿಸುವಂತೆ ಸೂಚಿಸಿದರು. ಆದರೆ ಸಂಪರ್ಕಿಸಲು ಸಾಧ್ಯವಾಗದ ಒಂದು ಬಸ್‌ ಆಗಲೇ ಸೇತುವೆ ದಾಟುತ್ತಿತ್ತು.

Teacher Received Flood Warning
ಪ್ರವಾಹದ ಬಳಿಕ ನೇಪಾಳದಲ್ಲಿ ಭಾರೀ ಮಳೆ; ಉತ್ತರ ಪ್ರದೇಶದಲ್ಲಿ ನೆರೆ ಭೀತಿ, ನಾರಾಯಣಿ-ಗಂಡಕ್ ನೀರಿನ ಮಟ್ಟ ಏರಿಕೆ!

ಸಮಯಪ್ರಜ್ಞೆಯಿಂದ 1,643 ಮಕ್ಕಳು ಪಾರು

ಶಾಲೆಯಲ್ಲಿದ್ದ ಮಕ್ಕಳು ತಕ್ಷಣವೇ ಎತ್ತರದ ಪ್ರದೇಶದತ್ತ ಸಾಗಲು ಆರಂಭಿಸಿದರು. ಒಬ್ಬ ಬಾಲಕಿಗೆ ಆತಂಕದಿಂದ ಪ್ಯಾನಿಕ್ ಅಟ್ಯಾಕ್‌ ಉಂಟಾದ ಹಿನ್ನೆಲೆಯಲ್ಲಿ ಆಕೆಯನ್ನು ಬೈಕ್‌ನಲ್ಲಿ ಗುಡ್ಡದ ಮೇಲಿನ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಉಳಿದ ಮಕ್ಕಳು ಕಾಲ್ನಡಿಗೆಯಲ್ಲಿ ಎತ್ತರದ ಪ್ರದೇಶದತ್ತ ಓಡಿದರು. ದವಾಡಿ ಕೂಡ ಮಕ್ಕಳನ್ನು ಹಿಂಬಾಲಿಸಿದರು. ಕೊನೆಗೆ ಮಕ್ಕಳು ಬೋಧಿ ಮರದ ಕೆಳಗೆ ಆಶ್ರಯ ಪಡೆದರು.

ಅದರ ಬೆನ್ನಲ್ಲೇ ಭೀಕರ ಪ್ರವಾಹ ಪ್ರದೇಶವನ್ನು ಅಪ್ಪಳಿಸಿತು. ಕೆಸರು, ಬಂಡೆಗಳು, ಹಿಮದ ತುಂಡುಗಳು ಹಾಗೂ ಇತರ ಅವಶೇಷಗಳನ್ನು ಹೊತ್ತು ಬಂದ ಪ್ರವಾಹ ಕಟ್ಟಡಗಳು, ಸೇತುವೆಗಳು ಸೇರಿದಂತೆ ಹಲವು ರಚನೆಗಳನ್ನು ಧ್ವಂಸ ಮಾಡಿತು. ಶಾಲೆಯ ಕಟ್ಟಡವೂ ಪ್ರವಾಹಕ್ಕೆ ಕೊಚ್ಚಿಹೋಯಿತು. ಆದರೆ ಅಷ್ಟರೊಳಗೆ 1,643 ಮಕ್ಕಳು ಸುರಕ್ಷಿತ ಸ್ಥಳ ತಲುಪಿದ್ದರು. ಹೀಗಾಗಿ ಎಲ್ಲ ಮಕ್ಕಳು ಬದುಕುಳಿದರು. ಬಹುತೇಕ ಶಾಲಾ ಸಿಬ್ಬಂದಿಯೂ ಪಾರಾಗಿದ್ದಾರೆ. ಆದರೆ ಇಬ್ಬರು ಸಿಬ್ಬಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ.

ಇಬ್ಬರು ಸಿಬ್ಬಂದಿ ಸಾವು

ಸಾಮಾಜಿಕ ಇತಿಹಾಸ ಶಿಕ್ಷಕ 32 ವರ್ಷದ ಸಂತೋಷ್ ಪರಿಯಾರ್ ಅವರು ನದಿಯ ಸಮೀಪದಲ್ಲಿದ್ದ ಬಾಡಿಗೆ ಕೊಠಡಿಗೆ ಬೆಳಗಿನ ಉಪಾಹಾರ ತಯಾರಿಸಲು ಹಿಂದಿರುಗಿದಾಗ ಪ್ರವಾಹದಲ್ಲಿ ಕೊಚ್ಚಿಹೋದರು. ಶಾಲೆಯ ಸ್ವಚ್ಛತಾ ಸಿಬ್ಬಂದಿ ಸುಲ್ತಾನ್ ಲಾಮಾ ಅವರು ಶಾಲೆಯ ಬಾಗಿಲು ಮುಚ್ಚಲು ಮತ್ತೆ ಕಟ್ಟಡದತ್ತ ತೆರಳಿದ್ದ ವೇಳೆ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಭೀಕರ ಪ್ರವಾಹ ಶಾಲೆಯನ್ನೇ ನುಂಗಿಹಾಕಿದರೂ, ಪ್ರಾಂಶುಪಾಲ ರಾಜೇಂದ್ರ ದವಾಡಿ ಅವರ ಒಂದೇ ಒಂದು ಸಮಯೋಚಿತ ನಿರ್ಧಾರದಿಂದ 1,643 ಮಕ್ಕಳು ಜೀವಂತವಾಗಿ ಪಾರಾಗಿರುವುದು ಈ ದುರಂತದ ನಡುವೆಯೇ ಮೂಡಿಬಂದ ಅಪರೂಪದ ಮಾನವೀಯ ಕಥೆಯಾಗಿದೆ.

ಹಿಮ-ಬಂಡೆ ಕುಸಿತದಿಂದ ಭೀಕರ ಪ್ರವಾಹ

ನೇಪಾಳ-ಟಿಬೆಟ್ ಗಡಿಯ ಸಮೀಪದ ಲಾಂಗ್‌ಟಾಂಗ್ ಲಿರುಂಗ್ ಶಿಖರದಿಂದ ಭಾರಿ ಪ್ರಮಾಣದ ಹಿಮ ಮತ್ತು ಬಂಡೆಗಳು ಕುಸಿದು ಬಿದ್ದ ಪರಿಣಾಮ ಈ ಹಠಾತ್ ಪ್ರವಾಹ ಉಂಟಾಗಿದೆ ಎಂದು ವರದಿಯಾಗಿದೆ. ಸುಮಾರು 1,200 ಮೀಟರ್ ಎತ್ತರದಿಂದ ಹಿಮ-ಬಂಡೆಗಳ ಬೃಹತ್ ರಾಶಿ ಲ್ಹೆಂಡೆ ಖೋಲಾ ನದಿಯ ಮೇಲ್ಭಾಗಕ್ಕೆ ಬಿದ್ದಿದೆ. ಇದರಿಂದ ಏಕಾಏಕಿ ಭಾರಿ ಪ್ರಮಾಣದ ನೀರು, ಕೆಸರು ಮತ್ತು ಅವಶೇಷಗಳು ಕೆಳಭಾಗದತ್ತ ಹರಿದು ಬಂದಿವೆ.

ಈ ದುರಂತದಲ್ಲಿ ನೇಪಾಳ ಮತ್ತು ಟಿಬೆಟ್‌ನಲ್ಲಿ ನೂರಾರು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಪ್ರಸ್ತುತ ಲಭ್ಯ ಮಾಹಿತಿಯ ಪ್ರಕಾರ, ನೇಪಾಳದಲ್ಲಿ 768 ಮಂದಿ ಮೃತಪಟ್ಟಿದ್ದು, 2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಟಿಬೆಟ್‌ನಲ್ಲಿ 16 ಮಂದಿ ಮೃತಪಟ್ಟಿದ್ದು, 546 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ತಿಳಿಸಿದೆ.

ಜಲವಿದ್ಯುತ್ ಯೋಜನೆಗಳಿಗೂ ಹೊಡೆತ

ಪ್ರವಾಹದಿಂದ ಹಲವು ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿಯಾಗಿದೆ. 100ಕ್ಕೂ ಹೆಚ್ಚು ಕಾರ್ಮಿಕರು ಸುರಂಗಗಳೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ರಕ್ಷಿಸಲು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಒಂದು ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ತಲುಪಲು ನೇಪಾಳ ಸೇನೆ ಪೈಪ್‌ ಮೂಲಕ ಸುರಂಗದೊಳಗೆ ಗಾಳಿ ಪೂರೈಸುವ ಪ್ರಯತ್ನ ನಡೆಸಿದೆ. ನೇಪಾಳದ ರಕ್ಷಣಾ ಕಾರ್ಯಾಚರಣೆಗೆ ಭಾರತವೂ ನೆರವಿನ ಹಸ್ತ ಚಾಚಿದ್ದು, 11 ಸದಸ್ಯರ ರಕ್ಷಣಾ ತಂಡವನ್ನು ಕಳುಹಿಸಿದೆ. ಚೀನಾ ಕೂಡ 9 ಸದಸ್ಯರ ಸುರಂಗ ರಕ್ಷಣಾ ತಂಡವನ್ನು ನೇಪಾಳಕ್ಕೆ ಕಳುಹಿಸಿದೆ.

Teacher Received Flood Warning
ನೇಪಾಳ ದುರಂತಕ್ಕೆ 5 ತಿಂಗಳ ಹಿಂದೆಯೇ ಎಚ್ಚರಿಕೆ; ಹಿಮನದಿಗಳ ಕರಗುವಿಕೆ ಕುರಿತು ಬೆಚ್ಚಿಬೀಳಿಸುವ ವರದಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com