ಟೋಕಿಯೋ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿರುವ ಕೋತಿ ಮರಿ ಪಂಚ್ ಗೆ ಕೊನೆಗೂ ತಾಯಿ ಪ್ರೀತಿ ದೊರೆತಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಜಪಾನ್ ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯದಲ್ಲಿ ಮಕಾಕ್ ಗಳ ವಿಭಾಗವಿದ್ದು, ಇಲ್ಲೇ ಕಳೆದ ವರ್ಷ ಅಂದರೆ ಜುಲೈ 26, 2025 ರಂದು ಜನಿಸಿದ ಪಂಚ್ (ಮರಿ ಕೋತಿ), ಹುಟ್ಟಿದ ಸ್ವಲ್ಪ ಸಮಯದ ನಂತರ ತನ್ನ ತಾಯಿಯಿಂದ ಬೇರ್ಪಟ್ಟಿತ್ತು. ಪಂಚ್-ಕುನ್ ಎಂದು ಕರೆಯಲ್ಪಡುವ ಈ ಏಳು ತಿಂಗಳ ಕೋತಿ ಮರಿಯೇ ಇದೀಗ ಸಾಮಾಜಿಕ ಮಾಧ್ಯಮ ಬಳಕೆದಾರರ ವ್ಯಾಪಕ ಪ್ರೀತಿ ಗಳಿಸುತ್ತಿದೆ.
ಜಪಾನಿನ ಮೃಗಾಲಯದಲ್ಲಿರುವ ಮಕಾಕ್ ಮರಿ ಈ ಪಂಚ್ ತಾಯಿ ತಿರಸ್ಕರಣೆಗೆ ಒಳಗಾಗಿ ಏಕಾಂಗಿಯಾಗಿತ್ತು. ಈ ವೇಳೆ ಅದು ಎಷ್ಟೇ ಪ್ರಯತ್ನ ಪಟ್ಟರೂ ಯಾವುದೇ ಕೋತಿಗಳು ಅದನ್ನು ತಮ್ಮ ಬಳಿ ಸೇರಿಸುತ್ತಿರಲಿಲ್ಲ. ಬದಲಿಗೆ ಬೇರೆ ಕೋತಿಗಳು ಇದಕ್ಕೆ ವ್ಯಾಪಕ ಕಿರುಕುಳ ನೀಡುತ್ತಿದ್ದವು. ಈ ಬಗ್ಗೆ ಪ್ರವಾಸಿಗರು ಕೂಡ ಮೃಗಾಲಯದ ಸಿಬ್ಬಂದಿಗೆ ದೂರು ನೀಡಿದ್ದರು.
ಇದರಿಂದಾಗಿ ಕೋತಿ ಮರಿ ಪಂಚ್ ಏಕಾಂಗಿತನ ಅನುಭವಿಸುತ್ತಿತ್ತು. ಹೀಗಾಗಿ ಮೃಗಾಲಯದ ಸಿಬ್ಬಂದಿ ಅದಕ್ಕೆ ಸ್ಟಫ್ಡ್ ಒರಾಂಗುಟನ್ ಬೊಂಬೆ ನೀಡಿದ್ದರು. ಅದನ್ನೇ ಕೋತಿ ಮರಿ ಪಂಚ್ ತನ್ನ ತಾಯಿ ಎಂದು ಪರಿಗಣಿಸಿ ಆಟವಾಡುತ್ತಿತ್ತು. ಆದಾಗ್ಯೂ ಇತರೆ ಕೋತಿಗಳ ಕಿರುಕುಳ ಮಾತ್ರ ನಿಂತಿರಲ್ಲಿಲ್ಲ. ಇದು ಮೃಗಾಲಯದ ಸಿಬ್ಬಂದಿಗೆ ತಲೆನೋವಾಗಿತ್ತು. ಉಳಿದ ಮಂಗಗಳ ಗುಂಪಿನೊಂದಿಗೆ ಸಂಯೋಜಿಸಲು ಅವರು ಹೆಣಗಾಡುತ್ತಿದ್ದು.
ಇಲ್ಲಿಂದ ಕರೆದುಕೊಂಡು ಹೋಗಿ
ಸಾಕಷ್ಟು ಬಾರಿ ಸಿಬ್ಬಂದಿ ಊಟ ನೀಡಲು ಆ ವಿಭಾಗದ ಒಳಗೆ ಬರುತ್ತಲೇ ಕೋತಿ ಮರಿ ಪಂಚ್, ಸಿಬ್ಬಂದಿ ಮೇಲೇರಿ ತನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎನ್ನುವ ಅರ್ಥದಲ್ಲಿ ವರ್ತಿಸುತ್ತಿತ್ತು. ಸಾಕಷ್ಟು ಬಾರಿ ಸಿಬ್ಬಂದಿ ಅದರ ಗಮನ ಬೇರೆಡೆ ತಿರುಗಿಸಿ ಬಳಿಕ ಅಲ್ಲಿಂದ ಹೊರಬಂದ ಉದಾಹರಣೆಗಳು ಕೂಡ ಇದೆ ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ತಾಯಿಯ ಪರಿತ್ಯಾಗ
ಮೃಗಾಲಯದ ಸಿಬ್ಬಂದಿಗಳ ಪ್ರಕಾರ ಕೋತಿ ಮರಿ ಪಂಚ್ ಜನನದ ಸಮಯದಲ್ಲಿ ಕೇವಲ 500 ಗ್ರಾಂ ತೂಕವಿತ್ತು, ಇದರ ತಾಯಿಗೆ ಇದು ಮೊದಲ ಗರ್ಭಧಾರಣೆಯಾಗಿದ್ದರಿಂದ ತಾಯಿ ಕೋತಿ ಇದನ್ನು ತಿರಸ್ಕರಿಸಿತ್ತು. ಹೀಗಾಗಿ ಮರಿಕೋತಿ ಹತ್ತಿರ ಬಂದಾಗಲೆಲ್ಲಾ ತಾಯಿ ಕೋತಿ ಅದನ್ನು ತಿರಸ್ಕರಿಸುತ್ತಿತ್ತು ಎಂದು ಹೇಳಿದ್ದಾರೆ.
ಪ್ರಾಣಿ ತಜ್ಞರ ಪ್ರಕಾರ ಕೆಲ ಕೋತಿ ಪ್ರಬೇಧಗಳಲ್ಲಿ ತಾಯಿ ಕೋತಿ ಮತ್ತೆ ಗರ್ಭಧಾರಣೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಮರಿಗಳನ್ನು ತಿರಸ್ಕರಿಸುತ್ತವೆ. ಇದೂ ಕೂಡ ಅಂತಹುದೇ ಪರಿಸ್ಥಿತಿ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಪಕ ಕಿರುಕುಳ
ಅತ್ತ ತಾಯಿಯಿಂದ ಬೇರ್ಪಟ್ಟ ಮರಿಕೋತಿ ಪಂಚ್ ಗೆ ಇತರೆ ಕೋತಿಗಳು ಕಿರುಕುಳ ನೀಡುತ್ತಿದ್ದವು. ಸಾಕಷ್ಟು ಕೋತಿಗಳು ಅದರ ಮೇಲೆ ದಾಳಿ ಮಾಡುತ್ತಿದ್ದವು. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹರಿದಾಡಿ, ಮರಿಕೋತಿ ಪಂಚ್ ಗೆ ವ್ಯಾಪಕಸಹಾನುಭೂತಿ ವ್ಯಕ್ತವಾಗಿತ್ತು.
ಕೊನೆಗೂ ಸಿಕ್ತ ತಾಯಿ ಪ್ರೀತಿ
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮೃಗಾಲಯದಿಂದ ಇದೀಗ ಸಕಾರಾತ್ಮಕ ಸುದ್ದಿ ಹೊರಬಂದಿದ್ದು, ಮರಿ ಕೋತಿ ಪಂಚ್ ಗೆ ಮತ್ತೊಂದು ಹೆಣ್ಣು ಕೋತಿಯಿಂದ ತಾಯಿ ಪ್ರೀತಿ ಸಿಗುತ್ತಿದೆ. ಹೆಣ್ಣುಕೋತಿ ಮರಿಕೋತಿ ಪಂಚ್ ಗೆ ಆತ್ಮೀಯ ಅಪ್ಪುಗೆ ಮೂಲಕ ತಾಯಿ ಪ್ರೀತಿನೀಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಆದಾಗ್ಯೂ ಮರಿಕೋತಿ ಪಂಚ್ ಗೆ ಈಗಲೂ ಇತರೆ ಕೋತಿಗಳಿಂದ ದಾಳಿ ಭೀತಿ ಮುಂದುವರೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮರಿಕೋತಿಯ ನೋಡಲು ಮೃಗಾಲಯಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.