

ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ 'ದಿ ರೆಬೆಲ್ ಕಿಡ್' ಎಂದೇ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೇಟರ್ ಅಪೂರ್ವ ಮುಖಿಜಾ, ತಮ್ಮ ಖಾಸಗಿ ಪಾರ್ಟಿಯ ವಿಡಿಯೋ ವೈರಲ್ ಆದ ಬಳಿಕ ತಾವು ಎದುರಿಸಿದ ಮಾನಸಿಕ ಸಂಕಷ್ಟದ ಬಗ್ಗೆ ಮಾತನಾಡಿದ್ದಾರೆ.
ಡಿಜೆ ಅಮಿನ್ ಜಾಜ್ ಅವರನ್ನು ಚುಂಬಿಸುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ, ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕುಳಿತು ಕಣ್ಣೀರಿಟ್ಟಿದ್ದ ಘಟನೆಯನ್ನು ಅವರು ತಮ್ಮ ಇತ್ತೀಚಿನ ವ್ಲಾಗ್‌ನಲ್ಲಿ ನೆನಪಿಸಿಕೊಂಡಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ನ್ಯೂಯಾರ್ಕ್‌ಗೆ ತೆರಳಿರುವ ಅಪೂರ್ವ, ವೈರಲ್ ಆಗಿರುವ ವಿಡಿಯೋ ಸುಮಾರು ಒಂದು ವರ್ಷದ ಹಿಂದಿನದು ಎಂದು ಸ್ಪಷ್ಟಪಡಿಸಿದ್ದಾರೆ. ಅದು ತಮ್ಮ ಮತ್ತು ಮತ್ತೊಬ್ಬ ವ್ಯಕ್ತಿಯ ನಡುವಿನ ಖಾಸಗಿ ಕ್ಷಣವಾಗಿದ್ದು, ಪಾರ್ಟಿಯಲ್ಲಿ ತಮ್ಮ ಅರಿವಿಲ್ಲದೆ ವಿಡಿಯೋ ಚಿತ್ರೀಕರಿಸಲಾಗಿತ್ತು ಎಂದು ಹೇಳಿದ್ದಾರೆ.
ಲೀಕ್ ಆಗಿದ್ದೇ ಆಘಾತ
“ಒಂದು ವರ್ಷದ ಹಿಂದಿನ ನನ್ನ ವಿಡಿಯೋವೊಂದು ಲೀಕ್ ಆಗಿದೆ. ಅದು ನನ್ನ ಮತ್ತು ಮತ್ತೊಬ್ಬ ವ್ಯಕ್ತಿಯ ನಡುವಿನ ಖಾಸಗಿ ಕ್ಷಣವಾಗಿತ್ತು. ನಮ್ಮನ್ನು ಚಿತ್ರೀಕರಿಸಲಾಗುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಅದು ಖಾಸಗಿ ಪಾರ್ಟಿಯಲ್ಲಿ ನಡೆದ ಘಟನೆ,” ಎಂದು ಅಪೂರ್ವ ತಿಳಿಸಿದ್ದಾರೆ.
ಈ ವಿಡಿಯೋ ಇತ್ತೀಚಿನದ್ದಲ್ಲ, ಸುಮಾರು ಒಂದು ವರ್ಷದ ಹಿಂದಿನದ್ದು. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕಣ್ಣೀರು
ವಿಡಿಯೋ ವೈರಲ್ ಆಗಿರುವ ವಿಚಾರ ತಮಗೆ ತಿಳಿದ ಕ್ಷಣದ ಬಗ್ಗೆಯೂ ಅಪೂರ್ವ ಮಾತನಾಡಿದ್ದಾರೆ. ಅವರು ಟರ್ಕಿಯಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದಾಗ ಲಂಡನ್‌ನಲ್ಲಿ ವಿಮಾನ ಬದಲಾಯಿಸಲು ತಂಗಿದ್ದರು. ಈ ವೇಳೆ ಅವರ ಮೊಬೈಲ್‌ಗೆ ನಿರಂತರವಾಗಿ ಸಂದೇಶಗಳು ಬರಲಾರಂಭಿಸಿದ್ದವು.
ಹೀಥ್ರೂ ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ಹಲವರು ವಿಡಿಯೋ ನೋಡಿದ್ದೀರಾ ಎಂದು ಕೇಳಿ ಸಂದೇಶ ಕಳುಹಿಸಿದ್ದರು. ಆದರೆ, ತಮ್ಮ ಪೋಷಕರೂ ಆ ವಿಡಿಯೋ ನೋಡಿದ್ದಾರೆ ಎಂಬುದು ತಿಳಿದಾಗ ಪರಿಸ್ಥಿತಿ ಮತ್ತಷ್ಟು ಕಠಿಣವಾಯಿತು ಎಂದು ಅವರು ಹೇಳಿದ್ದಾರೆ.
“ನನ್ನ ಪೋಷಕರು ಆ ವಿಡಿಯೋ ನೋಡಿದ್ದು ಇದೇ ಮೊದಲು. ನನಗೆ ಬಾಯ್‌ಫ್ರೆಂಡ್ ಇದ್ದಾನೆ ಎಂಬುದೂ ಅವರಿಗೆ ತಿಳಿದಿರಲಿಲ್ಲ. ಅವರಿಗೆ ಇದರ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಆಗ ನಾನು ಮಾನಸಿಕವಾಗಿ ಸಂಪೂರ್ಣ ಕುಗ್ಗಿಹೋಗಿದ್ದೆ. ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದೆ. ಅಲ್ಲಿ ಸಾವಿರಾರು ಜನರಿದ್ದರು ಎಂದು ನೆನಪಿದೆ. ನಾನು ಕೆಳಗೆ ಕುಳಿತು ಅಳುತ್ತಲೇ ಇದ್ದೆ,” ಎಂದು ಅಪೂರ್ವ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ವೈರಲ್ ಆಗಿದ್ದ ವಿಡಿಯೋ
ಸೆಪ್ಟೆಂಬರ್‌ನಲ್ಲಿ ಅಪೂರ್ವ ಮುಖಿಜಾ ಮತ್ತು ಪಾಡ್‌ಕಾಸ್ಟ್ ನಿರೂಪಕ ಹಾಗೂ ಡಿಜೆ ಅಮಿನ್ ಜಾಜ್ ಖಾಸಗಿ ಪಾರ್ಟಿಯಲ್ಲಿ ಚುಂಬಿಸುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಇದಕ್ಕೂ ಮುನ್ನ ಅಪೂರ್ವ ತಮ್ಮ ಬಾಯ್‌ಫ್ರೆಂಡ್ ಭೇಟಿಯಾಗಲು ನ್ಯೂಯಾರ್ಕ್‌ನಿಂದ ಟರ್ಕಿಗೆ ಪ್ರಯಾಣಿಸಿದ್ದಾಗಿ ಬಹಿರಂಗಪಡಿಸಿದ್ದರು. ಇದೀಗ ವೈರಲ್ ವಿಡಿಯೋ ಒಂದು ವರ್ಷದ ಹಿಂದಿನ ಖಾಸಗಿ ಕ್ಷಣಕ್ಕೆ ಸಂಬಂಧಿಸಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂಡಿಯಾಸ್ ಗಾಟ್ ಲೆಟೆಂಟ್
ಇನ್ನು ಅಪೂರ್ವ ಮುಖಿಜಾ ವಿವಾದ ಇದೇ ಮೊದಲೇನಲ್ಲ.. ಈ ಹಿಂದೆ ಇಂಡಿಯಾಸ್ ಗಾಟ್ ಲೆಟೆಂಟ್ ಕಾರ್ಯಕ್ರಮದಲ್ಲಿನ ತಮ್ಮ ಹೇಳಿಕೆಯಿಂದಲೂ ವಿವಾದಕ್ಕೆ ತುತ್ತಾಗಿದ್ದರು.