ಜೆರುಸಲೇಂ: ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಮಿಲಿಟರಿ ಮೂಲಸೌಕರ್ಯಗಳು ಇಸ್ರೇಲ್‌ಗೆ ಅಸ್ತಿತ್ವದ ಬೆದರಿಕೆಯಾಗಿದ್ದು, ಅದನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಾಗರಿಕರಿಗೆ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಐತಿಹಾಸಿಕ ನಾಯಕತ್ವಕ್ಕಾಗಿ ನಮ್ಮ ಮಹಾನ್ ಸ್ನೇಹಿತ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.
47 ವರ್ಷಗಳಿಂದ, ಅಯತೊಲ್ಲಾ ಆಡಳಿತ ನಮ್ಮ ರಕ್ತವನ್ನು ಚೆಲ್ಲಿದೆ. ಅನೇಕ ಅಮೆರಿಕನ್ನರನ್ನು ಕೊಂದಿದೆ. ಅಲ್ಲದೇ ತನ್ನದೇ ಆದ ಜನರನ್ನು ಕಗ್ಗೊಲೆ ಮಾಡಿದೆ. ಈ ಕೊಲೆಗಡುಕ ಭಯೋತ್ಪಾದಕ ಆಡಳಿತವು ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಬಲಿಷ್ಟವಾಗಲು ಅವಕಾಶ ನೀಡಬಾರದು. ಅದು ಮಾನವೀಯತೆಗೂ ಬೆದರಿಕೆಯನ್ನುಂಟುಮಾಡುತ್ತದೆ ಎಂದು ನೆತನ್ಯಾಹು ಹೇಳಿದ್ದಾರೆ.
ಒಪ್ಪಂದದ ಮಾತುಕತೆಗಾಗಿ ಯುಎಸ್ ಇರಾನ್‌ನೊಂದಿಗೆ ಎರಡು ಸುತ್ತಿನ ಮಾತುಕತೆಗಳನ್ನು ನಡೆಸಿತು ಆದರೆ ಇರಾನ್ ಪರಮಾಣು ಕಾರ್ಯಕ್ರಮದಿಂದ ನಿಲ್ಲಿಸುವಲ್ಲಿ ವಿಫಲವಾಗಿದೆ. ಯುಎಸ್ ಜೊತೆಗಿನ ನಮ್ಮ ಜಂಟಿ ಕಾರ್ಯಾಚರಣೆಯಿಂದ ಕೆಚ್ಚೆದೆಯ ಇರಾನಿನ ಜನರು ತಮ್ಮ ಹಣೆಬರಹವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಯುದ್ಧವು ಆಡಳಿತದ ವಿರುದ್ಧವಾಗಿದೆಯೇ ಹೊರತು ಇರಾನ್ ಜನರಲ್ಲ. ಅಲ್ಲಿರುವ ಎಲ್ಲಾ ವರ್ಗದ ಜನರ ವಿರುದ್ಧದ ದಬ್ಬಾಳಿಕೆಯ ತೊಡೆದುಹಾಕಲು ಮತ್ತು ಶಾಂತಿ ತರಲು ಸಮಯ ಬಂದಿದೆ ಎಂದಿದ್ದಾರೆ.
ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳನ್ನು ಪಾಲಿಸುವಂತೆ ಇಸ್ರೇಲ್ ನಾಗರಿಕರಿಗೆ ಅವರು ಸಲಹೆ ನೀಡಿದ್ದಾರೆ. ಮುಂಬರುವ Roaring Lion ದಿನಗಳು ನಮ್ಮೆಲ್ಲರಿಂದ ತಾಳ್ಮೆ ಮತ್ತು ಸ್ಥೈರ್ಯವನ್ನು ಬಯಸುತ್ತವೆ. ನಾವು ಒಟ್ಟಿಗೆ ನಿಲ್ಲುತ್ತೇವೆ, ಒಟ್ಟಿಗೆ ಹೋರಾಡುತ್ತೇವೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.