ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಹಸ್ಯ ನಿವಾಸದ ಮೇಲೆ ಡ್ರೋಣ್ ದಾಳಿ ನಡೆದಿದ್ದು, ಈ ದಾಳಿಯನ್ನು ಉಕ್ರೇನ್ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ.
ಈ ಕುರಿತ ವಿಡಿಯೋವನ್ನು ರಷ್ಯಾ ಬಿಡುಗಡೆ ಮಾಡಿದ್ದು, ಪುಟಿನ್ ಮನೆ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಪ್ರತಿಜ್ಞೆ ಮಾಡಿದೆ.
ಪುಟಿನ್ ನಿವಾಸದ ಮೇಲಿನ ದಾಳಿಗೆ ಸಾಕ್ಷಿಯಾಗಿ ರಷ್ಯಾದ ರಕ್ಷಣಾ ಸಚಿವಾಲಯವು ಈ ವಿಡಿಯೋವನ್ನು ಬಿಡುಗಡೆ ಮಾಡಿದೆ.
ವೀಡಿಯೋದಲ್ಲಿ ಹಿಮದಿಂದ ಆವೃತವಾದ ಅರಣ್ಯ ಪ್ರದೇಶದಲ್ಲಿ ಹಾನಿಗೊಳಗಾದ ಡ್ರೋನ್ ಬಿದ್ದಿರುವುದು ಕಂಡು ಬಂದಿದೆ. ಇದೇ ವೇಳೆ ಡ್ರೋಣ್ ದಾಳಿಯ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಇದೇ ವೇಳೆ ಪುಟಿನ್ ಮನೆ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ರಷ್ಯಾ ಸೇನೆ ಪ್ರತಿಜ್ಞೆ ಮಾಡಿದ್ದು, ಇನ್ನು "ಝೆಲೆನ್ಸ್ಕಿ ಜೀವಮಾನವಿಡೀ ಬಂಕರ್‌ನಲ್ಲೇ ಇರಲಿದ್ದಾರೆಂದು ಹೇಳಿದೆ. ಈ ಮೂಲಕ ಶೀಘ್ರದಲ್ಲೇ ಅದು ದೊಡ್ಡ ಕಾರ್ಯಾಚರಣೆಗೆ ಅಣಿಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ.
ಪುಟಿನ್ ಮನೆ ಮೇಲೆ ಉಕ್ರೇನ್ 91 ಡ್ರೋನ್ ಬಳಸಿ ದಾಳಿಗೆ ಯತ್ನಿಸಿದೆ. ಎಲ್ಲ ಡ್ರೋನ್ ನಾಶಪಡಿಸಿದ್ದಾಗಿ ಎಂದು ರಷ್ಯಾ ಆರೋಪಿಸಿತ್ತು. ಆದರೆ, ಉಕ್ರೇನ್ ಇದನ್ನು ‘ಸುಳ್ಳು’ ಎಂದು ಸಾರಾಸಗಟಾಗಿ ತಿರಸ್ಕರಿಸಿತ್ತು. ಇದು ಉಭಯ ದೇಶಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.
ಇದೀಗ ಉಕ್ರೇನ್‌ನ ದಾಳಿಗೆ ಸಾಕ್ಷಿಯಾಗಿ, ತನ್ನ ಪ್ರತಿದಾಳಿಗೆ ಡ್ರೋನ್ ಪತನವಾಗಿರುವ ವಿಡಿಯೋವನ್ನು ರಷ್ಯಾ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ.
ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಸೇನೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಫ್ಲೋರಿಡಾ ಮಾತುಕತೆ ಬಳಿಕ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮನೆ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ ಎಂಬ ಹಸಿ ಸುಳ್ಳನ್ನು ರಷ್ಯಾ ಸೇನೆ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದೆ.
ಯುರೋಪಿಯನ್ ಯೂನಿಯನ್ ಕೂಡ ರಷ್ಯಾ ಸೇನೆ ಬಿಡುಗಡೆ ಮಾಡಿರುವ ವಿಡಿಯೋ ವಿರುದ್ಧ ಧ್ವನಿ ಎತ್ತಿದ್ದು, ಕದನ ವಿರಾಮ ಒಪ್ಪಂದಕ್ಕೆ ಬರಲು ಮನಸ್ಸಿಲ್ಲದ ರಷ್ಯಾ ಯುದ್ಧವನ್ನು ಮುಂದುವರೆಸುವ ಷಡ್ಯಂತ್ರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಪ್ರಧಾನಿ ಮೋದಿ ಕಳವಳ
ಪುಟಿನ್ ನಿವಾಸದ ಮೇಲೆ ನಡೆದಿರುವ ಡ್ರೋಣ್ ದಾಳಿ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳವಳ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಅಧ್ಯಕ್ಷರ ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ವರದಿಗಳನ್ನು ಕೇಳಿ ತೀವ್ರ ಕಳವಳಗೊಂಡಿದ್ದೇನೆ. ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಸಾಧಿಸಲು ಅತ್ಯಂತ ಕಾರ್ಯಸಾಧ್ಯವಾದ ಮಾರ್ಗವನ್ನು ನೀಡುತ್ತವೆ. ಈ ಪ್ರಯತ್ನಗಳ ಮೇಲೆ ಗಮನಹರಿಸಲು ಮತ್ತು ಅವುಗಳನ್ನು ದುರ್ಬಲಗೊಳಿಸುವ ಯಾವುದೇ ಕ್ರಮಗಳನ್ನು ತಪ್ಪಿಸಲು ನಾವು ಸಂಬಂಧಪಟ್ಟ ಎಲ್ಲರನ್ನೂ ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.